ತುಮಕೂರು: ಸಂಕ್ರಾಂತಿ ಸಂಭ್ರಮಕ್ಕೆ ಸಕಲ ಸಿದ್ಧತೆ

| Published : Jan 15 2024, 01:49 AM IST / Updated: Jan 15 2024, 05:41 PM IST

ಸಾರಾಂಶ

ಹೊಸ ವರ್ಷದ ಮೊದಲನೇ ಹಬ್ಬ ಇದಾಗಿದ್ದು, ಈ ಸುಗ್ಗಿ ಸಂಕ್ರಾಂತಿಯು ಗ್ರಾಮೀಣ ಸೊಗಡಿನ ಪ್ರತೀಕ. ಈ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಎಲ್ಲಿಲ್ಲದ ಸಂಭ್ರಮ. ಆದರೆ ಈ ಬಾರಿ ಬರ ಆವರಿಸಿರುವುದರಿಂದ ಸಂಕ್ರಾಂತಿ ಸೊಗಡಿಲ್ಲದಂತಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಒಂದೆಡೆ ಬರ, ಇನ್ನೊಂದೆಡೆ ಗಗನಕ್ಕೇರಿದ ಬೆಲೆ ಏರಿಕೆ. ಆದರೂ ಕಂಗೆಡದೆ ಈ ಬಾರಿಯ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ನಾಡಿನೆಲ್ಲೆಡೆ ಸಡಗರ ಸಂಭ್ರಮದಿಂದ ಆಚರಿಸಲು ಭರದ ಸಿದ್ದತೆಗಳು ನಡೆದಿವೆ.

ಮಕರ ಸಂಕ್ರಾಂತಿ ಹಬ್ಬವು ಅನ್ನದಾತರ ಸುಗ್ಗಿ ಕಾಲದ ಸಂಕೇತ. ಆದರೆ, ಈ ಬಾರಿ ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ ಬರ ಆವರಿಸಿದ್ದು, ಇದರ ನಡುವೆಯೂ ರೈತರು ಸೇರಿ ಜನಸಾಮಾನ್ಯರು ಸುಗ್ಗಿಹಬ್ಬವನ್ನು ಸಂಭ್ರಮದಿಂದ ಆಚರಿಸಲು ಸರ್ವ ಸನ್ನದ್ಧರಾಗಿದ್ದಾರೆ. 

ಮಾರುಕಟ್ಟೆಯಲ್ಲಿ ಹೂವು, ಹಣ್ಣು, ಕಬ್ಬು,ಕಡ್ಲೆಕಾಯಿ, ಆವರೆಕಾಯಿ, ಗೆಣಸು ಮತ್ತಿತರ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಸಹ ಕಂಗೆಡದೆ ಎಲ್ಲವನ್ನೂ ಖರೀದಿಸಿ ಹಬ್ಬ ಆಚರಿಸುವ ಸಂಭ್ರಮದಲ್ಲಿದ್ದಾರೆ.

ಹೊಸ ವರ್ಷದ ಮೊದಲನೇ ಹಬ್ಬ ಇದಾಗಿದ್ದು, ಈ ಸುಗ್ಗಿ ಸಂಕ್ರಾಂತಿಯು ಗ್ರಾಮೀಣ ಸೊಗಡಿನ ಪ್ರತೀಕ. ಈ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಎಲ್ಲಿಲ್ಲದ ಸಂಭ್ರಮ. ಆದರೆ ಈ ಬಾರಿ ಬರ ಆವರಿಸಿರುವುದರಿಂದ ಸಂಕ್ರಾಂತಿ ಸೊಗಡಿಲ್ಲದಂತಾಗಿದೆ.

