ಪಟ್ಟಲದಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ

| Published : Apr 15 2025, 12:52 AM IST

ಪಟ್ಟಲದಮ್ಮ ದೇವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಹಲಗೂರು ಮತ್ತು ವಳಗೆರೆದೊಡ್ಡಿ ಎರಡು ಗ್ರಾಮಗಳ ಆರಾಧ್ಯ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಏ.16 ರಿಂದ 20ರವರೆಗೆ ನಡೆಯಲಿದೆ. ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಗ್ರಾಮಸ್ಥರು ನಿರ್ಧಿಸಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ, ದೇಗುಲಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ.

ಎಚ್.ಎನ್.ಪ್ರಸಾದ್

ಕನ್ನಡಪ್ರಭ ವಾರ್ತೆ ಹಲಗೂರು

ಹಲಗೂರು ಮತ್ತು ವಳಗೆರೆದೊಡ್ಡಿ ಎರಡು ಗ್ರಾಮಗಳ ಆರಾಧ್ಯ ದೇವತೆ ಶ್ರೀಪಟ್ಟಲದಮ್ಮನ ಜಾತ್ರಾ ಮಹೋತ್ಸವ ಏ.16 ರಿಂದ 20ರವರೆಗೆ ನಡೆಯಲಿದೆ.

ನಾಲ್ಕು ದಿನಗಳ ಕಾಲ ಅದ್ಧೂರಿಯಾಗಿ ಆಚರಿಸಲು ಗ್ರಾಮಸ್ಥರು ನಿರ್ಧಿಸಿದ್ದು, ಈಗಾಗಲೇ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಗ್ರಾಮಕ್ಕೆ, ದೇಗುಲಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಲಾಗಿದೆ.

ಏ.16ರಂದು ಮೊದಲ ಪೂಜೆಯಿಂದ ಹಬ್ಬ ಪ್ರಾರಂಭಗೊಂಡು ಏ.18 ರಂದು ಹಲಗೂರು ಕರಿಬೀದಿಯ ದೇವರ ಕರಗದ ಮನೆಯಿಂದ ಪೂಜೆ ಸಲ್ಲಿಸಿಕೊಂಡು ಎಳವಾರ ಓಲೆ ಬಂಡಿ ಮತ್ತು ಹರಕೆ ಹೊತ್ತವರು ಪಾನಕ, ಮಜ್ಜಿಗೆ ಮಾಡಿಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ನಂತರ ಗ್ರಾಮದ ಹೊರಭಾಗದಲ್ಲಿರುವ ಪಟ್ಟಲದಮ್ಮನ ದೇವಸ್ಥಾನಕ್ಕೆ ಹೋಗಿ ಕೊಂಡದ ಬಾಯಿಗೆ ಸೌದೆಗಳನ್ನು ಹಾಕಲಾಗುತ್ತದೆ. ಈ ವೇಳೆ ಭಕ್ತರಿಗೆ ಪಾನಕ, ಮಜ್ಜಿಗೆ ವಿತರಣೆ ನಡೆಯಲಿದೆ.

ದೇವಿಗೆ ಅಭಿಷೇಕ, ಶ್ರೀಸ್ತೋತ್ರ ಪಾರಾಯಣ, ದುರ್ಗ ಸ್ತೋತ್ರ ಪಾರಾಯಣಗಳೊಂದಿಗೆ ಮಹಾಮಂಗಳಾರತಿ ಮಾಡಿದ ನಂತರ ಮುತ್ತೈದೆಯರು ವಿಶೇಷ ಪೂಜೆ ಸಲ್ಲಿಸಿ ಕಷ್ಟಕಾರ್ಪಣ್ಯ ನಿವಾರಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿ ದೇವಸ್ಥಾನಕ್ಕೆ ಬಂದಿರುವ ಮುತ್ತೈದೆಯರಿಗೆ ಅರಿಶಿನ ಕುಂಕುಮ ನೀಡಿ ವಿನಿಮಯ ಮಾಡಿಕೊಂಡು ಪಾನಕ, ಕೋಸಂಬರಿ ನೀಡುವ ಪದ್ಧತಿ ಪ್ರತಿವರ್ಷವೂ ಆಚರಿಸಿಕೊಂಡು ಬರಲಾಗುತ್ತಿದೆ.

