ಜೋರು ಮಳೆಗೆ ಮಂಡ್ಯ ನಗರದ ಎಲ್ಲಾ ರಸ್ತೆಗಳು ಜಲಾವೃತ

| Published : May 23 2024, 01:05 AM IST

ಜೋರು ಮಳೆಗೆ ಮಂಡ್ಯ ನಗರದ ಎಲ್ಲಾ ರಸ್ತೆಗಳು ಜಲಾವೃತ
Share this Article
  • FB
  • TW
  • Linkdin
  • Email

ಸಾರಾಂಶ

ಮಳೆ ಬಂತೆಂದರೆ ಮಹಾವೀರ ವೃತ್ತ ಸಂಪೂರ್ಣವಾಗಿ ಜಲಾವೃತವಾಗುವುದು ಸರ್ವೇಸಾಮಾನ್ಯವಾಗಿದೆ. ಇಲ್ಲಿನ ಚರಂಡಿ ವ್ಯವಸ್ಥ ಸುಸ್ಥಿತಿಯಲ್ಲಿಲ್ಲ. ಕಿರಿದಾದ ಚರಂಡಿಯಲ್ಲಿ ನೀರು ನಿಧಾನವಾಗಿ ಹರಿದುಹೋಗುವುದರಿಂದ ಮೇಲಿನಿಂದ ಹರಿದುಬರುವ ನೀರು ಇಲ್ಲಿ ಸಂಗ್ರಹವಾಗಿ ನಿಲ್ಲುತ್ತದೆ. ಇದರಿಂದ ವಾಹನಸವಾರರು, ಪಾದಚಾರಿಗಳು, ವ್ಯಾಪಾರಸ್ಥರು, ವರ್ತಕರು ದಶಕದಿಂದಲೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಯಾರೊಬ್ಬರೂ ಸಮಸ್ಯೆಗೆ ಮುಕ್ತಿ ದೊರಕಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಬುಧವಾರ ಸಂಜೆ ನಗರದಲ್ಲಿ ಸುರಿದ ಜೋರು ಮಳೆಗೆ ರಸ್ತೆಗಳು ಜಲಾವೃತಗೊಂಡವು. ಚರಂಡಿಗಳು ತುಂಬಿ ಹರಿದಿದ್ದರಿಂದ ರಸ್ತೆ ಸಂಚಾರಕ್ಕೆ ಕೆಲ ಸಮಯದವರೆಗೆ ಅಡಚಣೆ ಉಂಟಾಗಿತ್ತು.

ಸಂಜೆ ೪.೧೫ರ ಸಮಯಕ್ಕೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆ ಕಾಲ ಜೋರಾಗಿಯೇ ಸುರಿಯಿತು. ಇದರಿಂದ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆ, ವಿವೇಕಾನಂದ ರಸ್ತೆ, ಕೆ.ಆರ್.ರಸ್ತೆ, ವಿ.ವಿ.ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನೀರು ತುಂಬಿ ಹರಿಯಿತು. ಮಹಾವೀರ ವೃತ್ತದ ಬಳಿ ಮಂಡಿಯುದ್ದ ನೀರು ನಿಂತು ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಯಿತು.

ಹಲವರು ತುಂಬಿ ಹರಿಯುತ್ತಿದ್ದ ನೀರಿನಲ್ಲೇ ವಾಹನಗಳನ್ನು ಚಾಲನೆ ಮಾಡಿಕೊಂಡು ಮುಂದೆ ಸಾಗಿದರು. ರಸ್ತೆಯ ಎರಡೂ ಕಡೆ ವಾಹನಗಳನ್ನು ನಿಲ್ಲಿಸಿದ್ದರೂ ನೀರಿನ ಹರಿವು ಕಡಿಮೆಯಾಗುವವರೆಗೂ ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಗಳು ತುಂಬಿ ಹರಿದಿದ್ದರಿಂದ ವಿ.ವಿ.ರಸ್ತೆಯ ಪ್ರಧಾನ ಅಂಚೆ ಕಚೇರಿ ಆವರಣಕ್ಕೂ ನೀರು ನುಗ್ಗಿ ಜಲಾವೃತಗೊಂಡಿತ್ತು.

ಸಮಸ್ಯೆಗೆ ಸಿಗದ ಮುಕ್ತಿ:

