ಚರ್ಚೆ ಇಲ್ಲದೇ ವಿಷಯಗಳೆಲ್ಲ ಪಾಸ್‌ ..!

| Published : Dec 31 2023, 01:30 AM IST

ಸಾರಾಂಶ

ಶನಿವಾರ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ನಡೆಯಿತು. ಯಾವುದೇ ಬಗೆಯ ಚರ್ಚೆ ಇಲ್ಲದೇ ಪ್ರಮುಖ ವಿಷಯಗಳನ್ನು ಅಂಗೀಕರಿಸಲಾಯಿತು.

- ಗದ್ದಲ, ಗಲಾಟೆಯಲ್ಲೇ ನಡೆದ ಪಾಲಿಕೆ ಸಾಮಾನ್ಯ ಸಭೆ

- ಚರ್ಚೆ ಇಲ್ಲದೇ ವಿಷಯಗಳ ಅಂಗೀಕಾರ

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ಆಡಳಿತ ಹಾಗೂ ವಿಪಕ್ಷ ಸದಸ್ಯರ ಜಟಾಪಟಿ, ಗದ್ದಲ, ವಾಗ್ವಾದದ ನಡುವೆಯೇ ಹು-ಧಾ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಶನಿವಾರ ಕಾಟಾಚಾರಕ್ಕೆಂಬಂತೆ ನಡೆದುಹೋಯಿತು. ಯಾವುದೇ ಬಗೆಯ ಚರ್ಚೆ ಇಲ್ಲದೇ ಪ್ರಮುಖ ವಿಷಯಗಳನ್ನು ಅಂಗೀಕರಿಸಲಾಯಿತು.

ಸಾಮಾನ್ಯಸಭೆಗೂ ಮೊದಲು ಚರ್ಚೆ ಮತ್ತು ಅನುಮೋದನೆಗೆ ಒಳಪಡಿಸಬೇಕಾದ ವಿಷಯ ಪಟ್ಟಿಯನ್ನು ಸದಸ್ಯರಿಗೆ ನೀಡಬೇಕು. ಈ ಪ್ರಕಾರ 9 ಪ್ರಮುಖ ವಿಷಯಗಳ ಪಟ್ಟಿಯನ್ನು ತಯಾರು ಮಾಡಿ ಎಲ್ಲರಿಗೂ ಕೊಡಲಾಗಿದೆ. ಆದರೆ, ವಿಷಯ ಪಟ್ಟಿಗೆ ಸೇರದ ಮಹತ್ವದ ವಿಷಯಗಳಿವೆ. ಅವುಗಳನ್ನು ಸಭೆಯಲ್ಲಿ ಹೆಚ್ಚುವರಿ ಪಟ್ಟಿಯಲ್ಲಿ ನಾಲ್ಕೈದು ವಿಷಯಗಳನ್ನು ತರಲಾಗಿತ್ತು. ಈ ವಿಷಯಗಳ ಚರ್ಚೆ ಮಾಡಬೇಕೆಂದು ಸಭಾನಾಯಕ ಶಿವು ಹಿರೇಮಠ ಪ್ರಸ್ತಾಪಿಸಿದರು. ಆಗ ಸಭೆಯಲ್ಲಿ ಕೋಲಾಹಲ ಎದ್ದಿತು.

ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, 15 ದಿನದ ಮುಂಚೆಯೇ ಎಲ್ಲರಿಗೂ ಏನಾದರೂ ವಿಷಯಗಳಿದ್ದರೆ ತಿಳಿಸಿ ಎಂದು ಪರಿಷತ್‌ ಕಾರ್ಯದರ್ಶಿ ತಿಳಿಸಿರುತ್ತಾರೆ. ಆದರೂ ಸಭೆ ನಡೆಯುವಾಗಲೇ ಹೆಚ್ಚುವರಿ ವಿಷಯ ಪಟ್ಟಿ ಬರುತ್ತದೆ. ಸಾಮಾನ್ಯ ಸಭೆಯಲ್ಲಿ ಚರ್ಚೆಗೆ ಬರುವ ವಿಷಯಗಳ ಬಗ್ಗೆ ಪ್ರತಿಪಕ್ಷದೊಂದಿಗೆ ಚರ್ಚೆ ನಡೆಸುವುದೇ ಇಲ್ಲ ಏಕೆ ಎಂದು ಪ್ರಶ್ನಿಸಿದರು. ಅದಕ್ಕೆ ಕಾಂಗ್ರೆಸ್‌ನ ಸೆಂಥಿಲ್‌ಕುಮಾರ, ಇಮ್ರಾನ ಯಲಿಗಾರ, ಆರೀಫ್‌ ಭದ್ರಾಪುರ ಸೇರಿದಂತೆ ಹಲವರು ಧ್ವನಿಗೂಡಿಸಿದರು.

