ಸಾರಾಂಶ
ನರೇಗಲ್ಲ: ಜ.19,20 ಹಾಗೂ 21 ರಂದು ಗಜೇಂದ್ರಗಡದಲ್ಲಿ ಜರುಗುವ ಜಿಲ್ಲಾ ಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ. 19 ರಂದು ಬೆಳಗ್ಗೆ 10 ಕ್ಕೆ ಜಕ್ಕಲಿಯ ಅಂದಾನಪ್ಪ ದೊಡ್ಡಮೇಟಿಯವರ ಮನೆಯಿಂದ ಚಾಲನೆ ದೊರೆಯಲಿದೆ ಎಂದು ಮಲ್ಲಣ್ಣ ಮೇಟಿ ಹೇಳಿದರು.
ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಶಾಲೆಯ ಮಹಾತ್ಮ ಗಾಂಧಿ ಸಮುದಾಯ ಭವನದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.ಕಾಯಕ್ರಮಕ್ಕೆ ಶಾಸಕ ಜಿ.ಎಸ್. ಪಾಟೀಲ ಚಾಲನೆ ನೀಡಲಿದ್ದಾರೆ. ಅದಕ್ಕೂ ಮುಂಚೆ ಜಕ್ಕಲಿ ಗ್ರಾಮವನ್ನು ಮದುವಣಗಿತ್ತಿಯಂತೆ ಶೃಂಗರಿಸಲು ತಾಲೂಕಾಡಳಿತ ವರ್ಗ, ಜಕ್ಕಲಿ ಗ್ರಾಪಂ ಆಡಳಿತವರ್ಗ, ಗ್ರಾಮದ ಮುಖಂಡರು, ವಿವಿಧ ಪಕ್ಷದ ನಾಯಕರು, ಆಶಾಕಾಯಕರ್ತೆಯರು, ಅಂಗನವಾಡಿ ಕಾಯಕರ್ತೆಯರು, ಶಾಲಾ ಸಿಬ್ಬಂದಿ ಸಕಲ ಸಿದ್ಧತೆಯಲ್ಲಿದ್ದಾರೆ ಎಂದರು.
ಜಕ್ಕಲಿ ಗ್ರಾಮ ಮಹಾತ್ಮರು ನಡೆದಾಡಿದ ನೆಲ ಇಲ್ಲಿಂದ ಕನ್ನಡ ಸಾಹಿತ್ಯ ಪರಿಷತ್ತಿನ ರಥ ಹಾಗೂ ಜ್ಯೋತಿ ಹೊರಡಲಿದ್ದು, ಅದಕ್ಕೆ ಸಕಲ ಸಿದ್ಧತೆ ಕೈಗೊಳ್ಳುವ ಮೂಲಕ ಮೆರವಣಿಗೆ ಸಾಗುವ ಮಾರ್ಗದಲ್ಲಿ ಸ್ವಚ್ಛತೆ ಹಾಗೂ ಯಾವುದೇ ಅಡಚಣೆಯಾಗದಂತೆ ಕ್ರಮ ಕೈಗೊಳ್ಳಬೇಕು. ಊರಿನ ಪ್ರಮುಖ ಸ್ಥಳಗಳಲ್ಲಿ ತಳಿರು ತೋರಣ ಕಟ್ಟಿಸುವುದರ ಜತೆಗೆ ಊರನ್ನು ಮದುವಣಗಿತ್ತಿಯಂತೆ ಅಲಂಕರಿಸಿ ಆಗಮಿಸುವ ಕನ್ನಡ ಮನಸ್ಸುಗಳಿಗೆ ತೃಪ್ತಿ ಉಂಟಾಗುವಂತೆ ನಾವೆಲ್ಲ ಮಾಡಬೇಕಿದೆ ಎಂದು ತಿಳಿಸಿದರು.ತಾಪಂ ಮಾಜಿ ಸದಸ್ಯ ಸಂದೇಶ ದೊಡ್ಡಮೇಟಿ ಮಾತನಾಡಿ, ಈ ಕಾರ್ಯಕ್ರಮ ನಮ್ಮೂರಿನ ಹೆಮ್ಮೆ,ಸಾಹಿತ್ಯ ಪರಿಷತ್ತಿನ ತೇರು ನಮ್ಮಲ್ಲಿಂದ ಹೊರಡುತ್ತಿರುವುದರಿಂದ ಗ್ರಾಮದ ಕೆಲವು ಯುವಕರ ಸಹಕಾರದಿಂದ ತಳಿರು ತೋರಣದ ವ್ಯವಸ್ಥೆ, ಬ್ಯಾನರ್ ಬಟಿಂಕ್ಸ್ ಕಟ್ಟಿಸುವುದರ ಜತೆಗೆ ಗ್ರಾಮದ ಅಲಂಕಾರಕ್ಕೂ ಮುಂದಾಗುತ್ತೇವೆ. ಅದಕ್ಕೆ ಬೇಕಾಗುವ ಧ್ವಜ ಗ್ರಾಮದಾದ್ಯಂತ ಪ್ರಮುಖ ಬೀದಿಗಳಲ್ಲಿ ಕಟ್ಟಿಸಲು ಗ್ರಾಪಂ ಸಹಕಾರ ನೀಡಬೇಕು ಎಂದರು.
