ಸಾರಾಂಶ
ಕನ್ನಡಪ್ರಭ ವಾರ್ತೆ ಆಲಮಟ್ಟಿಮುಖ್ಯಮಂತ್ರಿ ಸಿದ್ಧರಾಮಯ್ಯ ಆ.21ರಂದು ಆಲಮಟ್ಟಿಯ ಕೃಷ್ಣಾ ನದಿಯ ಜಲಧಿಗೆ ಗಂಗಾಪೂಜೆ ಹಾಗೂ ಬಾಗಿನ ಅರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಬಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ.ಮೋಹನರಾಜ ಹಾಗೂ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಮಂಗಳವಾರ ಆಲಮಟ್ಟಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ, ಅಧಿಕಾರಿಗಳಿಗೆ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು.ಆಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸುವ ಹಿನ್ನೆಲೆಯಲ್ಲಿ ಜಂಟಿಯಾಗಿ ಪರಿಶೀಲನೆ ನಡೆಸಿದ ಅವರು, ಹೆಲಿಪ್ಯಾಡ್ ಸ್ಥಳ ಹಾಗೂ ಅಲ್ಲಿನ ಭದ್ರತೆ, ಬಾಗಿನ ಅರ್ಪಿಸುವ ಸ್ಥಳಕ್ಕೆ ಭೇಟಿ ನೀಡಿ, ಪೂಜಾ ಸ್ಥಳ, ಅಲ್ಲಿ ಹೂವಿನ ಅಲಂಕಾರ, ಶಾಮಿಯಾನ ವ್ಯವಸ್ಥೆ, ಸೂಕ್ತ ಆಸನ ವ್ಯವಸ್ಥೆ ಕುರಿತು ಪರಿಶೀಲನೆ ನಡೆಸಿದರು. ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ಕೂಡ ನೀಡಿದರು.ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಡಿವೈಎಸ್ಪಿ ಬಲ್ಲಪ್ಪ ನಂದಗಾವಿ, ವಿಜಯಪುರ ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ, ಬಿಟಿಡಿಎ ಮುಖ್ಯ ಅಭಿಯಂತರ ಬಸವರಾಜ, ಎನ್.ವೈ.ಹಿರೇಗೌಡರ, ನಿಡಗುಂದಿ ತಹಸೀಲ್ದಾರ್ ಎ.ಡಿ.ಅಮರಾವಡಗಿ ಆಲಮಟ್ಟಿ ಡ್ಯಾಂ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಟಿ.ವಿ.ದೊಡಮನಿ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.ಅವ್ಯವಸ್ಥೆ ಆಗದಂತೆ ವ್ಯವಸ್ಥೆ:
ಕಳೆದ ಬಾರಿ ಸಿಎಂಗಾಗಿ ಬಾಗಿನ ಅರ್ಪಣೆ ಸ್ಥಳದಲ್ಲಿ ಕಾಯುತ್ತಿದ್ದ ಗಣ್ಯರು, ಪತ್ರಕರ್ತರು ಕುಡಿಯಲು ನೀರು ಸಿಗದೇ ಪರದಾಡಿದ್ದರು. ಬಂದೋಬಸ್ತ್‌ಗೆ ಬಿಸಿಲಲ್ಲಿ ನಿಯೋಜನೆಗೊಂಡಿದ್ದ ಪೊಲೀಸರು ಕುಡಿಯುವ ನೀರಿಲ್ಲದೇ ಸಂಕಟ ಅನುಭವಿಸಿದ್ದರು. ಆಹಾರವೂ ಹಸಿಬಿಸಿಯಿತ್ತು, ವಿಜಯಪುರ, ಬಾಗಲಕೋಟೆಯಿಂದ ಬಂದಿದ್ದ ಪತ್ರಕರ್ತರಿಗೂ ಊಟದ ತೊಂದರೆಯಾಗಿತ್ತು. ಹೀಗಾಗ, ಈ ಬಾರಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.ಮುಖ್ಯಮಂತ್ರಿಗಳಿಗೆ ಮನವಿ ಅರ್ಪಿಸಲು ಬಂದ ರೈತರಿಗೆ ಅತೀ ಭದ್ರತೆ ಕಿರಿಕಿರಿ ಉಂಟು ಮಾಡಿತ್ತು. ಈ ಬಾರಿ ಆ ರೀತಿ ಆಗದಂತೆ ಕೆಬಿಜೆಎನ್ಎಲ್ ಹಾಗೂ ಪೊಲೀಸ್ ಅಧಿಕಾರಿಗಳು, ಅಗತ್ಯ ಸಿದ್ಧತೆ ಮಾಡಬೇಕಿದೆ.ಪೊಲೀಸರ ನಿಯೋಜನೆ: ಬೆಳಗಾವಿ ಐಜಿಪಿ ನೇತೃತ್ವದಲ್ಲಿ ಇಬ್ಬರು ಎಸ್ಪಿ, 3 ಜನ ಹೆಚ್ಚುವರಿ ಎಸ್ಪಿ, 4 ಜನ ಡಿವೈಎಸ್ಪಿ, 9 ಜನ ಸಿಪಿಐ, 27 ಜನ ಪಿಎಸ್ ಐ, 25 ಜನ ಎಎಸ್ಐ, 74 ಜನ ಹೆಡ್ ಕಾನ್ಸ್ ಟೇಬಲ್, 202 ಕಾನ್ಸ್ ಟೇಬಲ್, 30 ಜನ ಮಹಿಳಾ ಪೊಲೀಸರು, 3 ಡಿಎಆರ್ ವಾಹನವನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದರು.