ಸಾರಾಂಶ
ಕೋವಿಡ್ ನಿಯಂತ್ರಣ ಕುರಿತು ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್. ಸೆಲ್ವಮಣಿಕನ್ನಡಪ್ರಭ ವಾರ್ತೆ ಶಿವಮೊಗ್ಗ
ನೆರೆಯ ರಾಜ್ಯಗಳಲ್ಲಿ ಕೋವಿಡ್ ಉಪತಳಿ ವರದಿಯಾದ ಹಿನ್ನೆಲೆಯಲ್ಲಿ ಎಲ್ಲರೂ ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಹಾಗೂ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಕೋವಿಡ್ -19 ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳುವ ಕುರಿತು ಅಧಿಕಾರಿಗ ಳೊಂದಿಗೆ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಕೋವಿಡ್ ಹೊಸ ರೂಪಾಂತರಿ ತಳಿಯ ಬಗ್ಗೆ ಜನರಲ್ಲಿ ಹೆಚ್ಚಿನ ಆತಂಕ ಬೇಡ. ರಾಜ್ಯ ಸರ್ಕಾರ ನೀಡಿರುವ ಮಾರ್ಗಸೂಚಿ ಮತ್ತು ಸಲಹಾತ್ಮಕ ಕ್ರಮಗಳನ್ನು ಪಾಲಿಸಬೇಕು. 60 ವರ್ಷ ಮೇಲ್ಪಟ್ಟವರು, ಗರ್ಭಿಣಿಯರು, ಮಕ್ಕಳು, ಇತರೆ ತೀವ್ರತರ ಕಾಯಿಲೆಯಿಂದ ಬಳಲುವವರು ಹೊರಾಂಗಣ ಪ್ರದೇಶಕ್ಕೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸ್ವಚ್ಛತೆ ಕಡೆ ಗಮನ ಹರಿಸಬೇಕು ಎಂದು ಹೇಳಿದರು.ಎಲ್ಲ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್ ಬೆಡ್‌ಗಳು, ಐಸಿಯು, ವೆಂಟಿಲೇಟರ್, ಆಕ್ಸಿಜನ್, ಆ್ಯಂಬುಲೆನ್ಸ್, ಪ್ರಯೋಗಾಲಯ, ಅಗತ್ಯ ಔಷಧಿ ಇತರೆ ಎಲ್ಲ ವ್ಯವಸ್ಥೆ ಸಿದ್ಧವಿರುವಂತೆ ನೋಡಿಕೊಳ್ಳಬೇಕು. ಅಗತ್ಯ ಸಂಖ್ಯೆಯ ಪರೀಕ್ಷೆಗಳನ್ನು ನಡೆಸಲು ಪ್ರಯೋಗಾಲಯ ಹಾಗೂ ಆರ್‌ಟಿಪಿಸಿಆರ್ ಕಿಟ್‌ಗಳನ್ನು ಸಿದ್ಧಪಡಿಸಿಕೊಳ್ಳಬೇಕು. ಪಿಎಚ್ಸಿಯಿಂದ ಹಿಡಿದು ಎಲ್ಲ ಆಸ್ಪತ್ರೆಗಳಲ್ಲಿ ಎಸ್‌ಎಆರ್‌ಐ ಮತ್ತು ಐಎಲ್ ಐ ಲಕ್ಷಣಗಳುಳ್ಳ ಪ್ರಕರಣಗಳನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಹೊರ ರಾಜ್ಯ ಮತ್ತು ದೇಶಗಳಿಗೆ ಪ್ರಯಾಣ ಮಾಡುವವರು ಅಲ್ಲಿನ ಪರಿಸ್ಥಿತಿ ಅರಿತು ಪ್ರಯಾಣ ಬೆಳೆಸಬೇಕು ಎಂದು ಹೇಳಿದರು.
ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಕೋವಿಡ್ ಹೊಸ ರೂಪಾಂತರಿ ತಳಿಯ ತೀವ್ರತೆ ಬಗ್ಗೆ ದಾಖಲೆ ಇಲ್ಲ. ಆದ್ದರಿಂದ ಗಾಬರಿ ಮತ್ತು ಆತಂಕ ಪಡುವ ಅಗತ್ಯವಿಲ್ಲ. ನಮ್ಮ ಜಿಲ್ಲೆಯಲ್ಲಿ 130 ಕೋವಿಡ್ ಪರೀಕ್ಷೆ ಗುರಿ ನೀಡಲಾಗಿದೆ. ಡಿಸೆಂಬರ್ 1 ರಿಂದ 21 ರವರೆಗೆ ಒಟ್ಟು 554 ಕೋವಿಡ್ ಪರೀಕ್ಷೆ ಮಾಡಲಾಗಿದೆ.ಮೆಗ್ಗಾನ್ ಆಸ್ಪತ್ರೆಯಲ್ಲಿ 950 ಆಕ್ಸಿಜನ್ ಬೆಡ್‌ಗಳಿವೆ. 100ಕ್ಕೂ ಹೆಚ್ಚು ಐಸಿಯು ಬೆಡ್, 80 ವೆಂಟಿಲೇಟರ್, 1000 +350 ಲೀಟರ್ ಸಾಮರ್ಥ್ಯದ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕ್ ಇದೆ. ಎಲ್ಲಾ ತಾಲೂಕುಗಳಲ್ಲೂ 6 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್ ಗಳಿವೆ. ತಾಲೂಕು ಆಸ್ಪತ್ರೆಗಳಲ್ಲಿ ಒಟ್ಟು 1560 ಬೆಡ್ ಗಳಿದ್ದು, 250 ಐಸಿಯು ಬೆಡ್ ಗಳು, 140 ವೆಂಟಿಲೇಟರ್ ಬೆಡ್, 40 ವೆಂಟಿಲೇಟರ್, 8 ಬಿಎಲ್ಎಂಸ್ ಆ್ಯಂಬುಲೆನ್ಸ್, 4 ಎಎಲ್ಎುಸ್ ಆಂಬುಲೆನ್ಸ್, 611 ಆಕ್ಸಿಜನ್ ಸಿಲಿಂಡರ್, 7 ಪಿಎಸ್ಎಬ ಪ್ಲಾಂಟ್ ಗಳಿವೆ. ಜಿಲ್ಲೆಯ ನಾಲ್ಕು ಕಡೆ ಮ್ಯಾನಿಫೋಲ್ಡ್ ವ್ಯವಸ್ಥೆ ಇದೆ. ಪ್ರತಿ ತಾಲೂಕಿನಲ್ಲಿ 50 ಜಂಬೊ ಸಿಲಿಂಡರ್, ಪ್ರತಿ ಪಿಎಚ್ ಸಿಗಳಲ್ಲಿ 15 ರಿಂದ 20 ಆಕ್ಸಿಜನ್ ಕಾನ್ಸಂಟ್ರೇಟರ್ ಇವೆ. ನುರಿತ ಸಿಬ್ಬಂದಿ ಇದ್ದು, ಔಷಧಿ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಉಪ ವಿಭಾಗಾಧಿಕಾರಿ ಸತ್ಯನಾರಾಯಣ್, ಜಿ.ಪಂ ಉಪ ಕಾರ್ಯದರ್ಶಿ ಸುಜಾತ, ತಹಸೀಲ್ದಾರರು, ಮೆಗ್ಗಾನ್ ಬೋಧನಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು, ಜಿಲ್ಲಾ ಶಸ್ತ್ರಚಿಕಿತ್ಸಕರು, ಜಿಲ್ಲಾ ಹಾಗೂ ತಾಲೂಕು ವೈದ್ಯಾಧಿಕಾರಿಗಳು ಹಾಜರಿದ್ದರು.