ಸಾರಾಂಶ
ಹೊಸದುರ್ಗ: ತಾಯಿ ಎಂದ ತಕ್ಷಣ ನಮ್ಮನ್ನು ಹೆತ್ತವಳು ಎಂದಷ್ಟೇ ತಿಳಿಯಬೇಕಿಲ್ಲ. ತಾಯಿ ಹೃದಯ ಹೊಂದಿದವರೆಲ್ಲಾ ತಾಯಿ ಸಮಾನರು ಎಂದು ಸಾಣೆಹಳ್ಳಿಯ ಪಂಡಿತಾರಾಧ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 6ನೇ ದಿನದ ಬೆಳಗಿನ ಚಿಂತನಾ ಗೋಷ್ಠಿಯಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಅತಿಯಾದ ವಾತ್ಸಲ್ಯ ತೋರಿಸಿ, ನಮ್ಮ ತಪ್ಪುಗಳನ್ನು ತಿದ್ದಿ ಮನುಷ್ಯರನ್ನಾಗಿ ಮಾಡಿದವರೆಲ್ಲ ತಾಯಿಯಾಗುತ್ತಾರೆ ಎಂದು ತಿಳಿಸಿದರು.ತಾಯಿಯನ್ನು ಭೂಮಿಗೆ ಹೋಲಿಸುತ್ತಾರೆ. ಸಹನೆ ಹೊಂದಿರುವ ಭೂಮಿಗೆ ಸಹಾಯ ಮಾಡುವ ಗುಣವಿದೆ. ಭೂಮಿಯ ಮೇಲೆ ಏನೆಲ್ಲ ಕೊಳೆ ಮಾಡಿದರೂ ಸಹಿಸಿಕೊಂಡು ನಮಗೆ ಬೇಕಾದ ಬೆಳೆ ಕೊಡುತ್ತದೆ. ಹೀಗಾಗಿ ತಾಯಿ ಎನ್ನುವುದು ಅಮೂಲ್ಯ ಸಂಪತ್ತು. ಆದರೆ ಇದ್ದಾಗ ತಾಯಿಯ ಮಹತ್ವ ಅರ್ಥ ಮಾಡಿಕೊಂಡಿರುವುದಿಲ್ಲ ಕಳೆದುಕೊಂಡಾಗ ಗೊತ್ತಾಗುತ್ತದೆ ಎಂದರು.
ನಮ್ಮ ಎಲ್ಲ ಅಂಗಾಂಗಗಳು ಚೆನ್ನಾಗಿದ್ದಾಗ ಅವುಗಳ ಮಹತ್ವ ಗೊತ್ತಾಗುವುದಿಲ್ಲ. ಒಂದು ಕಣ್ಣು, ಕಾಲು ಕಳೆದುಕೊಂಡಾಗ ಅವುಗಳ ಬೆಲೆ ಗೊತ್ತಾಗುತ್ತದೆ. ಹೀಗೆಯೇ ನಮ್ಮ ತಾಯಿಯ ಮಹತ್ವವು ಜೀವಂತವಿದ್ದಾಗಲೇ ಅರಿಯಬೇಕು. ಇದಕ್ಕಾಗಿ ಹೆತ್ತ ತಾಯಿಯನ್ನು ಗೌರವಿಸಿದಷ್ಟೇ ಉಪಕಾರ ಮಾಡಿದವರನ್ನು ಕೃತಜ್ಞತೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.ಮಾತೃ ವಾತ್ಸಲ್ಯ ಕುರಿತು ಅಣ್ಣಿಗೇರಿಯ ಕೆ.ವಿರೂಪಾಕ್ಷಪ್ಪ ಮಾತನಾಡಿ, ಮಕ್ಕಳಿಗಾಗಿ ತನ್ನ ಬದುಕನ್ನು ತಾಯಿ ತ್ಯಾಗ ಮಾಡುತ್ತಾಳೆ. ಈ ಜಗತ್ತಿನಲ್ಲಿ ಕೆಟ್ಟ ಮಕ್ಕಳಿರಬಹುದು. ಆದರೆ ಕೆಟ್ಟ ತಾಯಿ ಇರಲು ಸಾಧ್ಯವಿಲ್ಲ. ತಾನು ಎಷ್ಟೇ ಕಷ್ಟಪಟ್ಟರೂ ಮಕ್ಕಳ ಏಳಿಗೆಗೆ ಶ್ರಮಿಸುತ್ತಾಳೆ. ನಮಗೆ ನಡೆ-ನುಡಿ, ಆಚಾರ-ವಿಚಾರ ಕಲಿಸುವವಳು ತಾಯಿ. ಇದಕ್ಕಾಗಿ ಮನೆಯೇ ಪಾಠ ಶಾಲೆ ಎಂದಿರುವುದು. ನಮ್ಮ ಹೆತ್ತ ತಾಯಿಯಿಂದ ವಾತ್ಸಲ್ಯ ಸಿಕ್ಕರೆ, ಇಲ್ಲಿ ಪಂಡಿತಾರಾಧ್ಯ ಶ್ರೀಗಳು ವಾತ್ಸಲ್ಯದಿಂದ ನೋಡಿಕೊಂಡು ನಮ್ಮನ್ನೆಲ್ಲ ಮೇಲ್ಮಟ್ಟಕ್ಕೆ ತರುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ನಾಗರಾಜ್ ಹಾಗೂ ಜ್ಯೋತಿ ವಚನಗಳನ್ನು ಹಾಡಿದರು. ಶಿಕ್ಷಕ ಬಸವನಗೌಡ, ಪೊಲೀಸ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.