ಸಾರಾಂಶ
ಹಂಗಾರಕಟ್ಟೆಯ ಐರೋಡಿ ಯಕ್ಷಗಾನ ಕೇಂದ್ರದಲ್ಲಿ ನಡೆಯುತ್ತಿರುವ 20 ದಿನಗಳ ಮಕ್ಕಳ ಯಕ್ಷಗಾನ ನೃತ್ಯ, ಅಭಿನಯ ತರಬೇತಿ ಶಿಬಿರವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಅವರಲ್ಲಿ ವಾಕ್ಚಾತುರ್ಯ, ಅಭಿನಯ, ನೃತ್ಯ, ಪೌರಾಣಿಕ ಪ್ರಸಂಗಗಳ ಬಗ್ಗೆ ಜ್ಞಾನವುಂಟಾಗುವುದಲ್ಲದೆ ಅವರ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದ್ದಾರೆ.ಇಲ್ಲಿನ ಹಂಗಾರಕಟ್ಟೆಯ ಐರೋಡಿ ಯಕ್ಷಗಾನ ಕೇಂದ್ರದಲ್ಲಿ ನಡೆಯುತ್ತಿರುವ 20 ದಿನಗಳ ಮಕ್ಕಳ ಯಕ್ಷಗಾನ ನೃತ್ಯ, ಅಭಿನಯ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಿಕೆ ಕೇವಲ ಕಲಾವಿದನಾಗಲು ಅಲ್ಲ, ಒಬ್ಬ ಉತ್ತಮ ಪ್ರೇಕ್ಷಕನಾಗಲು ಸಾಧ್ಯವಾಗುತ್ತದೆ. ದೈಹಿಕವಾಗಿ ಆರೋಗ್ಯದ ಜೊತೆಗೆ ಮನಸ್ಸಿಗೂ ಶಾಂತಿ, ನೆಮ್ಮದಿ ಲಭಿಸುತ್ತದೆ. ಹೀಗಾಗಿ ಮಕ್ಕಳಿಗೆ ಯಕ್ಷಗಾನ ಶಿಕ್ಷಣವನ್ನು ನೀಡಲು ಪೋಷಕರು ಹಿಂದೇಟು ಹಾಕಬಾರದು. ಯಕ್ಷಗಾನವನ್ನು ಅಭ್ಯಾಸ ಮಾಡಿದ ಮಕ್ಕಳು ಶೈಕ್ಷಣಿಕವಾಗಿಯೂ ಉತ್ತಮ ಸಾಧನೆ ಮಾಡಿರುವುದನ್ನು ನಾವು ಗಮನಿಸಿದ್ದೇವೆ ಎಂದು ಅವರು ತಿಳಿಸಿದರು.ಯಕ್ಷಗಾನ ಜೀವನದಲ್ಲಿ ಶಿಸ್ತು ಬದ್ಧ ಜೀವನ ನಡೆಸಲು ಸಹಕಾರಿಯಾಗುತ್ತದೆ. ಶುದ್ಧ ಕನ್ನಡ ಮಾತನಾಡುವ ಏಕೈಕ ಕಲೆ ಅಂದರೆ ಅದು ಯಕ್ಷಗಾನ ಮಾತ್ರ. ಈ ನಿಟ್ಟಿನಲ್ಲಿ ಯಕ್ಷಗಾನದ ಬೆಳವಣಿಗೆಗೆ ತನ್ನದೇ ಆದ ಕೊಡುಗೆ ನೀಡುತ್ತಿರುವ ಯಕ್ಷಗಾನ ಕೇಂದ್ರದ ಕಾರ್ಯ ಶ್ಲಾಘನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಯಕ್ಷಗಾನ ಕೇಂದ್ರದ ಅಧ್ಯಕ್ಷರು ಹಾಗೂ ಉದ್ಯಮಿ ಆನಂದ ಸಿ.ಕುಂದರ್ ಮಾತನಾಡಿ, ಇಂದು ಯಕ್ಷಗಾನ ಕಲಾವಿದರಿಗೆ ಉತ್ತಮ ಸಂಭಾವನೆ ದೊರಕುತ್ತಿದೆ. ಈ ನಿಟ್ಟಿನಲ್ಲಿ ಯಕ್ಷಗಾನ ಕಲಿತರೆ ಜೀವನೋಪಾಯಕ್ಕೂ ದಾರಿಯಾಗುತ್ತದೆ. ಆದ್ದರಿಂದ ಯಕ್ಷಗಾನದ ಬಗ್ಗೆ ಕೀಳರಿಮೆ ಬೇಡ. ಈ ರಂಗದಲ್ಲಿ ಉನ್ನತಿಗೇರುವ ವಿಫುಲ ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.ಯಕ್ಷಗಾನ ಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಯಕ್ಷಗಾನ ಕೇಂದ್ರ ಕಳೆದ 12 ವರ್ಷಗಳಿಂದ ಮಕ್ಕಳಿಗೆ ಯಕ್ಷಗಾನ, ನೃತ್ಯ, ಅಭಿನಯ ತರಬೇತಿ ‘ನಲಿ -ಕುಣಿ’ ಶಿಬಿರ ಆಯೋಜಿಸಿಕೊಂಡು ಬರುತ್ತಿದೆ. ಶಿಬಿರದ ಕೊನೆಯ ದಿನ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಲಿದೆ ಎಂದರು.
ಯಕ್ಷಗಾನ ಗುರು, ಶಿಬಿರದ ನಿರ್ದೇಶಕರಾದ ಕೆ.ಸದಾನಂದ ಐತಾಳ್, ಕೋಟೇಶ್ವರದ ಗೀತಾ ಎಚ್‌ಎಸ್‌ಎನ್ ಫೌಂಡೇಶನ್‌ನ ಅಧ್ಯಕ್ಷ ಶಂಕರ ಐತಾಳ್ ಅಮಾಸೆಬೈಲು ಉಪಸ್ಥಿತರಿದ್ದರು. ಈ ಯಕ್ಷಗಾನ ತರಬೇತಿ ಶಿಬಿರ ಏ.13ರಿಂದ ಮೇ 3ರವರೆಗೆ ನಡೆಯುತ್ತಿದೆ.