ಕರ್ನಾಟಕದ ಸಮಗ್ರ ಏಳ್ಗೆಯೇ ಪರಿಷತ್ತಿನ ಗುರಿ: ಜಗನ್ನಾಥ ಮೂಲಗೆ

| Published : May 20 2024, 01:35 AM IST

ಕರ್ನಾಟಕದ ಸಮಗ್ರ ಏಳ್ಗೆಯೇ ಪರಿಷತ್ತಿನ ಗುರಿ: ಜಗನ್ನಾಥ ಮೂಲಗೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂತಪೂರ್‌ನ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕ ಜಗನ್ನಾಥ ಮೂಲಗೆ ಅಭಿಮತ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಔರಾದ್‌

ಕನ್ನಡ, ಕನ್ನಡಿಗ, ಕರ್ನಾಟಕದ ಸಮಗ್ರ ಏಳ್ಗೆಯೇ ಪರಿಷತ್ತಿನ ಗುರಿಯಾಗಿದೆ ಎಂದು ಶಿಕ್ಷಕ ಜಗನ್ನಾಥ ಮೂಲಗೆ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಸಂತಪೂರ್‌ನ ಸಿದ್ದರಾಮೇಶ್ವರ ಕಾಲೇಜಿನಲ್ಲಿ ಜರುಗಿದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಸಾಪ ತಾಲೂಕು ಅಧ್ಯಕ್ಷರಾದ ಶಾಲಿವಾನ ಉದ್ಗೀರೆ ನೇತೃತ್ವದಲ್ಲಿ ಪರಿಷತ್ತಿನ ಚಟುವಟಿಕೆಗಳು ಕ್ರಿಯಾಶೀಲವಾಗಿ ಜರುಗುತ್ತಿವೆ ಎಂದು ತಿಳಿಸಿದರು.

ಕನ್ನಡ, ಕನ್ನಡಿಗ, ಕರ್ನಾಟಕ ವಿಷಯಕ್ಕೆ ಸಂಬಂಧಿಸಿದಂತೆ ಪೂರಕ ಕಾರ್ಯಕ್ರಮಗಳನ್ನು ಹಾಗೂ ಹೋರಾಟಗಳನ್ನು ರೂಪಿಸಿಕೊಂಡು ಬಂದು ಕನ್ನಡಿಗರಲ್ಲಿ ಕನ್ನಡದ ಪ್ರಜ್ಞೆಯನ್ನು ಸದಾ ಜೀವಂತವಾಗಿರುವ ಕಾರ್ಯವನ್ನು ಪರಿಷತ್ತು ಶತಮಾನದಿಂದ ಮಾಡುತ್ತಾ ಬಂದಿದೆ. ಪುಸ್ತಕ ಪ್ರಕಟನೆ, ಸಮ್ಮೇಳನ, ಕಾರ್ಯಾಗಾರ, ವಿಚಾರ ಸಂಕಿರಣ ಮುಂತಾದ ಕಾರ್ಯಚಟುವಟಿಕೆಗಳು ಪರಿಷತ್ತಿನ ಜೀವಾಳವಾಗಿದೆ ಎಂದರು.

ಪ್ರಾಂಶುಪಾಲ ಓಂ ಪ್ರಕಾಶ ದಡ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರ್ನಾಟಕದ ಏಕೀಕರಣ ಸಂದರ್ಭದಲ್ಲಿ ಬೀದರ್‌ ಭಾಗದಲ್ಲಿ ಕನ್ನಡ ಉಳಿಸಿ ಬೆಳಸಿರುವ ಶ್ರೇಯಸ್ಸು ಭಾಲ್ಕಿಯ ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಸಾಹಿತ್ಯ ಪರಿಷತ್ತು ಸಮ್ಮೇಳನ, ಪುಸ್ತಕ ಪ್ರಕಟನೆ, ಕಾರ್ಯಾಗಾರಗಳ ಮೂಲಕ ಕನ್ನಡಿಗರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯವನ್ನು ಮಾಡಿದೆ. ಕನ್ನಡ ನಾಡು ನುಡಿ, ನೆಲ ಜಲದ ಪ್ರಶ್ನೆ ಬಂದಾಗ ಪರಿಷತ್ತು ಮುಂಚೂಣಿಯಲ್ಲಿ ನಿಂತು ಕನ್ನಡಿಗರಿಗೆ ನ್ಯಾಯ ಒದಗಿಸುವ ಕಾರ್ಯ ಮಾಡುತ್ತಿದೆ ಎಂದರು.

ಸಾಹಿತ್ಯ ಪರಿಷತ್‌ ಸಂಚಾಲಕ ಅಶೋಕ ಶೆಂಬೆಳ್ಳೆ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ನಮ್ಮೆಲ್ಲರಿಗೆ ಏಕತೆ ಹಾಗೂ ಅಸ್ಮಿತೆಯ ಸಂಕೇತ. ಸಾಹಿತ್ಯ ಪರಿಷತ್ತು ಸ್ಥಾಪನೆಯಾದಾಗಿನಿಂದ ಇಲ್ಲಿಯವರೆಗೆ ಅನೇಕ ಮಹನೀಯರು, ಹೋರಾಟಗಾರರು ಪರಿಷತ್ತಿನ ಬೆಳವಣಿಗೆಗೆ ಕೊಡುಗೆ ನೀಡಿದ್ದಾರೆ. ಪರಿಷತ್ತು ಉದಯಕ್ಕೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕ ಅಧ್ಯಕ್ಷ ಶಾಲಿವಾನ ಉದ್ಗೀರೆ, ಶಿಕ್ಷಕ ಗುರುನಾಥ ದೇಶಮುಖ, ವಿಜಯಕುಮಾರ ಶಿಂಧೆ, ಪ್ರಾಚಾರ್ಯ ನವೀಲಕುಮಾರ ಉತ್ಕಾರ, ಸುಪುತ್ರ ಧರಣಿ ಸೇರಿದಂತೆ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಲಪ್ಪ ಬುಟ್ಟೆ ನಿರೂಪಿಸಿದರು, ನವೀಲಕುಮಾರ ಉತ್ಕಾರ ಸ್ವಾಗತಿಸಿದರು.