ಸಾರಾಂಶ
ಈ ಯೋಜನೆ ಪೂರ್ತಿಗೊಳಿಸಲು 29 ಸಾವಿರ ಕೋಟಿ ಅಗತ್ಯ
ಬ್ರಿಟಿಷ್ ಕಾಲದ ರೈಲ್ವೆ ನಿಲ್ದಾಣಗಳಿಗೆ ಮೋದಿ ಕಾಲದಲ್ಲಿ ಕಾಯಕಲ್ಪ30-40 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗಳು
ವಿಮಾನ ನಿಲ್ದಾಣ ಮಾದರಿಯಲ್ಲಿ ರೈಲ್ವೆ ನಿಲ್ದಾಣ ಅಭಿವೃದ್ಧಿಕನ್ನಡಪ್ರಭ ವಾರ್ತೆ ಕೊಪ್ಪಳ
ರಾಜ್ಯದ ಬಾಕಿ ಇರುವ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಲು ₹29 ಸಾವಿರ ಕೋಟಿ ಅಗತ್ಯವಿದ್ದು, ಇದನ್ನು 2027-28ರ ವೇಳೆಗೆ ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ಭರವಸೆ ವ್ಯಕ್ತಪಡಿಸಿದರು.ನಗರದ ಕುಷ್ಟಗಿ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ ಮಾಡಿ ಮಾತನಾಡಿ ಅವರು, ಬ್ರಿಟಿಷ್ ಕಾಲದ ರೈಲ್ವೆ ನಿಲ್ದಾಣಗಳು, ಮಾರ್ಗಗಳು ಹಾಗೆ ಬಿದ್ದಿದ್ದವು, ಅಭಿವೃದ್ಧಿ ಕಂಡಿರಲಿಲ್ಲ. ಅವುಗಳಿಗೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ಬಂದ ಮೇಲೆಯೇ ಕಾಯಕಲ್ಪ ನೀಡಲಾಗುತ್ತಿದೆ. ರೈಲ್ವೆ ನಿಲ್ದಾಣಗಳನ್ನು ವಿಮಾನ ನಿಲ್ದಾಣ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ರೈಲ್ವೆ ಸೇತುವೆಯ ಅಭಿವೃದ್ಧಿಗೆ ರಾಜ್ಯ ಸರ್ಕಾರಕ್ಕೆ ತನ್ನ ಪಾಲಿನ ಹಣ ನೀಡಲು ಆಗುತ್ತಿಲ್ಲ. ಇದನ್ನು ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಸಭೆಯಲ್ಲಿ ಹೇಳಿದ್ದಾರೆ. ಹೀಗಾಗಿ, ಇವುಗಳನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಲ್ಲಿಯೇ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ರಾಜ್ಯ ಸರ್ಕಾರ ಕೇವಲ ಭೂ ಸ್ವಾಧೀನ ಮಾಡಿಕೊಟ್ಟರೆ ಕೇಂದ್ರ ಸರ್ಕಾರವೇ ಕಾಮಗಾರಿಯ ಹಣ ಭರಿಸುತ್ತದೆ ಎಂದರು.ಯುಪಿಎ ಕಾಲದಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇವಲ ₹830 ಕೋಟಿ ರುಪಾಯಿ ನೀಡುತ್ತಿದ್ದರು. ಆದರೆ, ಈಗ ಎನ್ ಡಿಎ ಸರ್ಕಾರ ಬಂದ ಮೇಲೆ ₹7637 ಕೋಟಿ ನೀಡಲಾಗಿದೆ ಎಂದರು.