ಗ್ರಾಪಂ ಮಾಜಿ ಸದಸ್ಯ ಪ್ರಕಾಶ ವಾಲಿ ಮಾತನಾಡಿ, ಜ. 18 ಕ್ಕೆ ಗ್ರಾಮಕ್ಕಾಗಮಿಸುವ ಸಾಹಿತ್ಯ ಪರಿಷತ್ತಿನ ಜ್ಯೋತಿಗೆ ಗ್ರಾಮಸ್ಥರನ್ನೊಳಗೊಂಡಂತೆ ಪ್ರಮುಖರೆಲ್ಲರೂ ಸೇರಿ ಗ್ರಾಪಂ ಮುಂಭಾಗದಲ್ಲಿ ಸ್ವಾಗತಿಸಲು ಸಕಲ ಸಿದ್ಧತೆ ಕೈಗೊಳ್ಳಬೇಕು ಎಂದು ತಿಳಿಸಿದರು.ತಾಪಂ ಇಒ ಚಂದ್ರಶೇಖರ ಕಂದಕೂರ ಮಾತನಾಡಿ, ಜ.18 ರಂದು ಜ್ಯೋತಿಗೆ ಸ್ವಾಗತ ಹಾಗೂ ಜ.19 ರಂದು ಚಾಲನೆಗೆ ಸಕಲ ಸಿದ್ಧತೆಯ ಕುರಿತು ಪಿಡಿಒ ಎಸ್.ಎಸ್.ರಿತ್ತಿ ಹಾಗೂ ಗ್ರಾಪಂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು.
ರೋಣ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಆರ್.ಎಸ್. ನರೇಗಲ್ಲ, ರೋಣ ತಾಲೂಕು ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ, ಗ್ರಾಪಂ ಅಧ್ಯಕ್ಷೆ ಗಂಗಮ್ಮ ಜಾಲಣ್ಣವರ, ಮಲ್ಲಿಕಾರ್ಜುನ ಮೇಟಿ, ಗುರುಮೂರ್ತಿ ಮಂಟಯ್ಯನವಮಠ, ಶಿವಶರಣಪ್ಪ ಬೂದಿಹಾಳ, ಅಶೋಕ ಯಾವಗಲ್ಲ, ಚನ್ನಬಸಪ್ಪ ದೊಡ್ಡಮೇಟಿ, ಹನಮಪ್ಪ ಜಂಗಣ್ಣವರ, ಅಂದಪ್ಪ ಕಡ್ನಳ್ಳಿ, ಯಮನೂರಸಾಬ ನದಾಫ, ಮೃತ್ಯುಂಜಯ ಧಡೇಸೂರಮಠ, ಮಹೇಶ್ವರಪ್ಪ ಕೋರಿ, ವೀರಭದ್ರಪ್ಪ ಗಾಣಿಗೇರ, ಗ್ರಾಮ ಲೆಕ್ಕಾಧಿಕಾರಿ ಜಗದೀಶ.ಟಿ ಹಾಗೂ ಆಶಾ ಕಾಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಮುಖಂಡರು ಇದ್ದರು.ಜಿಲ್ಲಾ ಹಾಗೂ ಗಜೇಂದ್ರಗಡ ತಾಲೂಕು ಕಸಾಪ ಪದಾಧಿಕಾರಿಗಳು ಗೈರು: ಗಜೇಂದ್ರಗಡದಲ್ಲಿ ಜರುಗುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಿದ್ಧತೆ ಕುರಿತು ಜಕ್ಕಲಿ ಗ್ರಾಮದಲ್ಲಿ ನಡೆದ ಪೂರ್ವಭಾವಿ ಸಭೆಗೆ ರೋಣ ತಾಲೂಕು ಅಧಿಕಾರಿಗಳು, ಕಸಾಪ ಅಧ್ಯಕ್ಷರು ಆಗಮಿಸಿದ್ದರು. ಆದರೆ ಇದಕ್ಕೆ ಸಂಬಂಧಿಸಿದ ಗಜೇಂದ್ರಗಡದ ತಾಲೂಕಾಧ್ಯಕ್ಷ ಹಾಗೂ ತಾಲೂಕು ಕಸಾಪ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಕಸಾಪ ಪದಾಧಿಕಾರಿಗಳು ಆಗಮಿಸದಿರುವುದು ವಿಪರ್ಯಾಸ.