ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ಸಕಲ ಸಿದ್ಧತೆ

| Published : Apr 14 2025, 01:16 AM IST

ಸಾರಾಂಶ

ಅಂಬೇಡ್ಕರ್‌ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುವ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ, ಪೊಲೀಸ್ ಇನ್ಸ್‌ಪೆಕ್ಟರ್‌ ಮುದ್ದು ಮಹದೇವ ಅವರ ನೇತೃತ್ವದಲ್ಲಿ ದಲಿತಪರ ಸಂಘಟನೆಗಳ ಮುಖಂಡರನ್ನು ಒಳಗೊಂಡಂತೆ ಪೂರ್ವಭಾವಿ ಸಭೆ ನಡೆಯಿತು.

14ರಂದು ಬೆಳಿಗ್ಗೆ 10.30ಕ್ಕೆ ವಿವೇಕಾನಂದ ವೃತ್ತದಿಂದ ಸ್ತಬ್ಧಚಿತ್ರಗಳ ಸಹಿತ ಮೆರವಣಿಗೆ ನಡೆಸಲಾಗುವುದು. ಮಹಾತ್ಮಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಅಂಬೇಡ್ಕರ್ ಸರ್ಕಲ್‌ಗೆ ತೆರಳಿ ಸಂವಿಧಾನ ಶಿಲ್ಪಿಯ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಗುವುದು. ವಾಪಸ್ ಖಾಸಗಿ ಬಸ್ ನಿಲ್ದಾಣಕ್ಕೆ ಮೆರವಣಿಗೆ ಆಗಮಿಸಿ ಸಭಾ ಕಾರ್ಯಕ್ರಮ ನಡೆಸಲಾಗುವುದು ಎಂದು ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಪ್ರಮುಖರು ಸಭೆಗೆ ಮಾಹಿತಿ ನೀಡಿದರು.

ಅಂಬೇಡ್ಕರ್ ಜಯಂತಿ ಸೋಮವಾರ ಇರುವುದರಿಂದ ಪಟ್ಟಣ ವ್ಯಾಪ್ತಿಯ ಮದ್ಯದಂಗಡಿಗಳನ್ನು ಸಂಜೆಯವರೆಗೆ ಬಂದ್ ಮಾಡಿಸುವ ಬಗ್ಗೆ ಸಭೆಯಲ್ಲಿದ್ದ ಕೆಲವರು ಸಲಹೆ ನೀಡಿದರು. ಈ ಬಗ್ಗೆ ಇಲಾಖೆಯ ಮೇಲಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ವಹಿಸಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್‌ ಮುದ್ದು ಮಹದೇವ ಹೇಳಿದರು.

ವಾರದ ಸಂತೆ ದಿನವಾದ್ದರಿಂದ ಪಟ್ಟಣದಲ್ಲಿ ಹೆಚ್ಚಿನ ವಾಹನ ಹಾಗೂ ಜನಸಂದಣಿ ಏರ್ಪಡಲಿದೆ. ಸ್ತಬ್ಧಚಿತ್ರಗಳ ಮೆರವಣಿಗೆ ಸಂದರ್ಭ ಕೆಲವು ರಸ್ತೆಗಳನ್ನು ಏಕಮುಖ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಉತ್ತಮ ಎಂದು ಪದಾಧಿಕಾರಿಗಳು ತಿಳಿಸಿದರು.

ಅಂಬೇಡ್ಕರ್ ಜಯಂತಿಯನ್ನು ಅರ್ಥಪೂರ್ಣವಾಗಿ ನಡೆಸುವ ಸಂಬಂಧ ಪೊಲೀಸ್ ಇಲಾಖೆ ಎಲ್ಲಾ ರೀತಿಯ ಸಹಕಾರ ನೀಡಲಿದೆ ಎಂದು ಮುದ್ದು ಮಹದೇವ ತಿಳಿಸಿದರು.

ಸಭೆಯಲ್ಲಿ ಅಂಬೇಡ್ಕರ್ ಜಯಂತಿ ಆಚರಣಾ ಸಮಿತಿಯ ಪದಾಧಿಕಾರಿಗಳಾದ ಬಿ.ಈ. ಜಯೇಂದ್ರ, ಡಿ.ಎಸ್. ನಿರ್ವಾಣಪ್ಪ, ಜಯಪ್ಪ ಹಾನಗಲ್ಲು, ಟಿ.ಈ. ಸುರೇಶ್, ದಲಿತ ಸಂಘಟನೆಗಳ ಮುಖಂಡರಾದ ಎಸ್.ಎ. ಪ್ರತಾಪ್, ಗಿರೀಶ್, ಬಿ.ಬಿ. ಆನಂದ್, ಯೋಗೇಶ್, ಪ್ರಮುಖರಾದ ಚಿಂತು, ಪ್ರವೀಣ್, ಸುರೇಶ್, ಸುಬ್ರಮಣಿ ಸೇರಿದಂತೆ ಇತರರು ಇದ್ದರು.