ಆಗ ಆಡಳಿತ ಪಕ್ಷದ ಸದಸ್ಯರು, ಕೇಂದ್ರ ಸರ್ಕಾರದ ₹130 ಕೋಟಿ ಅನುದಾನ ಬರಲಿದೆ. ಆ ಬಗ್ಗೆ ಚರ್ಚಿಸಬೇಕು. ಬಿಬಿಎಂಪಿ ಅನುದಾನ ಮರುಹಂಚಿಕೆ ಸೇರಿದಂತೆ ವಿವಿಧ ಪ್ರಮುಖ ವಿಷಯಗಳಿವೆ. ಅವುಗಳ ಬಗ್ಗೆ ಚರ್ಚೆ ನಡೆಯಬೇಕಿದೆ. ಹೆಚ್ಚುವರಿ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂದು ತಿಳಿಸಿದರು.

ಆದರೆ ಒಪ್ಪದೇ ಪ್ರತಿಪಕ್ಷದ ಸದಸ್ಯರೆಲ್ಲರೂ ಸದನದ ಬಾವಿಗಿಳಿದು ಪ್ರತಿಭಟನೆ ಶುರು ಮಾಡಿದರು. ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಸದಸ್ಯರು ಘೋಷಣೆ ಕೂಗುತ್ತಾ ಅವರೂ ಪ್ರತಿಭಟನೆ ನಡೆಸಿದರು. ಈ ವೇಳೆ ಎರಡೂ ಪಕ್ಷಗಳ ಮಧ್ಯೆ ವಾಗ್ವಾದ, ಜಟಾಪಟಿ ನಡೆಯಿತು. ಅಕ್ಷರಶಃ ಸಭೆಯಲ್ಲಿ ಏನು ನಡೆಯುತ್ತಿದೆ ಎಂಬುದು ಕೂಡ ತಿಳಿಯದೇ ಮಾರುಕಟ್ಟೆಯಂತಾಗಿತ್ತು.

ಕೊನೆಗೆ ಹತ್ತು ನಿಮಿಷ ಸಭೆಯನ್ನು ಮೇಯರ್‌ ವೀಣಾ ಬಾರದ್ವಾಡ ಮುಂದೂಡಿದರು. ತಮ್ಮ ಕಚೇರಿಯಲ್ಲೇ ಪ್ರತಿಪಕ್ಷ- ಆಡಳಿತ ಪಕ್ಷದ ಹಿರಿಯ ಸದಸ್ಯರನ್ನು ಕರೆದು ಸಂಧಾನಕ್ಕೆ ಪ್ರಯತ್ನಿಸಿದರು. ಆದರೆ, ಪ್ರತಿಪಕ್ಷದ ಸದಸ್ಯರು ಮಾತ್ರ ಇದಕ್ಕೆ ಒಪ್ಪಲೇ ಇಲ್ಲ. ಬಳಿಕ ಪುನಃ ಆರಂಭವಾದ ಸಭೆಯಲ್ಲೂ ಗದ್ದಲ, ಗಲಾಟೆಯೆಲ್ಲ ಮುಂದುವರಿಯಿತು. ಈ ವೇಳೆ ಮೇಯರ್‌ ವೀಣಾ, ಇನ್ಮುಂದೆ ಸಭೆಗೆ ತರುವ ಹೆಚ್ಚುವರಿ ವಿಷಯ ಪಟ್ಟಿಯನ್ನು ಪ್ರತಿಪಕ್ಷದ ನಾಯಕರಿಗೆ ಫೋನ್‌ ಮೂಲಕವಾದರೂ ತಿಳಿಸುವಂತೆ ಸೂಚನೆ ನೀಡಿದರು. ಆದರೂ ಪ್ರತಿಪಕ್ಷದ ಪ್ರತಿಭಟನೆ ಮಾತ್ರ ಶಾಂತವಾಗಲೇ ಇಲ್ಲ. ಆಡಳಿತ ಪಕ್ಷದ ಸದಸ್ಯರು ಕೂಡ ಮತ್ತೆ ಪ್ರತಿಭಟನೆ ನಡೆಸಿದರು.

