ಸಾರಾಂಶ
ಶಿರಸಿ: ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡದೇ ಕ್ಷೇತ್ರದ ಸರ್ವಾಂಗೀಣ ಪ್ರಗತಿ ನನ್ನ ಮುಖ್ಯ ಗುರಿಯಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಅವರು ಸೋಮವಾರ ತಾಲೂಕಿನ ಉಂಚಳ್ಳಿ ಗ್ರಾಪಂನಲ್ಲಿ ಜಿಪಂ, ತಾಪಂ, ಪಂಚಾಯತ ರಾಜ್ ಎಂಜಿನಿಯರಿಂಗ್ ವಿಭಾಗ, ಉಂಚಳ್ಳಿ ಗ್ರಾಪಂ ಸಂಯುಕ್ತಾಶ್ರಯದಲ್ಲಿ ೧೫ ನೇ ಹಣಕಾಸು ಹಾಗೂ ನರೇಗಾ ಯೋಜನೆಗಳ ಅಡಿಯಲ್ಲಿ ₹೫೩.೩೫ ಲಕ್ಷ ವೆಚ್ಚದಲ್ಲಿ ಮಂಜೂರಾದ ಉಂಚಳ್ಳಿ ಗ್ರಾಪಂ ನೂತನ ಕಟ್ಟಡ ಉದ್ಘಾಟಿಸಿ, ಮಾತನಾಡಿದರು.ಸಮಾಜದ ಕಟ್ಟ ಕಡೆಯ ವ್ಯಕ್ತಿ ತಮ್ಮ ಕೆಲಸಕ್ಕಾಗಿ ಗ್ರಾಪಂಗೆ ಆಗಮಿಸುತ್ತಾರೆ. ಅವರಿಗೆ ಉತ್ತಮ ಸೇವೆ ದೊರೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸುತ್ತಿದೆ. ಉಂಚಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ₹೫೫ ಕೋಟಿ ನನ್ನ ಅವಧಿಯಲ್ಲಿ ನೀಡಿದ್ದೇನೆ. ಇನ್ನು ಅನೇಕ ಅಭಿವೃದ್ಧಿ ಕಾರ್ಯ ಬಾಕಿ ಉಳಿದಿವೆ. ಅದಕ್ಕೂ ಕಾಯಕಲ್ಪ ನೀಡಲು ಬದ್ಧನಾಗಿದ್ದೇನೆ. ಯಾವುದೇ ಕಾರಣಕ್ಕೂ ಬಡವರಿಗೆ ತೊಂದರೆಯಾಗಬಾರದು ಎಂದರು.
ರಾಜ್ಯ ಸರ್ಕಾರ ಅವಧಿಯಲ್ಲಿ ಪಂಚ ಗ್ಯಾರಂಟಿಗೆ ₹೫೬ ಸಾವಿರ ಕೋಟಿ ನೀಡುತ್ತಿದೆ. ನಾವು ಕೃತಘ್ನ ಆದರೆ ನಮ್ಮಂತವರು ಕ್ಷಮಿಸಬಹುದು. ಆದರೆ ಭಗವಂತ ಕ್ಷಮಿಸುವುದಿಲ್ಲ. ಕುಟುಂಬದ ಗೌರವ ಹೆಚ್ಚಿಗೆ ಮಾಡುವ ಮಹಿಳೆಯರಿಗೆ ರಾಜ್ಯ ಸರ್ಕಾರ ಅತಿ ಹೆಚ್ಚು ಪ್ರಾಮುಖ್ಯತೆ ನೀಡಿದೆ. ಸಾರ್ವಜನಿಕ ಕೆಲಸದ ಜೊತೆ ವೈಯಕ್ತಿಕ ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಸರ್ಕಾರ ಮಾಡುತ್ತಿದೆ ಎಂದ ಅವರು, ಉಂಚಳ್ಳಿ ಗ್ರಾಪಂ ಕಚೇರಿಯ ಅತ್ಯುತ್ತಮ ಕಟ್ಟಡ ನಿರ್ಮಾಣಗೊಂಡಿದೆ. ಇದಕ್ಕೆ ಹಿಂದಿನ ಹಾಗೂ ಹಾಲಿ ಗ್ರಾಪಂ ಸದಸ್ಯರ ಪರಿಶ್ರಮ ಹಾಗೂ ಅಧಿಕಾರಿಗಳ ಸಹಕಾರ ಮುಖ್ಯ ಕಾರಣ ಎಂದರು.ಉಂಚಳ್ಳಿ ಗ್ರಾಪಂ ಅಧ್ಯಕ್ಷೆ ಮಂಜಮ್ಮ ಭೋವಿ ಅಧ್ಯಕ್ಷತೆ ವಹಿಸಿದ್ದರು.
