7ರಂದು ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ

| Published : May 05 2024, 02:03 AM IST

ಸಾರಾಂಶ

ಮೇ ೬ರಂದು ಮತಪೆಟ್ಟಿಗೆಯೊಂದಿಗೆ ಮತಗಟ್ಟೆಗೆ ತೆರಳಲು (ಮಸ್ಟರಿಂಗ್) ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಉತ್ತರ ಕನ್ನಡ ಡಿಸಿ ಗಂಗೂಬಾಯಿ ಮಾನಕರ ಹೇಳಿದ್ದಾರೆ.

ಕಾರವಾರ: ಜಿಲ್ಲೆಯಲ್ಲಿ ಮೇ ೭ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಗಂಗೂಬಾಯಿ ಮಾನಕರ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಟ್ಟೂ ೧೬,೪೧,೧೫೬ ಮತದಾರರಿದ್ದಾರೆ. ಚುನಾವಣಾ ಕರ್ತವ್ಯಕ್ಕೆ ೬೯೩೯ ಅಧಿಕಾರಿಗಳನ್ನು, ಸಿಬ್ಬಂದಿ ನಿಯೋಜಿಸಲಾಗಿದೆ ಎಂದರು.ಒಟ್ಟೂ ೧೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ೧೯೭೭ ಮತಗಟ್ಟೆಗಳಿವೆ. ೮,೨೩,೬೦೪ ಪುರುಷ, ೮,೧೭,೫೩೬ ಮಹಿಳಾ, ೧೬ ತೃತೀಯ ಲಿಂಗಿ ಮತದಾರರಿದ್ದಾರೆ. ಒಟ್ಟೂ ೬೮ ಮಾದರಿ ಮತಗಟ್ಟೆಗಳನ್ನು ಸಿದ್ಧ ಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ೨೫ ಮಹಿಳಾ, ೧೭ ಯುವ, ೧೦ ಅಂಗವಿಕಲ, ೧೬ ಮಾದರಿ ಮತಗಟ್ಟೆಗಳಾಗಿದೆ. ಮಹಿಳಾ ಮತಗಟ್ಟೆಯಲ್ಲಿ ಮಹಿಳಾ ಅಧಿಕಾರಿಗಳು, ಸಿಬ್ಬಂದಿ, ಯುವ ಮತಗಟ್ಟೆಯಲ್ಲಿ ಯುವ ಅಧಿಕಾರಿಗಳು, ಸಿಬ್ಬಂದಿ, ಅಂಗವಿಕಲ ಮತಗಟ್ಟೆಯಲ್ಲಿ ಅಂಗವಿಕಲ ಅಧಿಕಾರಿಗಳು, ಸಿಬ್ಬಂದಿಯೇ ಮತದಾನದ ಪ್ರಕ್ರಿಯೆ ನಡೆಸಲಿದ್ದಾರೆ ಎಂದು ವಿವರಿಸಿದರು.

ವೆಬ್‌ಕಾಸ್ಟಿಂಗ್‌ಗೆ ೧೦೧೫, ಮೈಕ್ರೋ ಆಬ್ಸರ್ವರ್ ೩೦೩, ವಿಡಿಯೋಗ್ರಾಫರ್ ೨೧, ಸೆಕ್ಟರ್ ಆಫೀಸರ್ ೨೦೦ ಜನರು ಮತದಾನದ ದಿನ ಕೆಲಸ ಮಾಡಲಿದ್ದಾರೆ. ೮೫ ವರ್ಷ ಮೇಲ್ಪಟ್ಟ ಹಾಗೂ ಅಂಗವಿಕಲರಿಗೆ ಮನೆಯಿಂದ ಮತದಾನಕ್ಕೆ ಆಯೋಗ ಅವಕಾಶ ನೀಡಿತ್ತು. ಜಿಲ್ಲೆಯಲ್ಲಿ ೫೦೨೩ ಜನರಿದ್ದು, ೪೮೧೯ ಜನರು ಮತದಾನ ಮಾಡಿದ್ದಾರೆ. ೬೪ ಜನರು ಮೃತರಾಗಿದ್ದು, ೧೪೦ ಜನರು ವಿವಿಧ ಕಾರಣದಿಂದ ಮತದಾನ ಮಾಡಿಲ್ಲ. ಮೇ ೬ರಂದು ಮತಪೆಟ್ಟಿಗೆಯೊಂದಿಗೆ ಮತಗಟ್ಟೆಗೆ ತೆರಳಲು (ಮಸ್ಟರಿಂಗ್) ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಮಾಡಲಾಗಿದೆ. ಮತಗಟ್ಟೆಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ ಎಂದರು.

ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನಲ್ಲಿ ಮತದಾನ ಬಹಿಷ್ಕಾರ ಮಾಡುವ ಬಗ್ಗೆ ಸಾರ್ವಜನಿಕರು ಹೇಳಿದ್ದು, ಸ್ಥಳೀಯ ತಹಸೀಲ್ದಾರರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿ ಸಂಧಾನ ಮಾಡಿದ್ದಾರೆ. ಟೊಂಕಾ ಕಾಸರಗೋಡಿನಲ್ಲೂ ಸಿಇಒ ಈಶ್ವರಕುಮಾರ ಕಾಂದೂ ಮಾತುಕತೆ ಮಾಡಿದ್ದಾರೆ ಎಂದು ತಿಳಿಸಿದರು.

ಕಣದಲ್ಲಿರುವ ಅಭ್ಯರ್ಥಿಗಳು: ಕಾಂಗ್ರೆಸ್‌ನಿಂದ ಡಾ. ಅಂಜಲಿ ನಿಂಬಾಳಕರ, ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದಿಂದ ಗಣಪತಿ ಹೆಗಡೆ, ಕರ್ನಾಟಕ ರಾಷ್ಟ ಸಮಿತಿಯ ವಿನಾಯಕ ಮಂಗೇಶ ನಾಯ್ಕ, ಉತ್ತಮ ಪ್ರಜಾಕೀಯ ಪಕ್ಷದಿಂದ ಸುನೀಲ್ ಪವಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಕೃಷ್ಣಾಜಿ ಪಾಟೀಲ್, ಚಿದಾನಂದ ಹನುಮಂತಪ್ಪ ಹರಿಜನ, ನಿರಂಜನ್ ಉದಯಸಿನ್ಹಾ ಸರ್‌ದೇಸಾಯಿ, ನಾಗರಾಜ ಅನಂತ ಶಿರಾಲಿ, ಅರವಿಂದ ಗೌಡ, ಅವಿನಾಶ್ ನಾರಾಯಣ ಪಾಟೀಲ, ಕೃಷ್ಣ ಹನುಮಂತಪ್ಪ ಬಳೆಗಾರ, ರಾಜಶೇಖರ ಶಂಕರ ಹಿಂಡಲಗಿ