ಇವೆಲ್ಲದರ ನಡುವೆಯೇ ಮೇಯರ್‌ ವೀಣಾ ಬಾರದ್ವಾಡ, ಎಲ್ಲ ವಿಷಯಗಳು ಅಂಗೀಕಾರವಾಗಿವೆ ಎಂದು ಘೋಷಿಸಿ ಸಭೆಯನ್ನು ಬರ್ಖಾಸ್ತುಗೊಳಿಸಿದರು.

ಹೀಗೆ ಬರೀ ಗದ್ದಲದ ನಡುವೆಯೇ ಯಾವುದೇ ಚರ್ಚೆ ನಡೆಯದೇ ವಿಷಯಪಟ್ಟಿಯಲ್ಲಿನ 9 ಹಾಗೂ ಹೆಚ್ಚುವರಿ ಪಟ್ಟಿಯಲ್ಲಿನ 4 ವಿಷಯಗಳು ಪಾಸ್‌ ಆದವು.

ಹೆಚ್ಚುವರಿ ಪಟ್ಟಿಯಲ್ಲಿನ ವಿಷಯಗಳ್ಯಾವವು?

1 ಕೇಂದ್ರ ಸರ್ಕಾರ ₹130 ಕೋಟಿ ಮಂಜೂರು ಮಾಡಿದೆ. ಇದು ಗ್ರೀನ್‌ ಕಾರಿಡಾರ್‌ನ ಎರಡನೆಯ ಹಂತದ ಅನುದಾನ. ಇದಕ್ಕೆ ₹20 ಕೋಟಿ ಮ್ಯಾಚಿಂಗ್‌ ಗ್ಯ್ರಾಂಟ್‌ ಪಾಲಿಕೆಯಿಂದ ಕೊಡಬೇಕಿದೆ. ಅಂದಾಗ ಮಾತ್ರ ಅಲ್ಲಿಂದ ₹110 ಕೋಟಿ ಬಿಡುಗಡೆಯಾಗುತ್ತದೆ. ಇದಕ್ಕೆ ಹೆಚ್ಚಿನ ಸಮಯವಿಲ್ಲ. ಆದಕಾರಣ ಈಗಲೇ ಚರ್ಚೆ ನಡೆಯಬೇಕಿತ್ತು.

2 ಇನ್ನು ಬಿಬಿಎಂಪಿಗೆ ಬಿಡುಗಡೆಯಾಗಿರುವ ಅನುದಾನವನ್ನು ಮರುಹಂಚಿಕೆ ಮಾಡಲಾಗಿದೆ. ಅದರಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ 16 ಕೋಟಿ ಸಾಲಿಡ್‌ ವೆಸ್ಟ್‌ ಮ್ಯಾನೇಜ್‌ಮೆಂಟ್‌ಗೆ ಬಿಡುಗಡೆಯಾಗಲಿದೆ. ಈ ವಿಷಯವೂ ಹೆಚ್ಚುವರಿ ಪಟ್ಟಿಯಲ್ಲಿತ್ತು.

3 ಕಾನೂನು ವಿವಿಗೆ 39 ಗುಂಟೆ ಜಾಗೆ ಬೇಕಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿರುವ 39 ಗುಂಟೆ ಜಾಗೆ ನೀಡುವ ಸಂಬಂಧ ಚರ್ಚೆಯಾಗಬೇಕಿತ್ತು. ಈ ವಿಷಯವೂ ಹೆಚ್ಚುವರಿ ಪಟ್ಟಿಯಲ್ಲಿತ್ತು. ಆದರೆ ಇದಕ್ಕೆ ಪ್ರತಿಪಕ್ಷದ ಸದಸ್ಯರು ಚರ್ಚೆಗೆ ಅವಕಾಶ ನೀಡಲಿಲ್ಲ. ಹೀಗಾಗಿ, ಎಲ್ಲವನ್ನು ಚರ್ಚೆ ನಡೆಸದೇ ಅಂಗೀಕರಿಸಲಾಯಿತು.

