ಕನ್ನಡಪ್ರಭ ವಾರ್ತೆ ಹುಕ್ಕೇರಿ

ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ.18 ರಿಂದ ಪ್ರಾರಂಭವಾಗಲಿದ್ದು, ಹುಕ್ಕೇರಿ ತಾಲೂಕಿನಲ್ಲಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಎಲ್ಲ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಹಸೀಲ್ದಾರ್‌ ಬಲರಾಮ ಕಟ್ಟಿಮನಿ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ 2025-26ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಎದುರಿಸಬೇಕು. ಪರೀಕ್ಷಾ ಕೇಂದ್ರಗಳ 200 ಮೀಟರ ಸುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ನಕಲು ತಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಪರೀಕ್ಷಾ ಕೊಠಡಿಗಳ ಸ್ವಚ್ಛತೆ, ಕುಡಿಯುವ ನೀರು, ಸಿಸಿ ಕ್ಯಾಮೆರಾ, ವೆಬ್ ಕಾಸ್ಟಿಂಗ್ ಅಳವಡಿಕೆ ಕಾರ್ಯ ಕೈಗೊಳ್ಳಲಾಗಿದೆ. ಪರೀಕ್ಷಾ ಕಾರ್ಯಕ್ಕೆ ನಿಯೋಜಿಸಲ್ಪಟ್ಟ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಹೊರತುಪಡಿಸಿ ಇತರೆ ವ್ಯಕ್ತಿಗಳು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸುವಂತಿಲ್ಲ ಎಂದು ಸೂಚನೆ ನೀಡಿದರು.ತಾಪಂ ಇಒ ಟಿ.ಆರ್.ಮಲ್ಲಾಡದ ಮಾತನಾಡಿ, ಪರೀಕ್ಷೆ ಹುಕ್ಕೇರಿ ತಾಲೂಕಿನ ಪ್ರೌಢ ಶಾಲೆಗಳ ಸಾಧನೆ ಒರೆಗಲ್ಲಿಗೆ ಹಚ್ಚಲಿದೆ. ಈ ಪರೀಕ್ಷೆಯಲ್ಲಿ ತಾಲೂಕಿನ ಫಲಿತಾಂಶ ವೃದ್ಧಿಸಿ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಪಡೆಯುವ ಭರವಸೆಯಿದೆ ಎಂದರು.ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗುರುಶಾಂತ ಪಾವಟೆ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕಿ ಸವಿತಾ ಹಲಕಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ ಎ.ಎಸ್.ಪದ್ಮಣ್ಣವರ, ನೋಡಲ್ ಅಧಿಕಾರಿ ಭರತ ಪಾರ್ಥನಳ್ಳಿ, ಶಿಕ್ಷಣ ಸಂಯೋಜಕ ಎಂ.ಡಿ.ಬಡಿಗೇರ, ಮುಖ್ಯ ಶಿಕ್ಷಕರಾದ ಎಸ್.ಎಸ್.ಹಿರೇಮಠ, ಶಿವಾನಂದ ಗುಂಡಾಳಿ ಮತ್ತಿತರರು ಉಪಸ್ಥಿತರಿದ್ದರು.7203 ವಿದ್ಯಾರ್ಥಿಗಳು ನೋಂದಣಿತಾಲೂಕಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಒಟ್ಟು 7203 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಒಟ್ಟು 19 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು, ವ್ಯವಸ್ಥಿತ ಪರೀಕ್ಷೆಗೆ ಎಲ್ಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಭಾವತಿ ಪಾಟೀಲ ಹೇಳಿದರು.

ಒಟ್ಟು 7203 ವಿದ್ಯಾರ್ಥಿಗಳ ಪೈಕಿ 3313 ಗಂಡು, 3241 ಹೆಣ್ಣು ಮಕ್ಕಳಿದ್ದರೆ, 649 ಪುನರಾವರ್ತಿತ ವಿದ್ಯಾರ್ಥಿಗಳಿದ್ದಾರೆ. ಹುಕ್ಕೇರಿಯಲ್ಲಿ 3, ಸಂಕೇಶ್ವರ, ಬೆಲ್ಲದ ಬಾಗೇವಾಡಿ, ಯಮಕನಮರಡಿಯಲ್ಲಿ ತಲಾ 2 ಕೇಂದ್ರಗಳಿವೆ. ಹೆಬ್ಬಾಳ, ಹಿಡಕಲ್ ಡ್ಯಾಂ, ನಿಡಸೋಸಿ, ದಡ್ಡಿ, ಪಾಶ್ಚಾಪುರ, ಬಸ್ಸಾಪೂರ, ಬೆಣಿವಾಡ, ಕಣಗಲಾ, ಯರಗಟ್ಟಿಯಲ್ಲಿ ತಲಾ 1 ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಹೇಳಿದರು.

19 ಮುಖ್ಯ ಅಧೀಕ್ಷಕರು, 11 ಉಪ ಮುಖ್ಯ ಅಧೀಕ್ಷಕರು, 19 ಪ್ರಶ್ನೆ ಪತ್ರಿಕೆ ಕಸ್ಟೋಡಿಯನ್ಸ್, 19 ಜನ ಮೊಬೈಲ್ ಸ್ವಾಧೀನಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಭದ್ರತೆಗೆ 19 ಆರಕ್ಷಕರು, 8 ಮಾರ್ಗ ಅಧಿಕಾರಿಗಳು, 3 ಜನ ತಾಲೂಕು ಜಾಗೃತ ದಳಕ್ಕೆ, 19 ಜನ ಸ್ಥಾನಿಕ ಜಾಗೃತ ದಳಕ್ಕೆ ನಿಯೋಜಿಸಲಾಗಿದೆ. 9 ಜನ ತಾಲೂಕು ಮಟ್ಟದ ಅಧಿಕಾರಿಗಳಿದ್ದು, 19 ಆರೋಗ್ಯ ಕೌಂಟರ್‌ಗಳನ್ನು ತೆರೆಯಲಾಗಿದೆ. ಪರೀಕ್ಷಾ ಕಾರ್ಯಕ್ಕೆ ಒಟ್ಟು 550 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