ರಾಜ್ಯದಲ್ಲಿ ಉತ್ತಮ ಮಳೆಯಾಗದೆ ಬೆಳೆ ಕೈಗೆ ಸಿಗದೆ ರೈತ ಸಮೂಹ ಸಂಕಷ್ಟಕ್ಕೀಡಾಗಿದೆ. ಆದರೂ ಸುಗ್ಗಿ ಹಬ್ಬವನ್ನು ಸಂಭ್ರಮದಿಂದ ಆಚರಿಸಬೇಕು ಎನ್ನುವುದು ಅನ್ನದಾತರ ಆಶಯ. ಹಾಗಾಗಿ ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳ ಬೆಲೆ ಗಗನಕ್ಕೇರಿದ್ದರೂ ಲೆಕ್ಕಿಸದೆ ಖರೀದಿಸಲು ಮುಗಿಬೀಳುತ್ತಿರುವುದು ಕಂಡು ಬರುತ್ತಿದೆ.

‘ಎಳ್ಳು-ಬೆಲ್ಲ ತಿಂದು ಒಳ್ಳೆಯದು ಮಾತನಾಡು’ ಎಂಬ ಗಾದೆ ಮಾತಿದೆ. ಈ ಗಾದೆ ಮಾತು ಸಂಕ್ರಾಂತಿ ಹಬ್ಬದಂದು ಪ್ರಚಲಿತಕ್ಕೆ ಬರುತ್ತದೆ. ಎಳ್ಳು-ಬೆಲ್ಲ ಸಂಕ್ರಾಂತಿ ಹಬ್ಬದ ಪ್ರತೀಕವಾಗಿದೆ. ಹಾಗಾಗಿ ಅಂಗಡಿ, ಮುಂಗಟ್ಟುಗಳಲ್ಲಿ ಎಳ್ಳು-ಬೆಲ್ಲದ ಮಾರಾಟವೂ ಬಲು ಜೋರಾಗಿಯೇ ನಡೆದಿದೆ.

ಜಿಲ್ಲೆಯ ಎಲ್ಲ ಮಾರುಕಟ್ಟೆಗಳಲ್ಲಿ ಜನಜಂಗುಳಿ ಕಂಡು ಬರುತ್ತಿದೆ.

ಈ ಬಾರಿ ಬರ ಆವರಿಸಿದ್ದರೂ ಸಹ ಬೆಲೆ ಏರುತ್ತಲೇ ಇದೆ. ಮಾರುಕಟ್ಟೆಯಲ್ಲಿ ಒಂದು ಜತೆ ಕಬ್ಬಿನ ಜಲ್ಲೆ 100 ರು.ಗಳಿಂದ 120 ರು., ಆವರೆಕಾಯಿ 1 ತೂಕ (ಎರಡೂವರೆ ಕೆ.ಜಿ.) 200 ರಿಂದ 250 ರು., ಗೆಣಸು ಕೆ.ಜಿ.ಗೆ 30 ರಿಂದ 50 ರು., ಬಾಳೆಹಣ್ಣು ಕೆ.ಜಿ.ಗೆ 80 ರಿಂದ 100 ರು., ಸೇವಂತಿಗೆ ಹೂ ಮಾರು 100 ರಿಂದ 130 ರು., ಹೀಗೆ ಹಬ್ಬಕ್ಕೆ ಅಗತ್ಯವಾಗಿರುವ ಸಾಮಗ್ರಿಗಳ ದರ ಏರಿಕೆಯಾಗಿದೆ. ಆದರೂ ಮಾರುಕಟ್ಟೆಯಲ್ಲಿ ಖರೀದಿಯ ಭರಾಟೆ ಜೋರಾಗಿದೆ.

ಹಳ್ಳಿಗಳಲ್ಲಿ ಕಾಣದ ಸಂಭ್ರಮ: ಸಂಕ್ರಾಂತಿ ಹಬ್ಬ ಬಂತೆಂದರೆ ಹಳ್ಳಿಗಳಲ್ಲಿ ಸಂಭ್ರಮ, ಸಡಗರ ಎದ್ದು ಕಾಣುತ್ತಿತ್ತು. ಎತ್ತುಗಳಿಂದ ಜಮೀನು ಹದಗೊಳಿಸಿ, ಬಿತ್ತಿ, ಫಸಲು ಬಂದ ಮೇಲೆ ಬೆಳೆ ರಾಶಿ ಹಾಕಿ ಪೂಜೆ ಸಲ್ಲಿಸುವುದೇ ಒಂದು ಸಂಭ್ರಮ. 

