ಸೋಲಿನ ಹತಾಶೆಯಿಂದ ಕಾಂಗ್ರೆಸ್ ವಿರುದ್ಧ ಆರೋಪ: ಸಿ.ಡಿ.ಗಂಗಾಧರ್

| Published : Jan 26 2025, 01:33 AM IST

ಸಾರಾಂಶ

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಅದನ್ನು ಬಿಟ್ಟು ಅಧಿಕಾರಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅಧಿಕಾರಿಯನ್ನು ಅಟ್ಟಾಡಿಸಿಕೊಂಡು ಓಡಿಸುವುದಾಗಿ ಹೇಳಿಕೆ ನೀಡಿ ದೌರ್ಜನ್ಯ, ದಬ್ಬಾಳಿಕೆಯಿಂದ ಬೆದರಿಕೆಯನ್ನು ಒಡ್ಡಿದ್ದು ಇಂತಹುದಕ್ಕೆ ನಾವು ಹೆದರುವುದಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಯಲ್ಲಿ ಸೋಲಿನ ಹತಾಶೆಯಿಂದ ಜೆಡಿಎಸ್- ಬಿಜೆಪಿ ನಾಯಕರು ಕಾಂಗ್ರೆಸ್ ಪಕ್ಷದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ್ ಹರಿಹಾಯ್ದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಯಮ ಉಲ್ಲಂಘನೆಯಾಗಿದ್ದಲ್ಲಿ ಅದರ ವಿರುದ್ಧ ಕಾನೂನು ಹೋರಾಟ ಮಾಡಬೇಕು. ಅದನ್ನು ಬಿಟ್ಟು ಅಧಿಕಾರಿಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ, ಅಧಿಕಾರಿಯನ್ನು ಅಟ್ಟಾಡಿಸಿಕೊಂಡು ಓಡಿಸುವುದಾಗಿ ಹೇಳಿಕೆ ನೀಡಿ ದೌರ್ಜನ್ಯ, ದಬ್ಬಾಳಿಕೆಯಿಂದ ಬೆದರಿಕೆಯನ್ನು ಒಡ್ಡಿದ್ದು ಇಂತಹುದಕ್ಕೆ ನಾವು ಹೆದರುವುದಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪಂಚಾಯತ್ ರಾಜ್ ಹಾಗೂ ಸರ್ಕಾರಿ ಸಂಸ್ಥೆಗಳ ವ್ಯವಸ್ಥೆಯನ್ನು ನಾಶ ಮಾಡಿರುವ ಜೆಡಿಎಸ್‌ನವರು ಮನ್‌ಮುಲ್ ಆಡಳಿತವನ್ನು ಸೂಪರ್‌ಸೀಡ್ ಮಾಡಿದ್ದರು. 2016ರಲ್ಲಿ ಜಿಲ್ಲಾ ಪಂಚಾಯಿತಿಯಲ್ಲಿ 30 ತಿಂಗಳೂ ಕಾಯದೆ ಸಾಮಾನ್ಯ ಸಭೆ ನಡೆಯದೆ ಅಭಿವೃದ್ಧಿ ಕಾರ್‍ಯಗಳನ್ನು ನಾಶ ಮಾಡುವ ಸಂಸ್ಕೃತಿ ಹೊಂದಿದ್ದಾರೆ. ಇಂತಹ ದಬ್ಬಾಳಿಕೆ ಮಾಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ ಎಂದು ಟೀಕಿಸಿದರು.

ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಅನಗತ್ಯ ಹೇಳಿಕೆ ನೀಡಿ ಪ್ರತಿಭಟನೆ ನಡೆಸುತ್ತಿದ್ದು, ವಿರೋಧ ಪಕ್ಷದಲ್ಲಿ ನಿಂತು ಆಡಳಿತ ನಡೆಸುತ್ತಿರುವವರು ಉತ್ತರ ನೀಡಲು ತಡಕಾಡುವಂತಹ ಹೇಳಿಕೆ ನೀಡಲು ಮುಂದಾಗಬೇಕು. ಇಲ್ಲವಾದರೆ ಆರೋಪಗಳು ಸತ್ಯವಾದಲ್ಲಿ ನ್ಯಾಯಾಲಯದಲ್ಲಿ ಹೋರಾಟ ಮಾಡಲು ಮುಂದಾಗಬೇಕು ಎಂದು ತಾಕೀತು ಮಾಡಿದರು.

ಸಹಕಾರ ಸಂಸ್ಥೆಗಳಲ್ಲಿ ಲೋಪವೆಸಗಿರುವವರ ವಿರುದ್ಧ ಕಾನೂನು ಪ್ರಕಾರ ಕ್ರಮ ಆಗುತ್ತಿದೆಯೇ ಹೊರತು ಇದರಲ್ಲಿ ಕಾಂಗ್ರೆಸ್ ಪಕ್ಷ ಹಸ್ತಕ್ಷೇಪ ಮಾಡುತ್ತಿಲ್ಲ. ಪಕ್ಷಾತೀತವಾಗಿ ಆಡಳಿತ ಮಂಡಳಿ ರಚನೆಯಾಗಿರುತ್ತದೆ. ಇದರಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತರನ್ನೂ ಅಮಾನತು ಮಾಡಲಾಗಿದೆ. ನಾವು ಅವರಂತೆ ಮಾತನಾಡುತ್ತಿದ್ದೇವಾ ಎಂದು ಪ್ರಶ್ನಿಸಿದರು.

ಮುಡಾ ಅಧ್ಯಕ್ಷ ನಹೀಮ, ಕಾಂಗ್ರೆಸ್ ನಗರ ಅಧ್ಯಕ್ಷ ರುದ್ರಪ್ಪ, ಎಸ್ಸಿಎಸ್ಟಿ ಘಟಕದ ಅಧ್ಯಕ್ಷ ಶ್ರೀಧರ್, ವಿಜಯ್‌ಕುಮಾರ್, ನಾಗರಾಜು, ರಾಮಚಂದ್ರು, ಅಪ್ಪಾಜಿಗೌಡ, ಶಿವಲಿಂಗೇಗೌಡ ಗೋಷ್ಠಿಯಲ್ಲಿದ್ದರು.