ಮಳೆ ಬಂತೆಂದರೆ ಮಹಾವೀರ ವೃತ್ತ ಸಂಪೂರ್ಣವಾಗಿ ಜಲಾವೃತವಾಗುವುದು ಸರ್ವೇಸಾಮಾನ್ಯವಾಗಿದೆ. ಇಲ್ಲಿನ ಚರಂಡಿ ವ್ಯವಸ್ಥ ಸುಸ್ಥಿತಿಯಲ್ಲಿಲ್ಲ. ಕಿರಿದಾದ ಚರಂಡಿಯಲ್ಲಿ ನೀರು ನಿಧಾನವಾಗಿ ಹರಿದುಹೋಗುವುದರಿಂದ ಮೇಲಿನಿಂದ ಹರಿದುಬರುವ ನೀರು ಇಲ್ಲಿ ಸಂಗ್ರಹವಾಗಿ ನಿಲ್ಲುತ್ತದೆ. ಇದರಿಂದ ವಾಹನಸವಾರರು, ಪಾದಚಾರಿಗಳು, ವ್ಯಾಪಾರಸ್ಥರು, ವರ್ತಕರು ದಶಕದಿಂದಲೂ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಆದರೂ ಯಾರೊಬ್ಬರೂ ಸಮಸ್ಯೆಗೆ ಮುಕ್ತಿ ದೊರಕಿಸುವ ಪ್ರಯತ್ನವನ್ನೇ ನಡೆಸುತ್ತಿಲ್ಲ.

ಜಲಾವೃತಗೊಳ್ಳುವ ಸ್ಥಳದಿಂದ ನಗರಸಭೆ ಕೂಗಳತೆ ದೂರದಲ್ಲಿದೆ. ನಗರಸಭೆ ಅಧಿಕಾರಿಗಳು ಮಳೆಯಿಂದ ಜಲವೃತಗೊಳ್ಳುವ ಅವ್ಯವಸ್ಥೆಯನ್ನು ಕಣ್ಣಾರೆ ನೋಡಿಯೂ ಕುರುಡರಾಗಿದ್ದಾರೆ. ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸುವ ಮೂಲಕ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವ ಇಚ್ಛಾಶಕ್ತಿ, ಬದ್ಧತೆಯನ್ನು ಯಾರೊಬ್ಬರೂ ಪ್ರದರ್ಶಿಸದಿರುವುದರಿಂದ ಸಮಸ್ಯೆ ಜೀವಂತವಾಗಿ ಉಳಿಯುವಂತಾಗಿದೆ.

ಹೆದ್ದಾರಿಯಲ್ಲಿ ನಿಲ್ಲುತ್ತಿರುವ ನೀರು:

ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯ ಹಲವು ಕಡೆಗಳಲ್ಲಿ ನೀರು ಅಲ್ಲಲ್ಲಿ ಸಂಗ್ರಹಗೊಳ್ಳುತ್ತಿರುವುದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಅಲ್ಲಿಯೂ ಕೂಡ ಮಳೆ ನೀರು ರಸ್ತೆಯಲ್ಲಿ ನಿಲ್ಲದಂತೆ ಸುಗಮವಾಗಿ ಚರಂಡಿ ಸೇರುವಂತೆ ವ್ಯವಸ್ಥೆಯನ್ನು ಮಾಡಿಲ್ಲ. ಮಿಮ್ಸ್ ಮೆಡಿಕಲ್ ಕಾಲೇಜು ಎದುರು, ಮೈಷುಗರ್ ವೃತ್ತ, ಸಿಲ್ವರ್ ಜ್ಯೂಬಿಲಿ ಉದ್ಯಾನವನದ ಎದುರು, ಮಹಾವೀರ ರಸ್ತೆ ಬಳಿ ನೀರು ನಿಲುಗಡೆಯಾಗುತ್ತಿದೆ. ಆ ನೀರು ರಸ್ತೆಯಲ್ಲಿ ನಿಲ್ಲದಂತೆ ಅಕ್ಕ-ಪಕ್ಕದ ಚರಂಡಿಗಳಿಗೆ ಹರಿದುಹೋಗುವಂತೆ ವ್ಯವಸ್ಥೆಗಳಿಲ್ಲದಿರುವುದರಿಂದ ವಾಹನ ಸವಾರರು ನೀರಿನೊಳಗೆ ಹಾದುಹೋಗುವುದು ಅನಿವಾರ್ಯವಾಗಿದೆ. ಈ ಸಮಯದಲ್ಲಿ ಅಕ್ಕ-ಪಕ್ಕದಲ್ಲಿ ಹಾದುಹೋಗುವವರಿಗೆ ನೀರು ಬಡಿಯುವುದೂ ಸಾಮಾನ್ಯವಾಗಿದೆ.

ಇನ್ನು ಮಳೆಯಿಂದ ನಗರದೊಳಗೆ ಮ್ಯಾನ್‌ಹೋಲ್‌ಗಳು ತುಂಬಿ ಹರಿಯುವುದೂ ಸರ್ವೇಸಾಮಾನ್ಯವಾಗಿದೆ. ನಗರದೊಳಗಿನ ಒಳಚರಂಡಿ ವ್ಯವಸ್ಥೆ ಅದ್ವಾನಗೊಂಡಿರುವುದರಿಂದ ಮಳೆ ಬಿದ್ದಾಗಲೆಲ್ಲಾ ಮ್ಯಾನ್‌ಹೋಲ್‌ಗಳು ಉಕ್ಕಿ ಹರಿಯುತ್ತವೆ. ಈ ಸಮಸ್ಯೆಗೂ ಕೂಡ ಶಾಶ್ವತ ಪರಿಹಾರ ದೊರಕದಂತಾಗಿದೆ.