ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಪೊಲೀಸ್‌ ಭದ್ರತೆ

| Published : Jun 04 2024, 12:30 AM IST

ಮತ ಎಣಿಕೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ, ಪೊಲೀಸ್‌ ಭದ್ರತೆ
Share this Article
  • FB
  • TW
  • Linkdin
  • Email

ಸಾರಾಂಶ

ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಜೂ. ೪ರಂದು ಬೆಳಗ್ಗೆ ೮ ಗಂಟೆಯಿಂದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ. ಅಲ್ಲದೇ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ಹಾವೇರಿ:ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಜೂ. ೪ರಂದು ಬೆಳಗ್ಗೆ ೮ ಗಂಟೆಯಿಂದ ದೇವಗಿರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದು, ಮತ ಎಣಿಕೆಗೆ ಜಿಲ್ಲಾಡಳಿತ ಎಲ್ಲ ಸಿದ್ಧತೆ ಕೈಗೊಂಡಿದೆ. ಅಲ್ಲದೇ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.ಪ್ರತಿ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಈ ಉದ್ದೇಶಕ್ಕಾಗಿ ಎಂಟು ಕೊಠಡಿಗಳನ್ನು ಸಜ್ಜುಗೊಳಿಸಿದೆ. ಪ್ರತಿ ಕೊಠಡಿಯಲ್ಲಿ ೧೪ ಟೇಬಲ್‌ಗಳನ್ನು ಎಣಿಕೆಗೆ ವ್ಯವಸ್ಥೆ ಮಾಡಲಾಗಿದೆ. ಅಂಚೆ ಮತದಾನ ಹಾಗೂ ಸೇವಾ ಮತಗಳ ಎಣಿಕೆಗೂ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ವೀಕ್ಷಕರಿಗೆ, ಚುನಾವಣಾ ಅಧಿಕಾರಿಗಳಿಗೆ, ಮಾಧ್ಯಮ ಹಾಗೂ ಅಭ್ಯರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ.೧೯ ಸುತ್ತುಗಳ ಮತ ಎಣಿಕೆ:ಶಿರಹಟ್ಟಿ-೧೮, ಗದಗ-೧೬, ರೋಣ-೨೦, ಹಾನಗಲ್ಲ-೧೮, ಹಾವೇರಿ-೧೯, ಬ್ಯಾಡಗಿ-೧೮, ಹಿರೇಕೆರೂರು-೧೭ ಹಾಗೂ ರಾಣಿಬೆನ್ನೂರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ೧೯ ಸುತ್ತುಗಳಲ್ಲಿ ನಡೆಯಲಿದೆ. ಪ್ರತಿ ವಿಧಾನಸಭಾ ಕ್ಷೇತ್ರದ ಆಯ್ದ ಐದು ಮತಗಟ್ಟೆಗಳ ವಿವಿಪ್ಯಾಟ್‌ಗಳ ಮತ ಎಣಿಕೆ ನಡೆಯಲಿದೆ.ಮತ ಎಣಿಕೆ ಕೇಂದ್ರದಲ್ಲಿ ಮೊಬೈಲ್ ನಿಷೇಧ: ಪ್ರತಿ ಮತ ಎಣಿಕೆ ಟೇಬಲ್‌ಗೆ ಅಭ್ಯರ್ಥಿಗಳು ಅಥವಾ ಆಯಾ ರಾಜಕೀಯ ಪಕ್ಷಗಳ ಏಜೆಂಟರ ನೇಮಕಕ್ಕೆ ಈಗಾಗಲೇ ತಿಳಿಸಲಾಗಿದೆ. ಏಜೆಂಟರು ೧೮ ವರ್ಷ ಮೇಲ್ಪಟ್ಟವರಾಗಿರಬೇಕು, ನಗರ ಸ್ಥಳೀಯ ಸಂಸ್ಥೆಗಳ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಏಜೆಂಟ್‌ರಾಗಿ ನೇಮಕ ಮಾಡಬಹುದು. ನಗರಸಭೆ ಹಾಗೂ ಜಿಲ್ಲಾ ಪಂಚಾಯತಿ ಅಧ್ಯಕ್ಷರು, ಸದಸ್ಯರು ಏಜೆಂಟ್‌ರಾಗಲು ಅವಕಾಶವಿಲ್ಲ. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್, ಬೆಂಕಿಪಟ್ಟಣ, ನೀರಿನ ಬಾಟಲ್, ಚಾಕು, ಚೂಪಾದ ಆಯುಧ, ಅಗ್ನಿಜನ್ಯ ವಸ್ತುಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಆಗಮಿಸಲು ನಾಲ್ಕು ಪ್ರವೇಶ ದ್ವಾರಗಳನ್ನು ಸ್ಥಾಪಿಸಲಾಗಿದೆ.ಎಣಿಕೆ ಕಾರ್ಯಕ್ಕೆ ೮೦೦ ಸಿಬ್ಬಂದಿ ಮತ ಎಣಿಕೆ ಕಾರ್ಯಕ್ಕಾಗಿ ಮತ ಎಣಿಕೆ ಮೇಲ್ವಿಚಾರಕರನ್ನು, ಎಣಿಕೆ ಸಹಾಯಕರನ್ನು ಹಾಗೂ ಸೂಕ್ಷ್ಮ ವೀಕ್ಷಕರನ್ನು ನೇಮಿಸಲಾಗಿದೆ. ಟ್ಯಾಬುಲೇಷನ್, ಸ್ಟ್ರಾಂಗ್ ರೂಂ ಸಿಬ್ಬಂದಿ ಒಳಗೊಂಡಂತೆ ಮತ ಎಣಿಕೆ ಕಾರ್ಯಕ್ಕೆ ಒಟ್ಟಾರೆಯಾಗಿ ೮೦೦ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮತಗಟ್ಟೆ ಅಧಿಕಾರಿಗಳು, ಎಣಿಕೆ ಸಿಬ್ಬಂದಿ, ಅಧಿಕಾರಿ, ಪೊಲೀಸ್, ರಾಜಕೀಯ ಪಕ್ಷಗಳ ಏಜೆಂಟರಿಗೆ ಪ್ರತ್ಯೇಕ ೧೧ ಬಣ್ಣದ ಪಾಸ್ ವ್ಯವಸ್ಥೆ ಮಾಡಲಾಗಿದೆ. ಪಾಸ್ ಹೊಂದಿದವರಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ನಿಷೇಧಾಜ್ಞೆ: ಜಿಲ್ಲಾದ್ಯಂತ ಸೋಮವಾರ ಸಂಜೆ ೬ಗಂಟೆಯಿಂದ ಜೂ.೫ರ ಬೆಳಗ್ಗೆ ೬ ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜೂ. ೪ರ ಬೆಳಗ್ಗೆ ೬ ಗಂಟೆಯಿಂದ ಜೂ.೭ರ ಬೆಳಗ್ಗೆ ೬ ಗಂಟೆವೆರೆಗೆ ವಿಜಯೋತ್ಸವ ಮೆರವಣಿಗೆ ನಿಷೇಧಿಸಲಾಗಿದೆ ಹಾಗೂ ಜೂ. ೪ರ ಬೆಳಗ್ಗೆ ೬ ಗಂಟೆಯಿಂದ ಜೂ. ೫ರ ಬೆಳಗ್ಗೆ ೬ ಗಂಟೆವರೆಗೆ ಮದ್ಯಮಾರಾಟ ಮತ್ತು ಮದ್ಯಪಾನ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.