ವಿಡಿಯೋ ಪ್ರದರ್ಶಿಸಿ

ಪಾಲಿಕೆ ಸಾಮಾನ್ಯಸಭೆಯಲ್ಲಿ ವಿಡಿಯೋ ಪ್ರದರ್ಶನದ ಕುರಿತು ಕೆಲಕಾಲ ಗದ್ದಲವೂ ನಡೆಯಿತು. ಆಡಳಿತ ಪಕ್ಷದ ಸದಸ್ಯ ರಾಜಣ್ಣ ಕೊರವಿ, ಪ್ರವಾಸಿ ತಾಣಗಳ ಅಭಿವೃದ್ಧಿ ವಿಷಯವಾಗಿ ಗಮನ ಸೆಳೆದರು. ಈ ವೇಳೆ ಉಣಕಲ್‌ನಲ್ಲಿರುವ ಚಂದ್ರಮೌಳೇಶ್ವರ ದೇವಸ್ಥಾನದ ವಿಡಿಯೋ ತುಣುಕುವೊಂದನ್ನು ಪ್ರದರ್ಶನ ಮಾಡಲು ಮುಂದಾಗಿದ್ದರು. ಆದರೆ, ಇದಕ್ಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ, ತಾವು ಮಾತನಾಡಿದ್ದನ್ನು ಪ್ರದರ್ಶಿಸಬೇಕು ಎಂದರು. ಈ ವಿಷಯವಾಗಿ ಕೆಲಕಾಲ ಗದ್ದಲ ನಡೆಯಿತು. ನಿಯಮದ ಪ್ರಕಾರ ಹಾಗೆ ಮಾಡಲು ಬರಲ್ಲ ಎಂದು ಮೇಯರ್‌ ತಿಳಿಸಿದರು.

ಮ್ಯಾಚಿಂಗ್ ಗ್ರ್ಯಾಂಟ್ ಬಗ್ಗೆ ಚಿಂತನೆಗೆ ಸೂಚನೆ

ರಾಜ್ಯ, ಕೇಂದ್ರ ಸರ್ಕಾರಗಳು ನೀಡುವ ಎಲ್ಲ ಅನುದಾನಕ್ಕೂ ಪಾಲಿಕೆ ಮ್ಯಾಚಿಂಗ್ ಗ್ರ್ಯಾಂಟ್‌ ನೀಡುತ್ತ ಬಂದಿದೆ. ಆದರೆ, ಕಳೆದ 6 ತಿಂಗಳಿನಿಂದ ರಾಜ್ಯ ಸರ್ಕಾರ ಶಾಸಕರಿಗೆ ಯಾವುದೇ ಅನುದಾನ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಎಲ್ಲ ಶಾಸಕರೂ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಪಾಲಿಕೆಯ ಬೊಕ್ಕಸವನ್ನೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪಾಲಿಕೆಯ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಬಜೆಟ್ ವೇಳೆ ಶಾಸಕರಿಗೆ, ಸಚಿವರಿಗೆ, ಸಂಸದರಿಗೆ ಇಂತಿಷ್ಟು ಎಂದು ಮ್ಯಾಚಿಂಗ್ ಗ್ರ್ಯಾಂಟ್ ಹೊಂದಿಸಿಡಬೇಕು. ಇಲ್ಲದಿದ್ದರೆ ಹೆಚ್ಚಿನ ಹಣಕಾಸಿನ ಹೊರೆಯಾಗುತ್ತದೆ ಎಂದು ಸದಸ್ಯ ವೀರಣ್ಣ ಸವಡಿ ಅಭಿಪ್ರಾಯಪಟ್ಟರು. ಇದಕ್ಕೆ ಕೆಲ ಸದಸ್ಯರು ಧ್ವನಿಗೂಡಿಸಿದರು.

