ಅಲ್ಪಸಂಖ್ಯಾತರ ಕಡೆಗಣನೆ ಆರೋಪ: ಕಾಂಗ್ರೆಸ್‌ ಸಭೆಯಲ್ಲಿ ಮಾತಿನ ಚಕಮಕಿ

| Published : Mar 31 2024, 02:04 AM IST

ಸಾರಾಂಶ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಚಿಸಲಾದ ಕಾಂಗ್ರೆಸ್‌ ಸಮಿತಿಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಲ ನಾಯಕರು ಕಾಂಗ್ರೆಸ್‌ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಕಡಬದಲ್ಲಿ ಶನಿವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಭೆಯಲ್ಲಿ ಅಲ್ಪಸಂಖ್ಯಾತರ ವಿಚಾರವಾಗಿ ಕಾಂಗ್ರೆಸ್ ಮುಖಂಡರ ಮಧ್ಯೆ ಗದ್ದಲ, ಕಿತ್ತಾಟ ನಡೆದು ಸಭಾತ್ಯಾಗ ನಡೆದ ವಿದ್ಯಾಮಾನವೂ ಘಟಿಸಿತು.

ಕಡಬ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ಕಾರ್ಯಕರ್ತರ ಸಭೆ ಆಯೋಜಿಸಲಾಗಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ರಚಿಸಲಾದ ಕಾಂಗ್ರೆಸ್‌ ಸಮಿತಿಯಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ ಕೆಲ ನಾಯಕರು ಕಾಂಗ್ರೆಸ್‌ ವರಿಷ್ಠರನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭ ಮಾತಿಗೆ ಮಾತು ಬೆಳೆದು ಕಾಂಗ್ರೆಸ್ ನಾಯಕರ ಮಧ್ಯೆ ಕಿತ್ತಾಟ ನಡೆದಿದೆ ಎಂದು ತಿಳಿದುಬಂದಿದೆ.

ಅನೇಕ ಹಿರಿಯ ಮುಖಂಡರು ಮಧ್ಯೆ ಪ್ರವೇಶಿಸಿ ಸಮಾಧಾನ ಪಡಿಸಲು ಯತ್ನಿಸಿದ್ದರೂ ಕೆಲ ಮುಸ್ಲಿಂ ಮುಖಂಡರು ಸಭೆಯಿಂದ ಹೊರನಡೆದರು. ಏರುಧ್ವನಿಯಲ್ಲಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯ ಪ್ರಮುಖ ಕಾರ್ಯಕರ್ತರು, ಕಾಂಗ್ರೆಸ್ ಅಭ್ಯರ್ಥಿಯ ಬಗ್ಗೆ ಅಸಮಾಧಾನವಿಲ್ಲ. ಆದರೆ ಅಲ್ಪಸಂಖ್ಯಾತರನ್ನು ಕಡೆಗಣಿಸುವ ನಾಯಕರ ವಿರುದ್ಧ ನಮಗೆ ಅಸಮಾಧಾನವಿದೆ. ನಮ್ಮ ಸಂಖ್ಯಾಬಲಕ್ಕೆ ಸೂಕ್ತ ಮಾನ್ಯತೆ ದೊರಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

ಅಡಕೆ ಆಮದು ವಿರುದ್ಧ ಸಂಸತ್‌ನಲ್ಲಿ ಧ್ವನಿ ಎತ್ತುವ ಕೆಲಸವಾಗಬೇಕು

ಅಡಕೆ ಆಮದಿನ ವಿರುದ್ಧ ಸಂಸತ್ತಿನಲ್ಲಿ ಧ್ವನಿ ಎತ್ತುವ ಕೆಲಸ ಆಗಬೇಕು. ಅಡಕೆಗೆ ಎದುರಾಗಿರುವ ರೋಗಬಾಧೆಗಳ ನಿವಾರಣೆಗೆ ಸಂಶೋಧನಾ ಕೇಂದ್ರ ತೆರೆಯುವ ಅಗತ್ಯವಿದೆ. ಇದರ ಜೊತೆಗೆ ಕೃಷಿ ಹಾಗೂ ಕೃಷಿ ಮಾರುಕಟ್ಟೆಗೆ ಪೂರಕವಾದ ವಾತಾವರಣ ಕಲ್ಪಿಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಶ್ರಮ ಪಡುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.

ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನು ಹಿಂದೂ ಧರ್ಮದಲ್ಲಿ ಹುಟ್ಟಿದವ. ಹಿಂದೂ ಧರ್ಮದ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡವನು ನಾನು. ಜೊತೆಗೆ ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಪಾಲಿಸಿಕೊಂಡು ಬರುತ್ತಿದ್ದೇನೆ. ಆದರೆ ಎಲ್ಲಿಯೂ ಕೂಡ ಅಪಪ್ರಚಾರ, ಅಪನಂಬಿಕೆ ಬರುವ ಕೆಲಸ ಮಾಡಿಲ್ಲ. ಆದ್ದರಿಂದ ನಾವು ಯಾರನ್ನು ದ್ವೇಷಿಸುವ, ವಿರೋಧಿಸುವ ಕೆಲಸ ಮಾಡುವುದು ಬೇಡ. ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿಯನ್ನೇ ಮುಂದಿಟ್ಟುಕೊಂಡು ಜನರ ಬಳಿಗೆ ತೆರಳಿ ಮತ ಕೇಳಿ ಎಂದರು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಎಐಸಿಸಿ ಸದಸ್ಯ ಐವನ್ ಡಿಸೋಜ, ಕೆಪಿಸಿಸಿ ಸದಸ್ಯ ಕೃಷ್ಣಪ್ಪ, ಸುಳ್ಯ ಬ್ಲಾಕ್ ಅಧ್ಯಕ್ಷ ಪಿ.ಸಿ. ಜಯರಾಮ್, ಕೆಪಿಸಿಸಿ ಸದಸ್ಯ ಡಾ. ರಘು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಚುನಾವಣಾ ಉಸ್ತುವಾರಿ ಬಾಲಕೃಷ್ಣ ಬಳ್ಳೇರಿ, ಸುಳ್ಯ ಪ್ರಚಾರ ಸಮಿತಿ ಉಸ್ತುವಾರಿ ವೆಂಕಪ್ಪ ಗೌಡ, ಕಿರಣ್ ಬುಡ್ಲೆಗುತ್ತು ಮೊದಲಾದವರು ಉಪಸ್ಥಿತರಿದ್ದರು. ಕಡಬ ಬ್ಲಾಕ್ ಅಧ್ಯಕ್ಷ ಸುಧೀರ್ ಶೆಟ್ಟಿ ಸ್ವಾಗತಿಸಿದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಷಾ ಅಂಚನ್ ನಿರೂಪಿಸಿದರು.