ಸೋಲಿನ ಭಯಕ್ಕೆ ಕಾಂಗ್ರೆಸ್‌ ನಾಯಕರೆಲ್ಲ ಕಲ್ಬುರ್ಗಿ ಠಿಕಾಣಿ

| Published : Apr 30 2024, 02:00 AM IST

ಸೋಲಿನ ಭಯಕ್ಕೆ ಕಾಂಗ್ರೆಸ್‌ ನಾಯಕರೆಲ್ಲ ಕಲ್ಬುರ್ಗಿ ಠಿಕಾಣಿ
Share this Article
  • FB
  • TW
  • Linkdin
  • Email

ಸಾರಾಂಶ

ಉಸ್ತುವಾರಿ ಸಚಿವರಿಗೆ ಮತ್ತು ಇಲ್ಲಿನ ಶಾಸಕರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಗುರಿ ನೀಡಲಾಗಿದ್ದು ಒತ್ತಡಕ್ಕೆ ಬಿದ್ದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಜನ ಮಾತ್ರ ಬಿಜೆಪಿಯನ್ನು ಆಯ್ಕೆ ಮಾಡಲು ಈಗಾಗಲೇ ನಿರ್ಣಯ ಕೈಗೊಂಡಿದ್ದಾರೆ: ಜಾಧವ್‌

ಕನ್ನಡಪ್ರಭ ವಾರ್ತೆ ಕಲಬುರಗಿ

ಕಾಂಗ್ರೆಸ್‌ಗೆ ಸೋಲಿನ ಭಯದಿಂದ ದೇಶದ ನಾಯಕರೆಲ್ಲಾ ಕಲಬುರಗಿಯಲ್ಲಿ ಠಿಕಾಣಿ ಹೂಡಿ ಶತಾಯಗತಾಯ ಖರ್ಗೆ ಅಳಿಯನನ್ನು ಗೆಲ್ಲಿಸಲು ಹೆಣಗಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಡಾ. ಉಮೇಶ್ ಜಾಧವ್ ಲೇವಡಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಚುನಾವಣೆಯನ್ನು ಮರೆತ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆಯವರು ನಾಲ್ಕನೇ ಬಾರಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಲ್ಲಿ ಪ್ರವಾಸ ಮಾಡುತ್ತಿದ್ದಾರೆ.

ತೆಲಂಗಾಣದ ಮುಖ್ಯಮಂತ್ರಿಯನ್ನು ಕರೆಸಿ ಮತಯಾಚಿಸುತ್ತಿದ್ದಾರೆ. ಈಗಾಗಲೇ ರಾಜ್ಯದ ಸಿಎಂ, ಡಿಸಿಎಂ ಭೇಟಿ ನೀಡಿದ್ದಾರೆ, ಅಳಿಯನ ಗೆಲುವಿಗೆ ರಾಯಚೂರು, ಕಲ್ಬುರ್ಗಿ ಉಸ್ತುವಾರಿ ಸಚಿವರು ಇಲ್ಲೇ ಮೊಕ್ಕಾಂ ಹೂಡಿ ಪಂಚಾಯ್ತಿ ಮಟ್ಟಕ್ಕೆ ಹೋಗಿ ಪ್ರಚಾರ ಭಾಷಣ ಮಾಡಿ ಸೋಲಿನ ದವಡೆಯಿಂದ ಕಾಂಗ್ರೆಸ್‌ನ್ನು ಪಾರು ಮಾಡಲು ಎಲ್ಲ ಶಕ್ತಿಯನ್ನು ಪ್ರಯೋಗಿಸುತ್ತಿದ್ದಾರೆಂದು ಟೀಕಿಸಿದರು.

ಉಸ್ತುವಾರಿ ಸಚಿವರಿಗೆ ಮತ್ತು ಇಲ್ಲಿನ ಶಾಸಕರಿಗೆ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಗುರಿ ನೀಡಲಾಗಿದ್ದು ಒತ್ತಡಕ್ಕೆ ಬಿದ್ದು ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದುಬಿಟ್ಟಿದೆ. ಆದರೆ ಜನ ಮಾತ್ರ ಬಿಜೆಪಿಯನ್ನು ಆಯ್ಕೆ ಮಾಡಲು ಈಗಾಗಲೇ ನಿರ್ಣಯ ಕೈಗೊಂಡಿದ್ದಾರೆ ಎಂದು ಜಾಧವ್ ಹೇಳಿದರು.

