ಸಾರಾಂಶ
ತಿಪಟೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನ ಶ್ರೀಮದ್ ರಂಭಾಪುರಿ ಪ್ರೌಢಶಾಲೆ ಆವರಣದಲ್ಲಿ ಡಿ.14ರ ಶನಿವಾರ ನಡೆಯಲಿರುವ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ತಾ. ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು.
ಕನ್ನಡಪ್ರಭ ವಾರ್ತೆ ತಿಪಟೂರು
ತಿಪಟೂರು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ತಾಲೂಕಿನ ಕಿಬ್ಬನಹಳ್ಳಿ ಕ್ರಾಸ್‌ನ ಶ್ರೀಮದ್ ರಂಭಾಪುರಿ ಪ್ರೌಢಶಾಲೆ ಆವರಣದಲ್ಲಿ ಡಿ.14ರ ಶನಿವಾರ ನಡೆಯಲಿರುವ ತಾಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಈಗಾಗಲೇ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಕಸಾಪ ತಾ. ಅಧ್ಯಕ್ಷ ಎಂ. ಬಸವರಾಜಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಸಾಪ ವತಿಯಿಂದ ಈಗಾಗಲೇ ಹಲವಾರು ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು ಆರನೇ ಸಮ್ಮೇಳನಕ್ಕಾಗಿ ಎಲ್ಲರ ಸಹಕಾರ, ಪ್ರೋತ್ಸಾಹದಿಂದ ಸಿದ್ದತೆ ಮಾಡಿಕೊಂಡಿದ್ದು ಪ್ರತಿಯೊಂದು ಕೆಲಸ ಕಾರ್ಯಗಳಿಗೆ ಸಮಿತಿಗಳನ್ನು ರಚಿಸಿ ಜವಾಬ್ದಾರಿ ಕೊಡಲಾಗಿದೆ. ಬಿಳಿಗೆರೆ ಮತ್ತು ಹಿಂಡಿಸ್ಕೆರೆ ಗ್ರಾಮ ಪಂಚಾಯಿತಿಗಳು ಸೇರಿದಂತೆ ಸ್ಥಳೀಯ ಗ್ರಾಮಸ್ಥರು, ಮುಖಂಡರುಗಳು ಸಹಕಾರದಿಂದ ಸಮ್ಮೇಳನ ನಡೆಯುತ್ತಿದೆ. ಡಿ.14ರಂದು ಬೆಳಗ್ಗೆ 8ಗಂಟೆಗೆ ಧ್ವಜಾರೋಹಣದೊಂದಿಗೆ ಸಮ್ಮೇಳನ ಪ್ರಾರಂಭವಾಗಲಿದ್ದು, ಕನ್ನಡ ತಾಯಿ ಭುವನೇಶ್ವರಿಯ ಮೆರವಣಿಗೆ ಪೂರ್ಣಕುಂಭ ಸ್ವಾಗತದ ಬದಲಿಗೆ ಹಸಿರು ಸಸ್ಯಗಳೊಂದಿಗೆ ಸೋಮನಕುಣಿತ, ಕಹಳೆ, ನಗಾರಿ ಹೀಗೆ ಜಾನಪದ ಕಲಾತಂಡಗಳೊಂದಿಗೆ ವೈಭವಯುತವಾಗಿ ನಡೆಯಲಿದೆ. ಸಮ್ಮೇಳನಾಧ್ಯಕ್ಷರನ್ನಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ ಇವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷತೆಯನ್ನು ಶಾಸಕ ಕೆ. ಷಡಕ್ಷರಿ ವಹಿಸಲಿದ್ದು, ಬೆಳಗ್ಗೆ 10.30ಕ್ಕೆ ಉದ್ಘಾಟನೆಯನ್ನು ಸಾಹಿತಿ ಪ್ರೊ. ನಟರಾಜ್ ಬೂದಾಳ್ ನೆರವೇರಲಿದ್ದಾರೆ. ಕೃತಿ ಬಿಡುಗಡೆಯನ್ನು ಮಾಜಿ ಸಚಿವ ಬಿ.ಸಿ. ನಾಗೇಶ್, ಪುಸ್ತಕ ಬಿಡುಗಡೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅಧಿಕಾರಿಗಳು, ರಾಜಕೀಯ ಗಣ್ಯರು, ಸ್ಥಳೀಯ ಮುಖಂಡರುಗಳು ಭಾಗವಹಿಸಲಿದ್ದಾರೆ. ಅಂದು ಸಂಜೆ 5ಗಂಟೆಗೆ ಸನ್ಮಾನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ. ವಿಚಾರ ಗೋಷ್ಠಿ, ಕವಿಗೋಷ್ಠಿಗಳು ನಡೆಯಲಿದ್ದು 20ಕ್ಕೂ ಹೆಚ್ಚು ಕವಿಗಳು ಭಾಗವಹಿಸಲಿದ್ದಾರೆ. ಎಲ್ಲಾ ಗಣ್ಯರಿಗೆ ಹಾರ ತುರಾಯಿ ಬದಲು ಪುಸ್ತಕಗಳ ಉಡುಗೊರೆ ನೀಡಲಾಗುವುದು. ಸುಮಾರು ಎರಡು ಸಾವಿರ ಜನರಿಗೆ ಭೋಜನ ವ್ಯವಸ್ಥೆ ಏರ್ಪಡಿಸಲಾಗಿದೆ. 10ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ತೆರೆಯಲಾಗುತ್ತಿದೆ. ಯಾವುದೇ ಲೋಪದೋಷವಾಗದಂತೆ ಶಿಸ್ತಿನಿಂದ ಸಮ್ಮೇಳನ ನಡೆಸಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದರು. ಸುದ್ದಿಗೋಷ್ಠಿಗೂ ಮುನ್ನಾ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ನಿಧನಕ್ಕೆ ಒಂದು ನಿಮಿಷ ಮೌನಾಚರಣೆ ನಡೆಸಿ ಸಂತಾಪ ಸೂಚಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ಕಿಬ್ಬನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಶಂಕರಪ್ಪ ಬಳ್ಳೆಕಟ್ಟೆ, ಕಾರ್ಯದರ್ಶಿಗಳಾದ ಮಂಜಪ್ಪ, ಶಂಕರಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಎಚ್.ಜೆ. ದಿವಾಕರ್, ಟಿ. ಶಾರದಮ್ಮ, ಪದಾಧಿಕಾರಿಗಳಾದ ಲಿಂಗರಾಜು, ಬಸವರಾಜು, ಎಚ್.ಎಸ್. ಓಂಕಾರಯ್ಯ ಮತ್ತಿತರರಿದ್ದರು.