ಸಮಾಧಾನದಿಂದ ಇದ್ದಾಗ ಮಾತ್ರ ಎಲ್ಲ ಕೆಲಸಗಳು ಸಾಧ್ಯ: ನ್ಯಾಯಾಧೀಶ ಎಂ.ಎಲ್. ಪೂಜೇರಿ

| Published : Dec 23 2024, 01:02 AM IST

ಸಮಾಧಾನದಿಂದ ಇದ್ದಾಗ ಮಾತ್ರ ಎಲ್ಲ ಕೆಲಸಗಳು ಸಾಧ್ಯ: ನ್ಯಾಯಾಧೀಶ ಎಂ.ಎಲ್. ಪೂಜೇರಿ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಧಾನದಿಂದ ಇದ್ದಾಗ ಮಾತ್ರ ಎಲ್ಲ ಕೆಲಸವೂ ಸಾಧ್ಯವಾಗಲಿದೆ.

ವಿಧಾನ ಸೇ ಸಮಾಧಾನ: ಕುಷ್ಟಗಿಯಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮಕನ್ನಡಪ್ರಭ ವಾರ್ತೆ ಕುಷ್ಟಗಿ

ಸಮಾಧಾನದಿಂದ ಇದ್ದಾಗ ಮಾತ್ರ ಎಲ್ಲ ಕೆಲಸವೂ ಸಾಧ್ಯವಾಗಲಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಎಂ.ಎಲ್. ಪೂಜೇರಿ ಹೇಳಿದರು.

ಪಟ್ಟಣದ ದೇವರಾಜ ಅರಸು ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ವಕೀಲರ ಸಂಘ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆಯ ವತಿಯಿಂದ ವಿಧಾನ ಸೇ ಸಮಾಧಾನ ಕಾರ್ಯಕ್ರಮದ ಅಂಗವಾಗಿ ನಡೆದ ಮಹಿಳೆಯರಿಗಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಮಾನಗಳಲ್ಲಿ ಮಾನವನಲ್ಲಿ ಸಮಾಧಾನ ಗುಣವೆ ಇಲ್ಲದಿರುವುದು ಅನೇಕ ಅನಾಹುತಗಳಿಗೆ ಕಾರಣವಾಗಲಿದೆ ಎಂದರು.

ಕಾನೂನಿನಲ್ಲಿ ಒಂದು ಕೆಲಸ ಸಂಪೂರ್ಣವಾಗಿ ನಡೆಯಲು ಅನೇಕ ನಿಯಮಗಳು ಇದ್ದು, ಅದಕ್ಕೆ ಬದ್ಧವಾಗಿ ಸಮಾಧಾನದಿಂದ ಇದ್ದುಕೊಂಡು ನಡೆದುಕೊಂಡಾಗ ಮಾತ್ರ ಅಂದುಕೊಂಡಂತಹ ಕೆಲಸಗಳು ಸಂಪೂರ್ಣವಾಗಲಿವೆ. ಅವಸರದಿಂದ ಮಾಡಿದರೆ ಕೆಲಸವೂ ಅರೆಬರೆಯಾಗುತ್ತದೆ, ಅನಾಹುತಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದರು.

ಮನೆಯೆ ಮೊದಲ ಪಾಠಶಾಲೆಯಾಗಿದ್ದು, ಮಹಿಳೆಯರು ಮೊದಲು ಉತ್ತಮ ಶಿಕ್ಷಣ ಪಡೆದುಕೊಂಡು ಕಾನೂನಿನ ನಿಯಮಗಳನ್ನು ಅರಿತುಕೊಳ್ಳಬೇಕು. ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣ ಹಾಗೂ ನೈತಿಕ ಮೌಲ್ಯಗಳನ್ನು ಕಲಿಸಿಕೊಟ್ಟು ಕಾನೂನಿನ ಚೌಕಟ್ಟಿನಲ್ಲಿ ನಿಯಮಗಳಂತೆ ನಡೆದುಕೊಳ್ಳುವುದನ್ನು ತಿಳಿಸಬೇಕಾಗಿರುವುದು ಅಗತ್ಯವಾಗಿದೆ ಎಂದರು.

ತಹಸೀಲ್ದಾರ್‌ ಅಶೋಕ ಶಿಗ್ಗಾಂವಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮೇಲ್ವಿಚಾರಕಿ ಮಂಜುಳಾ ಹಕ್ಕಿ, ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ, ಸಹಾಯಕ ಸರ್ಕಾರಿ ಅಭಿಯೋಜಕ ರಾಯನಗೌಡ ಎಲ್. ಭಾಗವಹಿಸಿದ್ದರು. ದೋಟಿಹಾಳ ವಲಯದ ಅಂಗನವಾಡಿ ಮೇಲ್ವಿಚಾರಕಿ ಅನ್ನಪೂರ್ಣಾ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.