ಆದರೆ ಆಧುನಿಕತೆ ಬೆಳೆದಂತೆ ಇತ್ತೀಚಿನ ದಿನಗಳಲ್ಲಿ ಎಲ್ಲವೂ ಯಂತ್ರಮಯವಾಗಿ ಬಿಟ್ಟಿದೆ. ಎತ್ತುಗಳಿಂದ ಜಮೀನು ಉಳುಮೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಈಗ ಜಮೀನು ಉಳುವುದರಿಂದ ಹಿಡಿದು ಮನೆಗೆ ರಾಶಿ ತರುವವರೆಗೂ ಯಂತ್ರಗಳನ್ನೇ ಅವಲಂಬಿಸಿದ್ದಾರೆ. 

ಬೆಳೆದ ಬೆಳೆ ಒಕ್ಕಣೆ ಮಾಡಲು ಕಣವೂ ಇಲ್ಲ, ರಾಶಿಯೂ ಇಲ್ಲ, ಅದಕ್ಕೆ ಪೂಜೆನೂ ಮಾಡುವವರಿಲ್ಲದಂತಾಗಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಈ ಹಿಂದೆ ಪ್ರತಿ ಮನೆಯಲ್ಲೂ ಒಂದು ಜತೆ ಎತ್ತುಗಳನ್ನು ಕಟ್ಟಲಾಗುತ್ತಿತ್ತು. ಇಂದು ಅಪ್ಪಟ ರೈತನಾಗಿದ್ದರೂ ಆತನ ಮನೆಯಲ್ಲಿ ಎತ್ತುಗಳು ಸಿಗುವುದು ವಿರಳ. ಹಾಗಾಗಿ ಸಂಕ್ರಾಂತಿ ಹಬ್ಬದಂದು ಎತ್ತುಗಳ ಕಿಚ್ಚು ಹಾಯಿಸುವುದೂ ಕಣ್ಮರೆಯಾಗುತ್ತಿದೆ.

ಆದರೆ ರಾಜ್ಯ ಸರ್ಕಾರ ಎಲ್ಲ ಜಿಲ್ಲಾ ಕೇಂದ್ರ ಹಾಗೂ ರಾಜಧಾನಿಯಲ್ಲಿ ಸಿರಿಧಾನ್ಯ ಮೇಳ ನಡೆಸುವ ಮೂಲಕ ಸುಗ್ಗಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ. ಹಳ್ಳಿಗಳಲ್ಲಿ ರೈತರು ರಾಶಿ ಹಾಕುತ್ತಾರೋ, ಬಿಡುತ್ತಾರೋ, ಸಿರಿಧಾನ್ಯ ಮೇಳದ ನೆಪದಲ್ಲಾದರೂ ರಾಗಿ ರಾಶಿಗಳನ್ನು ನೋಡುವ ಭಾಗ್ಯ ಜನರಿಗೆ ದೊರೆಯುತ್ತಿದೆ.

ಅದೇನೆ ಇರಲಿ, ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ನಾಡಿನ ಎಲ್ಲೆಡೆ ಸಂಭ್ರಮದಿಂದ ಆಚರಿಸಲು ಜನಸಾಮಾನ್ಯರು ಸಿದ್ದತೆಯಲ್ಲಿ ತೊಡಗಿದ್ದಾರೆ. ಮಾರುಕಟ್ಟೆಗಳು ಜನಜಂಗುಳಿಯಿಂದ ಗಿಜಗುಡುತ್ತಿದ್ದು, ವ್ಯಾಪಾರ, ಖರೀದಿ ಭರಾಟೆ ಬಲು ಜೋರಾಗಿದೆ.