ಕುಷ್ಟಗಿಯ ಬಿಇಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ₹70 ಲಕ್ಷಕ್ಕೂ ಅಧಿಕ ಸರ್ಕಾರಿ ಹಣ ದುರುಪಯೋಗದ ಆರೋಪ ಪ್ರಕರಣದ ತನಿಖೆಗೆ ವೇಗ ಸಿಕ್ಕಿದ್ದು, ಮಂಗಳವಾರ ಸಂಜೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಿಶೇಷ ಪೊಲೀಸ್ ತಂಡಗಳು ಕಚೇರಿಗೆ ಭೇಟಿ ನೀಡಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿವೆ.
ಕುಷ್ಟಗಿ: ಕುಷ್ಟಗಿಯ ಬಿಇಒ ಕಚೇರಿಯಲ್ಲಿ ನಡೆದಿದೆ ಎನ್ನಲಾದ ₹70 ಲಕ್ಷಕ್ಕೂ ಅಧಿಕ ಸರ್ಕಾರಿ ಹಣ ದುರುಪಯೋಗದ ಆರೋಪ ಪ್ರಕರಣದ ತನಿಖೆಗೆ ವೇಗ ಸಿಕ್ಕಿದ್ದು, ಮಂಗಳವಾರ ಸಂಜೆ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ವಿಶೇಷ ಪೊಲೀಸ್ ತಂಡಗಳು ಕಚೇರಿಗೆ ಭೇಟಿ ನೀಡಿ ಸುಮಾರು ನಾಲ್ಕೈದು ಗಂಟೆಗಳ ಕಾಲ ಸುದೀರ್ಘ ಪರಿಶೀಲನೆ ನಡೆಸಿವೆ. ಈ ವೇಳೆ ಮಹತ್ವದ ಕಡತಗಳು ಹಾಗೂ ಕಂಪ್ಯೂಟರ್ಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಶಕ್ಕೆ ಪಡೆದಿವೆ ಎಂದು ತಿಳಿದುಬಂದಿದೆ.
ಮಹಾಲೇಖಪಾಲರ (ಎಜಿ) ತಂಡದ ಲೆಕ್ಕಪರಿಶೋಧನೆ ವೇಳೆ ಹಣಕಾಸಿನ ವ್ಯವಹಾರಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ. ನಿವೃತ್ತ ನೌಕರರ ಗಳಿಕೆ ರಜೆ ನಗದೀಕರಣ, ಅತಿಥಿ ಶಿಕ್ಷಕರ ಗೌರವಧನ ಹಾಗೂ ಸಾಮಾನ್ಯ ಭವಿಷ್ಯನಿಧಿ (ಜಿಪಿಎಫ್) ಪಾವತಿಗೆ ಸಂಬಂಧಿಸಿದ ಹಣವನ್ನು ಅರ್ಹ ಫಲಾನುಭವಿಗಳಿಗೆ ಪಾವತಿಸುವ ಬದಲು ಬೇರೆ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬ ಆರೋಪವಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಇಒ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಕನಕಗೌಡ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ. ಅವರ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿರುವ ಹಿನ್ನೆಲೆಯಲ್ಲಿ ವಿಶೇಷ ತಂಡ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಿದೆ.
ವಶಪಡಿಸಿಕೊಂಡ ದಾಖಲೆಗಳು, ಕಂಪ್ಯೂಟರ್ ಸಾಮಗ್ರಿಗಳು ಹಾಗೂ ಬ್ಯಾಂಕ್ ವಹಿವಾಟುಗಳ ಪರಿಶೀಲನೆಯಿಂದ ಪ್ರಕರಣದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ನಿರೀಕ್ಷೆಯಿದೆ. ಹಣಕಾಸಿನ ವ್ಯವಹಾರಗಳಲ್ಲಿ ಯಾರ ಪಾತ್ರವಿದೆ ಮತ್ತು ಕಡತಗಳು ಲಭ್ಯವಾಗದಿರುವುದಕ್ಕೆ ಕಾರಣವೇನು ಎಂಬುದು ತನಿಖೆಯಿಂದ ದೃಢಪಡಬೇಕಿದೆ. ಆರೋಪಗಳ ಸತ್ಯಾಸತ್ಯತೆ ಪೊಲೀಸ್ ತನಿಖೆಯ ನಂತರವೇ ಸ್ಪಷ್ಟವಾಗಲಿದೆ.ತನಿಖೆ ಬಳಿಕ ಸತ್ಯಾಂಶ: ಬಿಇಒ ಕಚೇರಿಯಲ್ಲಿ ನಡೆದಿರುವ ಅಕ್ರಮ ಕುರಿತು ಕನಕನಗೌಡ ವಿರುದ್ಧ ಪ್ರಕರಣ ದಾಖಲು ಮಾಡಲಾಗಿತ್ತು. ಆ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಆಗಮಿಸಿದ ಪಿಎಸ್ಐ ಹನುಮಂತಪ್ಪ ತಳವಾರ ನೇತೃತ್ವದ ವಿಶೇಷ ಪೋಲಿಸರ ತಂಡ ಸುಮಾರು ರಾತ್ರಿ 10 ಗಂಟೆ ವರೆಗೂ ಪರಿಶೀಲನೆ ನಡೆಸಿ ಅಕ್ರಮಕ್ಕೆ ಸಂಬಂಧಿಸಿದ ಕಂಪ್ಯೂಟರ್ಗಳು ಹಾಗೂ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದೆ. ಇಲಾಖೆ ಸಿಬ್ಬಂದಿಯಿಂದಲೂ ಕೆಲವು ಮಾಹಿತಿಯನ್ನು ಪಡೆದುಕೊಂಡಿದ್ದಾರೆ. ಸಂಪೂರ್ಣ ತನಿಖೆಯ ನಂತರ ಸತ್ಯಾಸತ್ಯತೆ ತಿಳಿಯಲಿದೆ ಎಂದು ಕುಷ್ಟಗಿ ಬಿಇಒ ಉಮಾದೇವಿ ಬಸಾಪುರ ಹೇಳಿದರು.