ಈ ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ಒಡ್ಡಿ ಗೆಲ್ಲುವುದಕ್ಕಾಗಿ ಹಣದ ಹೊಳೆಯನ್ನು ಹರಿಸಲೂ ಹೊರಟಿದ್ದಾರೆ. ಈಗಾಗಲೇ ಎರಡು ಕೋಟಿ ರುಪಾಯಿ ಕಾಂಗ್ರೆಸ್ ನಾಯಕರ ಕಾರಿನಲ್ಲಿ ಪತ್ತೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕಾಂಗ್ರೆಸ್ ನವರ ಜಾಣ ಕುರುಡುತನ ಹಾಗೂ ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಸತ್ಯ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ದೂರಿದರು.

ವಂದೇ ಭಾರತ್‌ ರೈಲುಗಾಡಿ ನಿತ್ಯ ಸಂಚರಿಸುತ್ತಿದ್ದರೂ ಸ್ಥಗಿತಗೊಂಡಿದೆ ಎಂದು ಸುಳ್ಳು ಹೇಳುತ್ತಿದ್ದಾರೆ. ವಂದೇ ಭಾರತ್ ರೈಲು ಗಾಡಿಯು ಲಾಭದಾಯಕವಾಗಿ ಸಂಚಾರ ನಡೆಸುತ್ತಿದೆ. ಕಲ್ಬುರ್ಗಿಯಲ್ಲಿ ಜವಳಿ ಪಾರ್ಕ್‌ಗೆ ಮಾ.23ರಂದು ಶಿಲಾನ್ಯಾಸ ನೆರವೇರಿಸಲಾಗಿದೆ. ಯೋಜನೆ ಆರಂಭದ ಪತ್ರಕ್ಕೆ ಸಹಿ ಕೂಡ ಹಾಕಲಾಗಿದ್ದು ಬಂಡವಾಳ ಹೂಡಿಕೆದಾರರನ್ನು ಗುರುತಿಸಲಾಗಿದೆ. ಇದರಿಂದ ಒಂದು ಲಕ್ಷ ನೇರ ಮತ್ತು ಎರಡು ಲಕ್ಷ ಪರೋಕ್ಷ ಉದ್ಯೋಗ ಸಿಗಲಿದೆ. ಭಾರತ್ ಮಾಲಾ ಯೋಜನೆಯಡಿ 1475 ಕೋಟಿ ರೂಪಾಯಿ ವೆಚ್ಚದಲ್ಲಿ 71 ಕಿಲೋಮೀಟರ್ ಉದ್ದದ ರಸ್ತೆಯು ಅಫಜಲ್ಪುರ ಮತ್ತು ಜೇವರಗಿ ತಾಲೂಕುಗಳಲ್ಲಿ ನಿರ್ಮಾಣವಾಗುತ್ತಿದ್ದು ಎರಡು ಸಲ ವೀಕ್ಷಣೆ ಕೂಡಾ ಮಾಡಲಾಗಿದೆ. ಹುಮನಾಬಾದ್ ಬೇಸ್ ನಿಂದ ರಾಮ ಮಂದಿರದವರೆಗೆ ಸರ್ವಿಸ್ ರಸ್ತೆ ನಿರ್ಮಾಣಗೊಳ್ಳುತ್ತಿದೆ. ಕಾಂಗ್ರೆಸ್ ಇದನ್ನು ಸ್ವಾರ್ಥಕ್ಕಾಗಿ ತಡೆಯಲು ಪ್ರಯತ್ನ ಮಾಡಿತ್ತು. 60 ರಿಂದ 70 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಗಿಣಾ ಸೇತುವೆ ನಿರ್ಮಾಣ ಕೊನೆಯ ಹಂತದಲ್ಲಿದೆ ಎಂದರು.

