ಬಲದಂಡೆ ಕಾಲುವೆಗೆ ಆಲಮಟ್ಟಿ ನೀರು: ಎಚ್.ವೈ. ಮೇಟಿ

| Published : Feb 29 2024, 02:07 AM IST

ಸಾರಾಂಶ

ಆಲಮಟ್ಟಿ ಬಲದಂಡೆ ಕಾಲುವೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಆಲಮಟ್ಟಿ ಡ್ಯಾಂನಿಂದ ನೀರು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಟಿಡಿಎ ಸಭಾಪತಿಯೂ ಆಗಿರುವ ಶಾಸಕ ಎಚ್.ವೈ. ಮೇಟಿ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಆಲಮಟ್ಟಿ ಬಲದಂಡೆ ಕಾಲುವೆಗೆ ಜನ-ಜಾನುವಾರುಗಳ ಕುಡಿಯುವ ನೀರಿಗಾಗಿ ಆಲಮಟ್ಟಿ ಡ್ಯಾಂನಿಂದ ನೀರು ಬಿಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಿಟಿಡಿಎ ಸಭಾಪತಿಯೂ ಆಗಿರುವ ಶಾಸಕ ಎಚ್.ವೈ. ಮೇಟಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಲಮಟ್ಟಿ ಬಲದಂಡೆ ಕಾಲುವೆಗೆ ಕಳೆದ ಹಲುವ ದಿನಗಳಿಂದ ನೀರು ಇರಲಿಲ್ಲ. ಇದರಿಂದ ಈ ಕಾಲುವೆ ವ್ಯಾಪ್ತಿಯಲ್ಲಿ ಬರುವ ಬಹುಹಳ್ಳಿ ಕುಡಿಯುವ ನೀರು ಪೂರೈಕೆ ಯೋಜನೆ, ಸಿಂಗಲ್ ವಿಲೇಜ್ ಸ್ಕೀಂ ಗಳಡಿ ಬರುವ ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗಿತ್ತು. ಹೀಗಾಗಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿತ್ತು. ಆಲಮಟ್ಟಿ ಬಲದಂಡೆ ಕಾಲುವೆ ಮೂಲಕ ಸುಮಾರು 8 ದಿನಗಳ ಕಾಲ ನೀರು ಬಿಡಲು ಉಸ್ತುವಾರಿ ಸಚಿವರು, ಸಂಬಂಧಿಸಿದ ಕೆಬಿಜೆಎನ್ಎಲ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ನಾಳೆಯಿಂದಲೇ ಕಾಲುವೆಗೆ ನೀರು ಬರಲಿದೆ. ರೈತರು, ಬೆಳೆಗೆ ಈ ನೀರನ್ನು ಬಳಸಿಕೊಳ್ಳದೆ ಕುಡಿಯುವ ನೀರಿಗಾಗಿ ಬಳಸಬೇಕು. ಅಲ್ಲದೆ, ನೀರನ್ನು ಮಿತವಾಗಿ ಬಳಕೆ ಮಾಡಬೇಕು ಎಂದು ಶಾಸಕ ಮೇಟಿ ಮನವಿ ಮಾಡಿದ್ದಾರೆ.

ಈ ಕಾಲುವೆ ವ್ಯಾಪ್ತಿಯಲ್ಲಿ ಬರುವ ಕೆರೆಗಳಿಗೆ ನೀರು ತುಂಬಿಸಲು ಅನುಕೂಲತೆಗಳಿದ್ದರೆ, ಕೆರೆಗೂ ನೀರು ತುಂಬಿಸಬೇಕು. ಬರಲಿರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಮತ್ತಷ್ಟು ತಲೆದೋರದಂತೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಹೀಗಾಗಿ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.