ಗ್ರಾಪಂ ಸದಸ್ಯ ದೇವೇಂದ್ರ ನಾಯ್ಕ ಮಾತನಾಡಿ, ಕಳೆದ ೩೦ ವರ್ಷದ ಹಿಂದೆ ಸುಗಾವಿ ಗ್ರಾಪಂನಿಂದ ಬೇರ್ಪಟ್ಟು ಉಂಚಳ್ಳಿ ಸ್ವತಂತ್ರ ಗ್ರಾಪಂ ಆಗಿದೆ. ಆಗ ಹಿರಿಯರು ಸಹಕಾರಿ ಸಂಘಕ್ಕೆ ಹಾಗೂ ಉಂಚಳ್ಳಿ ಗ್ರಾಪಂಗೆ ತಲಾ ೧ ಎಕರೆ ಜಮೀನು ಮೀಸಲಿಟ್ಟು ದೂರದೃಷ್ಟಿ ಹೊಂದಿದ್ದರು. ಅವರ ಮುಂದಾಲೋಚನೆಯಿಂದ ಇದೀಗ ಭವ್ಯ ಕಟ್ಟಡ ನಿರ್ಮಾಣಗೊಂಡು ೧೧ ಗ್ರಾಮದ ಜನರ ಎದುರು ವಿದ್ಯುಕ್ತವಾಗಿ ಉದ್ಘಾಟನೆಗೊಂಡಿರುವುದು ಸಂತೋಷ ತಂದಿದೆ ಎಂದರು.ಇಂಡಿಯಾ ಬುಕ್ ಆಫ್ ಅವಾರ್ಡ್ ಪಡೆದ ಪೂಜಾ ನಾಯ್ಕ ಸೋಮನಹಳ್ಳಿ, ಗ್ರಾಪಂ ಕಟ್ಟಡ ಅತ್ಯುತ್ತಮವಾಗಿ ನಿರ್ಮಿಸಿದ ಗುತ್ತಿಗೆದಾರ ಚಂದ್ರಕಾಂತ ಗೌಡ, ಗ್ರಾಪಂ ಹಾಲಿ ಸದಸ್ಯರು, ಮಾಜಿ ಸದಸ್ಯರು, ಮಾಜಿ ಅಧ್ಯಕ್ಷರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಗ್ರಾಪಂ ಸದಸ್ಯ ಅಣ್ಣಪ್ಪ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು. ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸತೀಶ ನಾಯ್ಕ, ಉಪಾಧ್ಯಕ್ಷ ನಾಗರಾಜ ಮುರ್ಡೇಶ್ವರ, ತಾಲೂಕಾ ಅಧ್ಯಕ್ಷೆ ಸುಮಾ ಉಗ್ರಾಣಕರ, ಉಂಚಳ್ಳಿ ಗ್ರಾಪಂ ಸದಸ್ಯರಾದ ರವಿತೇಜ ರೆಡ್ಡಿ, ಅರುಣ ನಾಯ್ಕ, ನೇತ್ರಾವತಿ ಮಡಿವಾಳ, ಸುಜಾತ ಚನ್ನಯ್ಯ, ಮಾಲತಿ ನಾಯ್ಕ, ಫಾಮಿದಾ ಬೇಗಂ, ದೇವೇಂದ್ರ ನಾಯ್ಕ, ಹುಲಿಯಾ ಗೌಡ, ತಾಪಂ ಕಾರ್ಯ ನಿರ್ವಹಣಾಧಿಕಾರಿ ಚೆನ್ನಬಸಪ್ಪ ಹಾವಣಗಿ, ಇಂಜೀನಿಯರ್ ಬಸವರಾಜ ಬಳ್ಳಾರಿ, ಜಿಂ ಮಾಜಿ ಸದಸ್ಯರಾದ ರೂಪಾ ನಾಯ್ಕ, ಬಸವರಾಜ ದೊಡ್ಮನಿ, ಬನವಾಸಿ ಪ್ರಾಧಿಕಾರದ ಸದಸ್ಯ ಸಿ.ಎಫ್.ನಾಯ್ಕ, ತಾಪಂ ಮಾಜಿ ಸದಸ್ಯೆ ರತ್ನಾ ಶೆಟ್ಟಿ ಉಪಸ್ಥಿತರಿದ್ದರು.ಉಂಚಳ್ಳಿ ಪಿಡಿಒ ಆಶಾ ಗೌಡ ಸ್ವಾಗತಿಸಿದರು. ಕಲ್ಲಿ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಪಿಡಿಒ ಕುಮಾರ ವಾಸನ್ ನಿರೂಪಿಸಿದರು. ತಾರಾ ಸಂಗಡಿಗರು ಪ್ರಾರ್ಥಿಸಿದರು.