ಪ್ರಥಮ ಪೂಜಿತ ಗಣೇಶನನ್ನು ಸ್ವಾಗತಿಸಲು ಜನರು ಕಾತರದಲ್ಲಿದ್ದಾರೆ. ಗಣಪನ ಆರಾಧನೆಗೆ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಕೊಪ್ಪಳ: ಪ್ರಥಮ ಪೂಜಿತ ಗಣೇಶನನ್ನು ಸ್ವಾಗತಿಸಲು ಜನರು ಕಾತರದಲ್ಲಿದ್ದಾರೆ. ಗಣಪನ ಆರಾಧನೆಗೆ ಈಗಾಗಲೇ ಸಕಲ ಸಿದ್ಧತೆ ಕೈಗೊಂಡಿದ್ದಾರೆ.

ಜಿಲ್ಲಾದ್ಯಂತ ಗಣೇಶನ ಪ್ರತಿಷ್ಠಾಪಿಸಿ ಪೂಜಿಸಲು ಸಿದ್ಧತೆಗಳು ಜೋರಾಗಿದ್ದು, ಹಬ್ಬದ ಸಂಭ್ರಮ ಜನತೆಯಲ್ಲಿ ಇಮ್ಮಡಿಸಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಗಲ್ಲಿ ಗಲ್ಲಿಯಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ಜನರು ಸಿದ್ಧತೆ ಕೈಗೊಂಡಿದ್ದಾರೆ. ಜಿಲ್ಲಾಡಳಿತದಿಂದಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಹಾಗೂ ಮೆರವಣಿಗೆಗೆ ಕಟ್ಟುನಿಟ್ಟಾದ ಕ್ರಮಗಳನ್ನು ಜಾರಿಗೆ ತರಲಾಗಿದೆ. ಡಿಜೆ ರದ್ದುಗೊಳಿಸಲಾಗಿದೆ. ಮಕ್ಕಳು, ಯುವಕರು ಸೇರಿದಂತೆ ಸಂಘ ಸಂಸ್ಥೆಯವರು ಗಣೇಶನನ್ನು ವಿನೂತನವಾಗಿ ಪ್ರತಿಷ್ಠಾಪನೆ ಮಾಡಲು ಸಿದ್ಧರಾಗಿದ್ದಾರೆ. ಗಣೇಶ ಚತುರ್ಥಿ ಅಂದರೆ ಅದೊಂದು ಸಡಗರ, ಸಂಭ್ರಮದ ಸಂಕೇತ ಆಗಿದ್ದು, ಶ್ರದ್ಧಾ, ಭಕ್ತಿಯ ಗಣೇಶನ ಆರಾಧನೆ ಜರುಗಲಿದೆ.

ಖರೀದಿ ಜೋರು: ಗಣೇಶ ಚತುರ್ಥಿ ಹಿನ್ನೆಲೆ ಪೂಜಾ ಸಾಮಗ್ರಿ, ಅಲಂಕಾರಿಕ ವಸ್ತು, ಹಣ್ಣುಗಳ ಖರೀದಿ ನಗರದ ಮಾರುಕಟ್ಟೆಯಲ್ಲಿ ಜೋರಾಗಿತ್ತು. ಮನೆ ಮನೆಗಳಲ್ಲೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಆರಾಧನೆ ಜರುಗುತ್ತಿದ್ದು, ಮಾರುಕಟ್ಟೆ ಜನಜಂಗುಳಿಯಿಂದ ಕೂಡಿತ್ತು.

ಟ್ರಾಫಿಕ್: ಭಾನುವಾರ ಸಂಜೆ ನಗರದ ಬಸ್ ನಿಲ್ದಾಣದ ಎದುರು ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಜನ ಹೂವು, ಹಣ್ಣು ಹಾಗೂ ಅಲಂಕಾರಿಕ ವಸ್ತುಗಳ ಖರೀದಿ ಹಿನ್ನೆಲೆಯಲ್ಲಿ ಜನಜಂಗುಳಿಯಿಂದ ಟ್ರಾಫಿಕ್ ಆಗಿದ್ದು ಕಂಡು ಬಂತು.

ಗೌರಿ-ಗಣೇಶೋತ್ಸವಕ್ಕೆ ಸಿದ್ಧತೆ

ನವಲಿ: ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನ ನವಲಿ ಗ್ರಾಮದಲ್ಲಿ ಹಬ್ಬದ ಸಡಗರ ಆರಂಭವಾಗಿದ್ದು, ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅಗತ್ಯ ಸಿದ್ಧತೆ ಭರದಿಂದ ನಡೆಯುತ್ತಿವೆ. ಸುಭಾಷ್ ಚಂದ್ರ ಬೋಸ್ ತರುಣ ಸಂಘದ (ರಿ) ವತಿಯಿಂದ ಗ್ರಾಮದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದ್ದು, ಇದಕ್ಕಾಗಿ ಶೆಡ್ ನಿರ್ಮಾಣ ಕಾರ್ಯವನ್ನು ಯುವಕರು ಉತ್ಸಾಹದಿಂದ ಕೈಗೊಂಡಿದ್ದಾರೆ.ಹಬ್ಬದಂಗವಾಗಿ ನಿರ್ಮಿಸಲಾಗುತ್ತಿರುವ ಶೆಡ್‌ ಅನ್ನು ವಿವಿಧ ಅಲಂಕರಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಬಳಿಕ ಭಕ್ತರಿಗೆ ಅನುಕೂಲವಾಗುವಂತೆ ಪೂಜಾ ಹಾಗೂ ಇನ್ನಿತರ ವ್ಯವಸ್ಥೆಗಳನ್ನು ಕಲ್ಪಿಸಲು ಸಿದ್ಧತೆ ನಡೆಸಲಾಗುತ್ತಿದೆ. ಹಬ್ಬದ ದಿನಗಳಲ್ಲಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗುತ್ತಿದೆ. ಹಬ್ಬವನ್ನು ಶಾಂತಿಯುತವಾಗಿ ಹಾಗೂ ಭಕ್ತಿ-ಭಾವದಿಂದ ಆಚರಿಸಲು ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಸಿದ್ಧತೆ ನಡೆಸುತ್ತಿದ್ದಾರೆ.