ಜಾಧವ್ ಅವಧಿಯಲ್ಲಿ ಒಂದು ಇಟ್ಟಂಗಿಯನ್ನು ಕೂಡ ಇಟ್ಟಿಲ್ಲ ಎಂದು ಸಚಿವ ಶರಣಪ್ರಕಾಶ್ ಪಾಟೀಲ್ ಆರೋಪ ಮಾಡುತ್ತಿದ್ದಾರೆ. ಅದೆಲ್ಲವೂ ಸುಳ್ಳು ಎಂದರು. ಇವು ಯಾವುದು ಕೂಡ ಕಾಂಗ್ರೆಸ್ಸಿನ ಕಣ್ಣಿಗೆ ಕಾಣುತ್ತಿಲ್ಲ. ಧೈರ್ಯವಿದ್ದರೆ ಮಲ್ಲಿಕಾರ್ಜುನ ಖರ್ಗೆಯವರಾಗಲಿ ಅಥವಾ ಈಗಿನ ಕಾಂಗ್ರೆಸ್ಸಿನ ಅಭ್ಯರ್ಥಿ ಚರ್ಚೆಗೆ ಬರಲಿ ಸಿದ್ದವಾಗಿದ್ದೇನೆ ಎಂದು ಜಾಧವ್ ಸವಾಲೆಸೆದರು.

ಅಭಿವೃದ್ಧಿಯನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂಬುದಕ್ಕೆ ಕಲ್ಬುರ್ಗಿ ಜಿಲ್ಲೆಯಲ್ಲಿ ಕೇಂದ್ರ ಪುರಸ್ಕೃತ ಯೋಜನೆಗಳ ಅವಲೋಕನದ ದಿಶಾ ಸಭೆಯನ್ನು ನಡೆಸಲು ಬಿಡಲಿಲ್ಲ. ಒಂದು ಬಾರಿ ನಾನು ಎರಡು ಬಾರಿ ಕೇಂದ್ರ ಸಚಿವ ಭಗವಂತ ಖೂಬಾ ಸಭೆ ನಡೆಸಿದ್ದು ಬಿಟ್ಟರೆ ದಿಶಾ ಅಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು 18 ತಿಂಗಳಾದರೂ ಸಭೆ ನಡೆಸಲಿಲ್ಲ. 11 ತಿಂಗಳಲ್ಲಿ ಕೇವಲ ಒಂದು ಬಾರಿ ಮಾತ್ರ ಕೆಡಿಪಿ ಸಭೆಯನ್ನು ಮಾಡಿ ಕೈ ತೊಳೆದುಕೊಂಡಿದ್ದಾರೆ.

ಮಾತೆತ್ತಿದರೆ 371ನೇ ಜೆ ವಿಧಿಯನ್ನು ಜಾರಿಗೊಳ್ಳಲು ನಾನೇ ಕಾರಣ ಎಂದು ಹೇಳುವ ಮಲ್ಲಿಕಾರ್ಜುನ ಖರ್ಗೆಯವರು ಇದಕ್ಕಾಗಿ ದುಡಿದ ವೈಜನಾಥ್ ಪಾಟೀಲ್, ವಿಶ್ವನಾಥ ರೆಡ್ಡಿ ಮುದ್ನಾಳ್, ಬಾಪು ಗೌಡ, ಹನುಮಂತ ರಾವ್ ದೇಸಾಯಿ, ವಿದ್ಯಾಧರ ಗುರೂಜಿ, ಧರ್ಮಸಿಂಗ್ ಮುಂತಾದವರಸೇವೆಯನ್ನು ಮರೆತೇ ಬಿಟ್ಟಿದ್ದಾರೆ ಎಂದು ದೂರಿದರು.