ಶುಕ್ರವಾರ ರಾತ್ರಿ ದೇವರ ಕರಗವನ್ನು ತೆಗೆದುಕೊಂಡು ಶ್ರೀ ವೀರಭದ್ರದೇವಸ್ಥಾನಕ್ಕೆ ತರಲಾಗುತ್ತದೆ. ವೀರಭದ್ರೇಶ್ವರ ಸ್ವಾಮಿಗೆ ಪ್ರಳಯ ರುದ್ರ ಅಲಂಕಾರವನ್ನು ಮಾಡಿ ದೇವರ ಕರಗಕ್ಕೆ ಮಲ್ಲಿಗೆ, ಕನಕಾಂಬರ ಹೂಗಳಿಂದ ಶೃಂಗರಿಸಿ ಕರಗವನ್ನು ಹೊತ್ತು ಕೊಂಡ ಹಾಯುವ ಅರ್ಚಕರು ಮಡಿವಾಳ ಹಾಸುವ ಮಡಿಯ ಮೇಲೆ ಹೊರಟಾಗ ಜೊತೆಯಲ್ಲಿ ಬಸವ ಹಾಗೂ ತಂಬಿಟ್ಟಿನ ಆರತಿ ಹೊತ್ತ ಮುತ್ತೈದೆಯರು ಮೆರವಣಿ ಮುಖಾಂತರ ದೇವಸ್ಥಾನಕ್ಕೆ ತೆರಳಲಿದ್ದಾರೆ.

ದೇವಿಗೆ ಪೂಜೆ ಪುನಸ್ಕಾರಗಳು ನಡೆದ ನಂತರ ಏ.19ರ ಶನಿವಾರ ಬೆಳಗಿನ ಜಾವ ಬೆಳಗ್ಗೆ ಕೊಂಡೋತ್ಸವ ನಡೆಯುತ್ತದೆ. ಏ.20 ಎರಡು ಗ್ರಾಮಗಳ ಪ್ರಮುಖ ಬೀದಿಗಳಲ್ಲಿ ಶ್ರೀ ಪಟ್ಟಲದಮ್ಮನ ಕರಗ, ಶ್ರೀ ಹೆಬ್ಬಟ್ಟದ ಬಸವೇಶ್ವರ, ವೀರಭದ್ರೇಶ್ವರ, ಸಿದ್ದಪ್ಪಾಜಿ ದೇವರ ಮೆರವಣಿಗೆ ಮಹೋತ್ಸವ ಅದ್ಧೂರಿಯಾಗಿ ಜರುಗಲಿದೆ. ನಂತರ ಜಾತ್ರೆ ಪ್ರಾರಂಭವಾಗುತ್ತದೆ.

ಸಂಪ್ರದಾಯದಂತೆ ಯುಗಾದಿ ನಂತರ 15 ದಿನಗಳ ಅವಧಿಯಲ್ಲಿ ಪಟ್ಟಲದಮ್ಮ ದೇವಿ ಹಬ್ಬವನ್ನು ಆಚರಿಸಲಾಗುತ್ತದೆ. ಹಬ್ಬ ಆಚರಿಸಲು ಹೆಬ್ಬಟ್ಟದ ಬಸವೇಶ್ವರಸ್ವಾಮಿ ಅನುಮತಿ ಪಡೆದು ನಂತರ ನಡುಕೇರಿ ವೀರಭದ್ರ ಸ್ವಾಮಿ ಆಶೀರ್ವಾದದೊಂದಿಗೆ ಹಬ್ಬವನ್ನು ಎಲ್ಲರೂ ಸೇರಿ ಆಚರಿಸುವುದು ವಾಡಿಕೆಯಾಗಿದೆ.

- ಪ್ರಸಾದ್ ಅಘೋರ, ಪ್ರಧಾನ ಅರ್ಚಕರು, ನಡುಕೇರಿ ವೀರಭದ್ರೇಶ್ವರಸ್ವಾಮಿ ದೇಗುಲ

ಗ್ರಾಮಗಳ ಶಕ್ತಿದೇವತೆ ಪಟ್ಟಲದಮ್ಮ ದೇವಿಯ ಅಪಾರ ಭಕ್ತರು ಜಿಲ್ಲಾಧ್ಯಂತ ಇದ್ದಾರೆ. ಜನರಿಗೆ ಆರೋಗ್ಯ ಭಾಗ್ಯ ಕರುಣಿಸಿ, ರಾಜ್ಯದಲ್ಲಿ ಉತ್ತಮ ಮಳೆ ಬೆಳೆ ಆಗಿ ಎಲ್ಲೆಡೆ ಸಮೃದ್ಧಿ ಕಾಣಲಿ. ರೈತರ ಬದುಕು ಹಸನಾಗಲಿ ಎಂದು ಬೇಡುತ್ತಾ ಕಳೆದ 5 ವರ್ಷದಿಂದ ದೇವರ ಕೊಂಡ ಹಾಯ್ದುಕೊಂಡು ಬರುತ್ತಿದ್ದೇನೆ.

- ಕೃಷ್ಣಪ್ಪ, ಅರ್ಚಕರು, ಪಟ್ಟಲದಮ್ಮ ದೇವಸ್ಥಾನ