ದೇಹದ ಬಂಡಿಗೆ ವಚನಗಳೇ ಕೀಲು ಆಗಬೇಕಿದೆ: ಫಕೀರೇಶ್ವರ ಶ್ರೀಗಳು

| Published : Apr 11 2024, 12:47 AM IST

ದೇಹದ ಬಂಡಿಗೆ ವಚನಗಳೇ ಕೀಲು ಆಗಬೇಕಿದೆ: ಫಕೀರೇಶ್ವರ ಶ್ರೀಗಳು
Share this Article
  • FB
  • TW
  • Linkdin
  • Email

ಸಾರಾಂಶ

ಗದಗ ತಾಲೂಕಿನ ಕಳಸಾಪುರಿನ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಬೃಹತ್ ಕುಂಭ ಮೆರವಣಿಗೆ ಜರುಗಿತು.

ಗದಗ: ತಾಲೂಕಿನ ಕಳಸಾಪುರಿನ ಈಶ್ವರ ಬಸವಣ್ಣ ದೇವರ 14ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಸರ್ವಧರ್ಮ ಸಾಮೂಹಿಕ ವಿವಾಹ ಮಹೋತ್ಸವದ ಅಂಗವಾಗಿ ಬೃಹತ್ ಕುಂಭ ಮೆರವಣಿಗೆ ಜರುಗಿತು.

ಮೆರವಣಿಗೆ ಈಶ್ವರ ದೇವಸ್ಥಾನದಿಂದ ಆರಂಭಗೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಬಳಿಕ ಮರಳಿ ದೇವಸ್ಥಾನಕ್ಕೆ ಮರಳಿತು. ಅಲ್ಲಿ ಈಶ್ವರ ಲಿಂಗಕ್ಕೆ ಜಲಾಭಿಷೇಕ ಮಾಡಲಾಯಿತು. ಆನಂತರ ಧರ್ಮಸಭೆ ಜರುಗಿತು.

ಓಂಕಾರಗಿರಿ ಓಂಕಾರೇಶ್ವರ ಶ್ರೀಮಠದ ಫಕೀರೇಶ್ವರ ಶಿವಾರ್ಚಾಯರು ಸಾನ್ನಿಧ್ಯ ವಹಿಸಿ ಮಾತನಾಡಿ, ದೇಹ ಎನ್ನುವುದು ಕಾಮ, ಕ್ರೋಧ, ಲೋಭ, ಮೋಹ, ಮತ್ಸರ, ಮದ ಎಂಬ ಬುನಾದಿಗಳನ್ನು ತುಂಬಿದ ಬಂಡಿಯಾಗಿದೆ. ರೈತರ ಬಂಡಿಗೆ ಕಬ್ಬಿಣದ ಕೀಲು ಆಸರೆಯಾದರೆ, ದೇಹದ ಈ ಬಂಡಿಗೆ ವಚನಗಳೇ ಕೀಲವಾಗಬೇಕಿದೆ ಎಂದು ಹೇಳಿದರು.

ಪ್ರವಚನಕಾರ ಶಿವಲಿಂಗಯ್ಯಶಾಸ್ತ್ರಿಗಳು ಸಿದ್ದಾಪುರ ಮಾತನಾಡಿ, ಸಪ್ತಸೂತ್ರಗಳು ಮನುಷ್ಯನ ಜೀವನದಲ್ಲಿ ಅಳವಡಿಸಿಕೊಂಡಾಗ ಕೋರ್ಟು-ಕಚೇರಿಗಳ ಮೆಟ್ಟಿಲು ಹತ್ತುವ ಅವಶ್ಯಕತೆ ಇರುವುದಿಲ್ಲ. ಆದ್ದರಿಂದ ಬಸವಣ್ಣನವರು ಏಳು ಸೂತ್ರಗಳಲ್ಲಿ ತಮ್ಮ ವಚನಗಳಲ್ಲಿ ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ, ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ ಎಂದು ಹೇಳಿದ್ದಾರೆ ಎಂದರು.

ಮಹಾತ್ಮ ಗಾಂಧೀಜಿ ಇದೇ ದೇಶದ ಜನತೆಗೆ ಕೂಡ ಮಾನವ ಬದುಕಿಗೆ ಏಳು ಸೂತ್ರಗಳು ಬಹುಮುಖ್ಯ ಎಂದು ಹೇಳಿದ್ದಾರೆ. ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಏಳು ಸೂತ್ರಗಳನ್ನು ಅಳವಡಿಸಿಕೊಂಡು ಸಾಮಾನ್ಯರು ಶರಣರಾಗಬಹುದು ಎಂದು ಹೇಳಿದರು.

ಸಿ.ಬಿ. ಪಲ್ಲೇದ, ವೀರಯ್ಯ ಕಂಬಾಳಿಮಠ, ನಿಂಗನಗೌಡ ತಿಪ್ಪನಗೌಡ್ರ, ಸಾದಿಕ್ ಶೇಖ, ಬಸನಗೌಡ ರಾಮನಗೌಡ, ರಾಮಣ್ಣ ಅಣ್ಣಿಗೇರಿ, ಬಸಯ್ಯ ಸಾಸ್ವಿಹಳ್ಳಿಮಠ, ಈರಣ್ಣ ಬಜಂತ್ರಿ, ಶ್ರೀಕಾಂತ ಹೂಗಾರ, ದ್ಯಾಮಣ್ಣ ಬಡಿಗೇರ, ಬಸವರಾಜ ಹಗೇದಾಳ, ಸಂತೋಷ ನಾಯ್ಕರ, ನಿಂಗಯ್ಯ ಇಟಗಿಮಠ, ಮಂಜುನಾಥ ಘೋಡಕೆ ಉಪಸ್ಥಿತರಿದ್ದರು.