ಅದ್ವಾನಿಯವರು ಈ ವಿಧಿ ತಿರಸ್ಕರಿಸಿದ್ದರು ಎಂಬುದಾಗಿ ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ವಿಸ್ತೃತ ವರದಿ ಸಲ್ಲಿಸುವಂತೆ ಮನಮೋಹನ ಸಿಂಗ್ ಮತ್ತು ಅದ್ವಾನಿ ರಾಜ್ಯಕ್ಕೆ ಕಳುಹಿಸಿದರೆ ವಿನಹಃ ತಿರಸ್ಕರಿಸಲಿಲ್ಲ. ಅರ್ಧ ಸತ್ಯವನ್ನು ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸರಕಾರವು ಹಿಂದುಳಿದ ವರ್ಗದ ಮೀಸಲಾತಿಯನ್ನು ಕಸಿದು ಅಲ್ಪಸಂಖ್ಯಾತರಿಗೆ ನೀಡಲು ಹುನ್ನಾರ ನಡೆಸಿ ರಾಷ್ಟ್ರೀಯ ಹಿಂದುಳಿದ ಆಯೋಗಕ್ಕೆ ರಹಸ್ಯ ಪತ್ರ ಬರೆದಿರುವುದು ಹಿಂದುಳಿದ ವರ್ಗಗಳಿಗೆ ಮಾಡಿದ ದೊಡ್ಡ ಅನ್ಯಾಯ ಎಂದು ಕಿಡಿಕಾರಿದರು.

ಎರಡು ಲಕ್ಷ ಅಂತರದಿಂದ ಗೆಲುವು ಖಚಿತ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಎರಡು ಲಕ್ಷ ಮತಗಳ ಅಂತರದಿಂದ ಗೆಲುವು ಸಿಗಲಿದೆ ಎಂಬ ವಿಶ್ವಾಸವನ್ನು ಜಾಧವ್ ವ್ಯಕ್ತಪಡಿಸಿದರು. ಮಾಲೀಕಯ್ಯ ಗುತ್ತೇದಾರ್ ಪಕ್ಷ ಬಿಟ್ಟ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ ಕೆಲವೊಬ್ಬ ನಾಯಕರು ಪಕ್ಷ ಬಿಟ್ಟಾಗ ಪ್ಲಸ್ ಮೈನಸ್ ಆಗುವುದು ಸ್ವಾಭಾವಿಕ ಎಂದು ಹೇಳಿದರು.

ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿಯ ಚುನಾವಣಾ ಉಸ್ತುವಾರಿ ರಘುನಾಥ ಮಲ್ಕಾಪುರೆ, ಶಾಸಕ ಬಸವರಾಜ್ ಮತ್ತಿಮುಡು, ಲಲಿತ ಅನಪೂರ, ಅಶೋಕ್ ಬಗಲಿ ಉಪಸ್ಥಿತರಿದ್ದರು.

ಆರ್‌ಡಿ ಪಾಟೀಲ್ ಕಾಂಗ್ರೆಸ್ಸಿನ ಕೂಸು: ಪಿಎಸ್ಐ ಹಗರಣದ ಆರೋಪಿಯ ಮನೆಗೆ ಮತಯಾಚಿಸಲು ಹೋಗುವುದರಲ್ಲಿ ತಪ್ಪೇನಿದೆ. ಸಂವಿಧಾನದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಎಲ್ಲರಲ್ಲಿಯೂ ಮತಯಾಚಿಸಲು ಅನುವು ಮಾಡಿ ಕೊಟ್ಟಿರುವ ಪ್ರಕಾರ ಪ್ರಚಾರದ ವೇಳೆಯಲ್ಲಿ ಪ್ರತಿ ಮನೆಗಳಿಗೆ ಭೇಟಿ ನೀಡಿದಾಗ ಅವರ ಮನೆಗೂ ಭೇಟಿ ನೀಡಿ ಮತಯಾಚಿಸಿದ್ದೇನೆ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು. ಆರ್ ಡಿ ಪಾಟೀಲ್ ಕಾಂಗ್ರೆಸಿನ ಕೂಸು. ಅವರನ್ನು ಬೆಳೆಸಿದ್ದೆ ಕಾಂಗ್ರೆಸ್ ಪಕ್ಷವಾಗಿದ್ದು ಅದುವೇ ನೇರ ಹೊಣೆ ಎಂದರು.