ರಾಣಿಬೆನ್ನೂರಿನಲ್ಲಿ ಶಿವರಾತ್ರಿ ಹಬ್ಬಕ್ಕೆ ಸಕಲ ಸಿದ್ಧತೆ

| Published : Feb 26 2025, 01:05 AM IST

ಸಾರಾಂಶ

ಶಿವರಾತ್ರಿ ದಿನ ಉಪವಾಸ ವ್ರತ ಕೈಗೊಳ್ಳುವುದರಿಂದ ಮಂಗಳವಾರ ನಗರದಲ್ಲಿ ಜನರು ವಿವಿಧ ಬಗೆಯ ಹಣ್ಣುಗಳನ್ನು ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು.

ರಾಣಿಬೆನ್ನೂರು: ಶಿವನ ಆರಾಧನೆಯ ಶಿವರಾತ್ರಿ ಹಬ್ಬದ ಆಚರಣೆಗಾಗಿ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಭರದ ಸಿದ್ಧತೆಗಳು ನಡೆಯುತ್ತಿವೆ. ನಗರದ ವಿವಿಧ ಶಿವನ ದೇವಾಲಯಗಳಲ್ಲಿ ಶಿವರಾತ್ರಿ ಅಂಗವಾಗಿ ವಿಶೇಷ ಪೂಜೆ ಹಾಗೂ ಜಾಗರಣೆಗೆ ಸಕಲ ಏರ್ಪಾಡು ಮಾಡಲಾಗಿದೆ. ಸಿದ್ದೇಶ್ವರ ನಗರದ ಸಿದ್ದೇಶ್ವರ ಸ್ವಾಮಿ, ಮಾರ್ಕಂಡೇಶ್ವರ, ದೊಡ್ಡಪೇಟೆ ರಾಮಲಿಂಗೇಶ್ವರ, ಬಸವೇಶ್ವರ, ಮೇಡ್ಲೇರಿ ರಸ್ತೆಯ ಈಶ್ವರ, ಈಶ್ವರ ನಗರದ ಈಶ್ವರ, ಎರೆಕುಪ್ಪಿ ರಸ್ತೆಯ ನೀಲಕಂಠೇಶ್ವರ, ಗೌರಿಶಂಕರ ನಗರದ ಗೌರಿ ಶಂಕರ, ಕೆಇಬಿ ವಿನಾಯಕ ದೇವಸ್ಥಾನ ಹಾಗೂ ತಾಲೂಕಿನ ಲಿಂಗದಹಳ್ಳಿಯ ಸ್ಫಟಿಕಲಿಂಗ ದೇವಸ್ಥಾನ ಮುಂತಾದ ಕಡೆ ವಿಶೇಷ ಪೂಜೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಹಣ್ಣುಗಳ ಖರೀದಿ: ಶಿವರಾತ್ರಿ ದಿನ ಉಪವಾಸ ವ್ರತ ಕೈಗೊಳ್ಳುವುದರಿಂದ ಮಂಗಳವಾರ ನಗರದಲ್ಲಿ ಜನರು ವಿವಿಧ ಬಗೆಯ ಹಣ್ಣುಗಳನ್ನು ಖರೀದಿಯಲ್ಲಿ ತೊಡಗಿರುವುದು ಕಂಡುಬಂದಿತು. ಖರ್ಜೂರ 180ರಿಂದ ₹220 ಕೆಜಿ, ಪುಟಬಾಳೆ ₹35ರಿಂದ ₹40ಕ್ಕೆ ಡಜನ್, ದ್ರಾಕ್ಷಿ ₹60ರಿಂದ ₹80ಕ್ಕೆ ಕೆಜಿ, ವನಸ್ಪತಿ ಹಣ್ಣುಗಳು ₹60ಕ್ಕೆ ಕೆಜಿ, ಕಲ್ಲಂಗಡಿ ₹25- 30ಕ್ಕೆ ಕೆಜಿ, ಚಿಕ್ಕು ₹50- 60ಕ್ಕೆ ಕೆಜಿ, ದಾಳಿಂಬೆ ₹200ಕ್ಕೆ ಕೆಜಿ, ಕಿತ್ತಳೆ ₹40- 60ಕ್ಕೆ ಕೆಜಿ, ಸೇಬು ₹160ರಿಂದ ₹180ಕ್ಕೆ ಕೆಜಿ ದರದಂತೆ ಮಾರಾಟವಾದವು. ಹೂವುಗಳು: ಒಂದು ಮಾರು ಮಲ್ಲಿಗೆ, ಕನಂಕಾಬರ, ಸೇವಂತಿಗೆ ಹೂವಿಗೆ ₹20- 40, ಹೂವಿನ ಮಾಲೆಗಳು ₹20ರಿಂದ ₹30ರ ವರೆಗೆ ಮಾರಾಟವಾದವು.ಇಂದಿನಿಂದ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮ

ರಾಣಿಬೆನ್ನೂರು: ಸ್ಥಳೀಯ ಶ್ರೀ ಬೀರಲಿಂಗೇಶ್ವರ ಗಜಾನನ ಯುವಕ ಮಿತ್ರ ಮಂಡಳಿ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆ ಮುಂಭಾಗದ ಬೀರಲಿಂಗೇಶ್ವರ ಹೊರಗುಡಿ ಬಳಿಯ 31 ಅಡಿ ಎತ್ತರದ ಪರಮೇಶ್ವರ ಮೂರ್ತಿಯ ಆವರಣದಲ್ಲಿ ಶಿವರಾತ್ರಿ ಪ್ರಯುಕ್ತ ಫೆ. 26, 27ರಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಫೆ. 26ರಂದು ಸಂಜೆ 6 ಗಂಟೆಗೆ ಪೂಜೆ, 7ರಿಂದ ಸ್ಥಳೀಯ ತಾಂಡವ ಡ್ಯಾನ್ಸ್ ಮತ್ತು ಕಲಾ ಅಕಾಡೆಮಿ ತಂಡದವರಿಂದ ನೃತ್ಯ ಪ್ರದರ್ಶನ, ರಾತ್ರಿ 10ರಿಂದ ಹಾವೇರಿ ತಾಲೂಕು ದೇವಗಿರಿಯ ಪಂ. ಪುಟ್ಟರಾಜ ಗವಾಯಿಗಳ ಭಜನಾ ಸಂಘದ ವತಿಯಿಂದ ಭಜನಾ ಕಾರ್ಯಕ್ರಮ, ಫೆ. 27ರಂದು ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.