ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಎನ್.ಎಸ್. ಜಿವೋಜಿ, ಕಾರ್ಖಾನೆಯ ಆವರಣದಲ್ಲಿ ನಾಯಿಗಳನ್ನು ಹಿಡಿಯಲು ಹಾಗೂ ಸಾಗಿಸಲು ಬಳಸಲಾಗುವ ಸಾಮಗ್ರಿಗಳ ಪತ್ತೆಯಾಗಿದೆ. ಪ್ರಾಣಿಗಳನ್ನು ಹಿಡಿದು ಅಕ್ರಮವಾಗಿ ಕಾಡಿಗೆ ಬಿಡುವುದು ಗಂಭೀರ ವಿಷಯ ಎಂದರು.

ಹಳಿಯಾಳ: ಪಟ್ಟಣ ಸೇರಿದಂತೆ ಕಾರ್ಖಾನೆ ಪ್ರದೇಶ ವ್ಯಾಪ್ತಿಯ ಬೀದಿನಾಯಿಗಳು, ಸಾಕಿದ ನಾಯಿಗಳನ್ನು ಈಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಯವರು ಅಕ್ರಮವಾಗಿ ಹಿಡಿದು ಭಾನುವಾರ ಕಾಡಿಗೆ ಬಿಟ್ಟಿದ್ದು, ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕೃತ್ಯದ ಸಮಗ್ರ ತನಿಖೆ ನಡೆಸುವಂತೆ ಹಳಿಯಾಳದ ಪ್ರಾಣಿದಯಾ ಕಾರ್ಯಕರ್ತರು ಹಾಗೂ ರೈತ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಸಾಕಿದ ನಾಯಿಗಳು ಮನೆಯಿಂದ ಹೊರಗಡೆ ತಿರುಗಾಡಲು ಬಿಟ್ಟಾಗ ಮಾಲೀಕರಿಗೂ ತಿಳಿಸದೇ ಸಕ್ಕರೆ ಕಾರ್ಖಾನೆಯವರು ಹಿಡಿದುಕೊಂಡು ಹೋಗಿರುವ ಕುರಿತು ಸುದ್ದಿಯು ಪಟ್ಟಣದಲ್ಲಿ ವ್ಯಾಪಿಸಿದ ಹಿನ್ನೆಲೆ ಪ್ರಾಣಿದಯಾ ಕಾರ್ಯಕರ್ತರು ಪ್ರಕರಣದ ಪತ್ತೆ ಕಾರ್ಯ ನಡೆಸಿದಾಗ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ನಾಯಿಗಳನ್ನು ಹಿಡಿಯಲು ಬಳಸಲಾಗುತ್ತಿದ್ದೆನ್ನಲಾದ ವಾಹನ ಹಾಗೂ ತಂಡವೊಂದು ಪತ್ತೆಯಾಗಿದೆ.

ಪ್ರಾಣಿದಯಾ ಕಾರ್ಯಕರ್ತರು ವಾಹನವನ್ನು ಪರಿಶೀಲಿಸಿದಾಗ ಸುಮಾರು ಆರೇಳು ನಾಯಿಗಳು ಅರೇ ಪ್ರಜ್ಞಾವಸ್ಥೆಯಲ್ಲಿರುವುದು ಕಂಡುಬಂದಿದೆ. ಈ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಜನರ ತಂಡವನ್ನು ವಿಚಾರಿಸಿದಾಗ ಅವರು ಬಾಗಲಕೋಟೆಯ ಲೋಕಾಪುರ ಮೂಲದವರಾಗಿದ್ದು, ಕಾರ್ಖಾನೆ ಕರೆಯ ಮೇರೆಗೆ ಬಂದಿರುವುದಾಗಿ, ಸೆ. 19ರಿಂದ ಈವರೆಗೆ 30ಕ್ಕೂ ಹೆಚ್ಚು ನಾಯಿಗಳನ್ನು ಹಿಡಿದು ಭಾಗವತಿ ಅರಣ್ಯ ವಲಯ ವ್ಯಾಪ್ತಿಯಲ್ಲಿ ಬಿಟ್ಟು ಬಂದಿರುವುದಾಗಿ ತಿಳಿಸಿದ್ದಾರೆ ಎಂದು ಪ್ರಾಣಿದಯಾ ಸಂಘದವರು ತಿಳಿಸಿದ್ದಾರೆ.

ಕಬ್ಬು ಬೆಳೆಗಾರರ ಸಂಘದವರು ಹಾಗೂ ರೈತ ಮುಖಂಡರು ಸ್ಥಳಕ್ಕೆ ಧಾವಿಸಿ ಕಾರ್ಖಾನೆಯ ಕ್ರಮವನ್ನು ಖಂಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಎನ್.ಎಸ್. ಜಿವೋಜಿ, ಕಾರ್ಖಾನೆಯ ಆವರಣದಲ್ಲಿ ನಾಯಿಗಳನ್ನು ಹಿಡಿಯಲು ಹಾಗೂ ಸಾಗಿಸಲು ಬಳಸಲಾಗುವ ಸಾಮಗ್ರಿಗಳ ಪತ್ತೆಯಾಗಿದೆ. ಪ್ರಾಣಿಗಳನ್ನು ಹಿಡಿದು ಅಕ್ರಮವಾಗಿ ಕಾಡಿಗೆ ಬಿಡುವುದು ಗಂಭೀರ ವಿಷಯ ಎಂದರು.

ಪ್ರಾಣಿದಯಾ ಕಾರ್ಯಕರ್ತ ಸಾಮಾಜಿಕ ಹೋರಾಟಗಾರ ಯೋಗರಾಜ್ ಎಸ್.ಕೆ. ಮಾತನಾಡಿ, ನಾಯಿಗಳನ್ನು ಹಿಡಿದುಕೊಂಡು ಹೋಗಿರುವ ವಿಷಯ ಶನಿವಾರ ತಡರಾತ್ರಿ ತಿಳಿದ ಕೂಡಲೇ ನಮ್ಮ ಬಳಗವು ನಸುಕಿನಿಂದಲೇ ಹುಡುಕಾಟವನ್ನು ನಡೆಸಿದ್ದೆವು. ನಾಯಿ ಹಿಡಿಯುವ ತಂಡದ ಮಾಹಿತಿಯು ಬಂದು ಕೂಡಲೇ ಅವರನ್ನು ತಡೆದು ದೂರನ್ನು ದಾಖಲಿಸಿದ್ದೇವೆ ಎಂದರು.

ಹಳಿಯಾಳ ಪೊಲೀಸ್ ಇಲಾಖೆಯವರು ಘಟನಾ ಸ್ಥಳಕ್ಕೆ ಆಗಮಿಸಿ ವಾತಾವರಣವನ್ನು ತಿಳಿಗೊಳಿಸಿದರಲ್ಲದೇ, ಪ್ರಕರಣದ ತನಿಖೆಯನ್ನು ನಡೆಸುವ ಭರವಸೆಯನ್ನು ನೀಡಿದ್ದಾರೆ.