ಆಯುಕ್ತರೊಂದಿಗೆ ವಾಗ್ವಾದ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಯಾವುದೇ ವಿಷಯ ಚರ್ಚೆಗೆ ಬಾರದೇ ಅಂಗೀಕಾರವಾಗಿದ್ದಕ್ಕೆ ಪಾಲಿಕೆ ಆಯುಕ್ತರೊಂದಿಗೆ ಪ್ರತಿಪಕ್ಷದ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ, ಆರೀಫ್‌ ಭದ್ರಾಪುರ ಸೇರಿದಂತೆ ವಾಗ್ವಾದದಲ್ಲಿ ತೊಡಗಿದ್ದರು. ಸಭೆಯಲ್ಲಿ ಚರ್ಚೆಗೆ ಬಾರದೇ ಅದ್ಹೇಗೆ ಪಾಸ್‌ ಮಾಡುತ್ತೀರಿ ಎಂದು ಪ್ರಶ್ನಿಸಿದರು. ಆದರೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಮಾತನಾಡಿ, ಮೇಯರ್‌ ರೂಲಿಂಗ್‌ ಕೊಟ್ಟಿದ್ದಾರೆ ಎಂದಷ್ಟೇ ಹೇಳಿದರು. ಅದಕ್ಕೆ ಆರೀಫ್‌ ಭದ್ರಾಪುರ, ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸುತ್ತೇವೆ ಎಂದು ಹೇಳುತ್ತಾ ಅಲ್ಲಿಂದ ತೆರಳಿದರು.ಮೇಯರ್‌ಗೂ ಮಾಹಿತಿ ಕೊರತೆಪಾಲಿಕೆಯ ಸಾಮಾನ್ಯ ಸಭೆಯಲ್ಲಿ ತರಾತುರಿಯಲ್ಲಿ ಅನುಮೋದನೆಗೊಂಡ ವಿಷಯಗಳ ಬಗ್ಗೆ ಮೇಯರ್ ವೀಣಾ ಬರದ್ವಾಡ ಅವರಿಗೂ ಸ್ಪಷ್ಟ ತಿಳಿವಳಿಕೆ ಇರಲಿಲ್ಲ. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದಿಂದ ಹಾಗೂ ಬಿಬಿಎಂಪಿಯಿಂದ ಎಸ್‌ಡಬ್ಲ್ಯೂಎಂ ಯೋಜನೆಗೆ ಅನುದಾನ ಬರುವ ವಿಷಯ ಸೇರಿದಂತೆ ವಿವಿಧ 9 ತುರ್ತು ವಿಷಯಕ್ಕೆ ಅನುಮೋದನೆ ನೀಡಲಾಗಿದೆ. ಹೆಚ್ಚುವರಿ ಪಟ್ಟಿಯಲ್ಲಿ ಏನೆಲ್ಲ ವಿಷಯಗಳಿತ್ತು ಎಂಬ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದರು. ಬಳಿಕ ಸದಸ್ಯ ರಾಮಣ್ಣ ಬಡಿಗೇರ ಅವರ ನೆರವಿಗೆ ಬಂದರು.

ಸಭೆಯಲ್ಲಿ ಹೆಚ್ಚುವರಿ ವಿಷಯಗಳನ್ನು ಸೇರಿಸುವುದು ಮೇಯರ್‌ ಅಧಿಕಾರ. ಕೆಲವೊಂದಿಷ್ಟು ತುರ್ತು ವಿಷಯಗಳಿದ್ದವು. ಅವುಗಳನ್ನು ಸೇರಿಸಲಾಗಿತ್ತು. ಆದರೆ, ಪ್ರತಿಪಕ್ಷದ ಸದಸ್ಯರು ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಹೀಗಾಗಿ, ಎಲ್ಲವನ್ನು ಪಾಸ್‌ ಮಾಡಿದ್ದೇವೆ. ಅಭಿವೃದ್ಧಿ ವಿಷಯಕ್ಕೂ ಹೀಗೆ ಅಡ್ಡಗಾಲುಹಾಕಿದರೆ ಹೇಗೆ ಎಂದು ಪ್ರಶ್ನಿಸುತ್ತಾರೆ ಮೇಯರ್‌ ವೀಣಾ ಬರದ್ವಾಡ.15 ದಿನಗಳ ಮುಂಚೆಯೇ ಪಾಲಿಕೆಯ ಪರಿಷತ್‌ ಕಾರ್ಯದರ್ಶಿ ಕೇಳಿರುತ್ತಾರೆ. ಆದರೂ ಸಭೆಗೆ ಹೆಚ್ಚುವರಿ ಪಟ್ಟಿ ತರುವ ಉದ್ದೇಶವೇನು? ನಮಗೆ ತಿಳಿಸದೇ ತಮಗೆ ಬೇಕಾದ ವಿಷಯಗಳನ್ನು ಸೇರಿಸಿ ಬಿಡುತ್ತಾರೆ. ನಾವು ನಿಯಮಬದ್ಧವಾಗಿ ಏನಿದೆಯೋ ಆ ರೀತಿ ಸಭೆ ನಡೆಸಿ ಎಂದು ಕೇಳುತ್ತಿದ್ದೇವೆ. ಈ ಎಲ್ಲ ವಿಷಯಗಳನ್ನು ಚರ್ಚಿಸದೇ ಪಾಸ್ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕಿ ಸುವರ್ಣ ಕಲ್ಲಕುಂಟ್ಲಾ ಅಸಮಾಧಾನ ವ್ಯಕ್ತಪಡಿಸುತ್ತಾರೆ.