ಕುಷ್ಟಗಿ ರಸ್ತೆಯ ಈ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಬರೋಬ್ಬರಿ₹ 23 ಕೋಟಿ ನೀಡಿದೆ. ರಾಜ್ಯ ಸರ್ಕಾರ ₹13 ಕೋಟಿ ನೀಡಿದೆ. ಈ 13 ಕೋಟಿಯನ್ನು ನಾನು ಮೂಲಭೂತ ಸೌಕರ್ಯ ಸಚಿವನಾಗಿದ್ದಾಗಲೇ ನೀಡಿದ್ದೇನೆ ಎಂದು ಹೇಳುವ ಮೂಲಕ ವೇದಿಕೆಯಲ್ಲಿದ್ದ ಕಾಂಗ್ರೆಸ್ ಸಂಸದರು ಮತ್ತು ಶಾಸಕರಿಗೆ ಟಾಂಗ್ ನೀಡಿದರು.ಕೇಂದ್ರದಲ್ಲಿ 30-40 ವರ್ಷಗಳಿಂದ ರೈಲ್ವೆ ಇಲಾಖೆ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅಭಿವೃದ್ಧಿಯೇ ಆಗಿರಲಿಲ್ಲ. ಸಾಲು ಸಾಲು ರೈಲ್ವೆ ಯೋಜನೆಗಳು ಕೊಳೆಯುತ್ತಿದ್ದವು. ಆದರೆ, ನರೇಂದ್ರ ಮೋದಿ ಅವರು ಪ್ರಧಾನಿಯಾದ ಮೇಲೆಯೇ ಅಭಿವೃದ್ಧಿ ಕಾರ್ಯ ಪ್ರಾರಂಭವಾಯಿತು ಎಂದರು.
ಅಂಜನಾದ್ರಿಯಿಂದ(ಗಂಗಾವತಿ ರೈಲ್ವೆ ನಿಲ್ದಾಣ) ಅಯೋಧ್ಯೆಗೆ ನೇರ ರೈಲು ಸಂಪರ್ಕ ಪ್ರಾರಂಭಿಸಬೇಕು ಎನ್ನುವ ಒತ್ತಾಯ ಇದ್ದು, ಇದನ್ನು ಶೀಘ್ರದಲ್ಲಿಯೇ ಪರಿಶೀಲಿಸಿ, ಅಗತ್ಯ ಕ್ರಮವಹಿಸಲಾಗುವುದು ಎಂದರು.2025-26ರಲ್ಲಿ ಕೊಪ್ಪಳ ನಗರದ ಎಲ್ಲ ರೈಲ್ವೆ ಕ್ರಾಸಿಂಗ್ ಗಳಿಗೆ ಸೇತುವೆ ನಿರ್ಮಾಣ ಮಾಡಲಾಗುವುದು ಎಂದರು.
ಚೆನ್ನಮ್ಮ ಹೆಸರು:ಕುಷ್ಟಗಿ ರೈಲ್ವೆ ಮೇಲ್ಸೇತುವೆಗೆ ವೀರರಾಣಿ ಕಿತ್ತೂರು ಚೆನ್ಮಮ್ಮ ಹೆಸರು ಇಡುವ ಪ್ರಸ್ತಾವ ಮಾಡಿದ್ದಾರೆ. ಇದಕ್ಕೆ ನನ್ನ ಸಹಮತ ಇದೆ. ಆದರೆ, ನಿಯಮಾನುಸಾರ ಪ್ರಕ್ರಿಯೆ ಆಗಲಿ. ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಲಿ. ಬಳಿಕ ಅದು ನಿಯಮಾನುಸಾರ ಆಗುತ್ತದೆ. ಈಗ ಬೋರ್ಡ್ ಹಾಕಿರುವುದು ಸಹ ಸರಿಯಲ್ಲ, ರೈಲ್ವೆ ಇಲಾಖೆಯ ಅನುಮತಿ ಇಲ್ಲದೆ ಹಾಕುವುದು ತಪ್ಪಾಗುತ್ತದೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ್, ಶಾಸಕರಾದ ರಾಘವೇದ್ರ ಹಿಟ್ನಾಳ, ದೊಡ್ಡನಗೌಡ ಪಾಟೀಲ್, ಗಾಲಿ ಜನಾರ್ದನರೆಡ್ಡಿ, ವಿಪ ಸದಸ್ಯೆ ಹೇಮಲತಾ ನಾಯಕ ಮಾತನಾಡಿದರು.ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ಮಾಜಿ ಸಂಸದ ಶಿವರಾಮೇಗೌಡ, ನೈಋತ್ಯ ರೈಲ್ವೆ ಹುಬ್ಬಳ್ಳಿಯ ವಿಭಾಗೀಯ ವ್ಯವಸ್ಥಾಪಕರಾದ ಬೇಲಾ ಮೀನಾ ಸೇರಿದಂತೆ ಇತರೆ ಜನಪ್ರತಿನಿಧಿಗಳು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಇದ್ದರು.ಬೊಕೆ ಕೊಟ್ಟು ಓಡಿ ಹೋದ ಕರಡಿ- ಸೋಮಣ್ಣ ವ್ಯಂಗ್ಯ:
ಮಾಜಿ ಸಂಸದ ಸಂಗಣ್ಣ ಕರಡಿ ಹಾಗೂ ನಮ್ಮದು 30-40 ವರ್ಷಗಳ ಸ್ನೇಹ ಇದೆ. ಅವರ ಉಪಚುನಾವಣೆಯಲ್ಲಿ ಗೆಲುವಿಗಾಗಿ ಶ್ರಮಿಸಿದ್ದೇನೆ. ಆದರೆ, ಈಗ ಕಾರ್ಯಕ್ರಮಕ್ಕೆ ಬಾ ಎಂದರೂ ಸಹ ಬರಲಿಲ್ಲ. ಅವರು ಹೂವಿನ ಬೋಕೆ ಕೊಟ್ಟು ಓಡಿ ಹೋದರು ಎಂದು ಕೇಂದ್ರ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.ಸಂಗಣ್ಣ ಕರಡಿ ಅವರನ್ನು ನಾನೇ ಖುದ್ದು ಕಾರ್ಯಕ್ರಮಕ್ಕೆ ಆಗಮಿಸುವಂತೆ ಕೋರಿದ್ದೇನೆ, ಅವರು ಬರಬೇಕಿತ್ತು, ನಮ್ಮ ಪಕ್ಷದಿಂದಲೇ ಅವರು ಎರಡು ಬಾರಿ ಸಂಸದರಾಗಿದ್ದಾರೆ. ಇದಲ್ಲದೆ ನಾಲ್ಕು ಬಾರಿ ಶಾಸಕರು ಆಗಿದ್ದರು. ಸಾಕಷ್ಟು ಅನುಭವ ಇದೆ, ಹಿರಿಯರು ಆಗಿದ್ದಾರೆ. ಹೀಗಾಗಿ ಅವರನ್ನು ಆಹ್ವಾನಿಸಿದ್ದೆವು ಎಂದರು.
ಇದು ಕೇಂದ್ರ ಸರ್ಕಾರದ ಕಾರ್ಯಕ್ರಮ, ಶಿಷ್ಟಾಚಾರದ ಅಡಿಯಲ್ಲಿ ನಡೆಯಬೇಕಾಗುತ್ತದೆ. ಇದನ್ನು ಕೇಂದ್ರ ಸರ್ಕಾರವೇ ಆಯೋಜನೆ ಮಾಡುತ್ತದೆ ಎಂದು ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಅವರ ಹೆಸರು ಹೇಳಿ ಚುಚ್ಚಿದರು.ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಅವರೇ ಕೇಳಿ ನನಗೂ ಸೇರಿದಂತೆ ಅಧಿಕಾರ ಶಾಶ್ವತ ಅಲ್ಲ, ಒಟ್ಟಿಗೆ ಅಭಿವೃದ್ಧಿ ಮಾಡೋಣ. ಸಂಗೊಳ್ಳಿ ರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಕೇವಲ ಒಂದು ಜಾತಿಗೆ ಸೀಮಿತ ಮಾಡಬಾರದು. ಅವರು ನಮ್ಮೆಲ್ಲರ, ದೇಶದ ಸಂಪತ್ತು ಎಂದರು.ಕರಡಿ ಗುಣಗಾನ ಮಾಡಿದ ಅಣ್ಣ, ತಮ್ಮ:
ಕುಷ್ಟಗಿ ರೈಲ್ವೆ ಸೇತುವೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಮಾಜಿ ಸಂಸದ ಸಂಗಣ್ಣ ಕರಡಿ ಅವರನ್ನು ಗುಣಗಾನ ಮಾಡಿದರು. ಅವರ ಪ್ರಯತ್ನದ ಫಲವಾಗಿಯೇ ಸೇತುವೆಯಾಗಿದೆ ಎಂದು ಹೇಳಿದರು. ಇದಲ್ಲದೆ ಅನೇಕ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು. ಇದರ ಜೊತೆಗೆ ಕುಷ್ಟಗಿ ರೈಲ್ವೆ ಮೇಲ್ಸೇತುವೆಗೆ ವೀರರಾಣಿ ಕಿತ್ತೂರು ಚೆನ್ಮಮ್ಮ ಹೆಸರು ನಾಮಕರಣ ಮಾಡುವಂತೆ ಆಗ್ರಹಿಸಿದರು.