ಆಲಮಟ್ಟಿ ಜಲಾಶಯ: ನದಿ ಪಾತ್ರಕ್ಕೆ 2.25 ಲಕ್ಷ ಕ್ಯುಸೆಕ್ ನೀರು

| Published : Jul 25 2024, 01:19 AM IST

ಸಾರಾಂಶ

ಮಹಾ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಕ್ಷಣ ಕ್ಷಣಕ್ಕೆ ಹೆಚ್ಚಾಗುತ್ತಿದ್ದು, ಆಲಮಟ್ಟಿ ಜಲಾಶಯದಿಂದ 2.25 ಲಕ್ಷ ಕ್ಯುಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ಬೆಳಗ್ಗೆ 1.75 ಲಕ್ಷ ಕ್ಯುಸೆಕ್ ಇದ್ದ ಹೊರಹರಿವನ್ನು ಬೆಳಗ್ಗೆ 8.30 ಕ್ಕೆ 2 ಲಕ್ಷ ಕ್ಯುಸೆಕ್ ಗೇರಿಸಲಾಗಿತ್ತು. ಸಂಜೆ ಮತ್ತಷ್ಟು ಹೆಚ್ಚುಗೊಳಿಸಿ 2.25 ಲಕ್ಷ ಕ್ಯುಸೆಕ್ ಗೇರಿಸಲಾಗಿದೆ.

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಜಲಾಶಯಕ್ಕೆ 1,78,528 ಕ್ಯುಸೆಕ್ ಒಳಹರಿವು ಇದ್ದು, ಜಲಾಶಯದ ಮಟ್ಟ 517.53 ಮೀ ಇದೆ, ಜಲಾಶಯದಲ್ಲಿ ಟಿಎಂಸಿ ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯದಿಂದ 3 ಲಕ್ಷ ಕ್ಯುಸೆಕ್ ನೀರು ಬಿಟ್ಟಾಗ ಕೃಷ್ಣಾ ತೀರದ ಅರಳದಿನ್ನಿ, ಯಲಗೂರು ಸೇರಿದಂತೆ ಕೆಲ ಗ್ರಾಮಗಳ ಜಮೀನು ಮುಳುಗಡೆಯಾಗಲಿದೆ. ಈಗಾಗಲೇ ತಾಲೂಕು ಆಡಳಿತ ಹಾಗೂ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಕೃಷ್ಣಾ ತೀರ ಗ್ರಾಮದಲ್ಲಿ ಜನ, ಜಾನುವಾರುಗಳು ನದಿ ನೀರಿಗೆ ಇಳಿಯದಂತೆ ಡಂಗುರ ಸಾರಿ ಮುನ್ಸೂಚನೆ ನೀಡಿದ್ದಾರೆ. ನಾರಾಯಣಪುರ ಜಲಾಶಯದಿಂದಲೂ 2 ಲಕ್ಷ ಕ್ಯುಸೆಕ್‌ಗೂ ಅಧಿಕ ನೀರು ಬಿಡುತ್ತಿದ್ದು, ಇದರಿಂದ ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ನೆರೆಯ ಆತಂಕ ಕಡಿಮೆಯಾಗಿದೆ.ಮಹಾ ಭಾರಿ ಮಳೆಃ

ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಮಹಾಬಳೇಶ್ವರದಲ್ಲಿ 157 ಮಿ.ಮೀ, ಕೊಯ್ನಾ 163 ಮಿ.ಮಿ, ನವಜಾದಲ್ಲಿ 157 ಮಿ.ಮೀ ಮಳೆಯಾಗಿದೆ. ಒಟ್ಟಾರೆ ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶದ ಬಹುತೇಕ ಕಡೆ ಇದೇ ಪ್ರಮಾಣದಲ್ಲಿ ಮಳೆಯಾಗಿದೆ. ಇದರಿಂದ ಕೃಷ್ಣಾ ನದಿಯ ಹರಿವು ಹೆಚ್ಚಿದೆ. ಸದ್ಯಕ್ಕೆ ಆಲಮಟ್ಟಿ ಜಲಾಶಯದ ಮುಂಭಾಗದಲ್ಲಿ ಜಮೀನು ಮುಳುಗಡೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. 3 ಲಕ್ಷ ಕ್ಯುಸೆಕ್ ಗೂ ಅಧಿಕ ನೀರು ಬಿಟ್ಟಾಗ ಸಮಸ್ಯೆ ಉಂಟಾಗಲಿದೆ.