ಶಾಲೆಯಲ್ಲಿ ಧರ್ಮ ನಿಂದನೆ ಆರೋಪ: ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ

| Published : Mar 25 2024, 12:55 AM IST

ಶಾಲೆಯಲ್ಲಿ ಧರ್ಮ ನಿಂದನೆ ಆರೋಪ: ತನಿಖೆಗೆ ಹೈಕೋರ್ಟ್‌ ತಡೆಯಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ವಾದವನ್ನು ಆಲಿಸಿದ ಜಸ್ಟೀಸ್‌ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕರಣದ ತನಿಖೆಗೆ ತಡೆ ನೀಡಿತ್ತಲ್ಲದೆ, ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಹಿಂದು ದೇವರ ನಿಂದನೆ ಆರೋಪದಲ್ಲಿ ಮಂಗಳೂರಿನ ಜೆರೋಸಾ ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಶಾಸಕರು ಸೇರಿದಂತೆ ಐವರ ವಿರುದ್ಧ ದಾಖಲಾದ ಪೊಲೀಸ್‌ ಕೇಸ್‌ ತನಿಖೆಗೆ ಹೈಕೋರ್ಟ್‌ ತಡೆ ನೀಡಿದೆ. ಅಲ್ಲದೆ ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿದೆ.ಫೆ.12ರಂದು ಜೆರೋಸಾ ಶಾಲೆಯಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಸಾಥ್‌ ನೀಡಿದ್ದಾರೆ ಎಂದು ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ವಿಹಿಂಪ ಮುಖಂಡ ಶರಣ್‌ ಪಂಪ್‌ವೆಲ್‌, ಪಾಲಿಕೆ ಸದಸ್ಯರಾದ ಸಂದೀಪ್‌ ಗರೋಡಿ, ಭರತ್ ಕುಮಾರ್‌ ಎಂಬವರ ವಿರುದ್ಧ ಶಾಲಾ ಬಳಿಯ ನಿವಾಸಿ ಅನಿಲ್‌ ಜೆರಾಲ್ಡ್‌ ಲೋಬೋ ಎಂಬವರು ಪಾಂಡೇಶ್ವರ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಈ ಐವರ ಮೇಲೆ ಪೊಲೀಸರು ಕೇಸು ದಾಖಲಿಸಿದ್ದರು. ಬಳಿಕ ಈ ಐವರು ಹೈಕೋರ್ಟ್‌ನಲ್ಲಿ ಜಾಮೀನು ಪಡೆದಿದ್ದರು. ಈ ಘಟನೆ ವಿಧಾನಸಭಾ ಅಧಿವೇಶನದಲ್ಲೂ ಭಾರಿ ಸದ್ದು ಮಾಡಿತ್ತಲ್ಲದೆ, ಸರ್ಕಾರ ಶಾಲಾ ಆಡಳಿತಕ್ಕೆ ಬೆಂಬಲವಾಗಿ ನಿಂತಿದೆ ಎಂದು ವಿಪಕ್ಷಗಳ ಟೀಕೆಗೆ ಗುರಿಯಾಗಬೇಕಾಯಿತು. ಶಾಲೆಯಲ್ಲಿ ಶಾಂತಿ ಕದಡುವ ವಾತಾವರಣವನ್ನು ಶಾಸಕರು ಸೇರಿದಂತೆ ಐವರು ಸೃಷ್ಟಿಸಿಲ್ಲ. ಆರೋಪಕ್ಕೆ ಒಳಗಾದ ಶಿಕ್ಷಕಿಯನ್ನು ಕೆಲಸದಿಂದ ತೆಗೆದುಹಾಕಿದ ಬಗ್ಗೆ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರೇ ಲಿಖಿತವಾಗಿ ತಿಳಿಸಿದ್ದಾರೆ. ಹಾಗಾಗಿ ಅಲ್ಲಿ ನಡೆದ ಘಟನೆಗೆ ಶಾಲಾ ಆಡಳಿತವೇ ಕಾರಣ. ಅಂತಹ ಕಾನೂನು ಸಮಸ್ಯೆ ಉದ್ಭವಿಸಿದ್ದರೆ ಪೊಲೀಸರೇ ಕೇಸು ದಾಖಲಿಸುತ್ತಿದ್ದರು ಅಥವಾ ಶಾಲಾ ಆಡಳಿತವೇ ದೂರು ನೀಡುತ್ತಿತ್ತು. ಅಲ್ಲಿ ಶಾಲೆಯ ಹೊರಗಿನವರು ದೂರು ನೀಡಿದ್ದಾರೆ. ಆದ್ದರಿಂದ ಐವರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಹಿರಿಯ ನ್ಯಾಯವಾದಿ ಅರುಣ್‌ ಶ್ಯಾಮ್‌ ಹೈಕೋರ್ಟ್‌ನ ಏಕಸದಸ್ಯ ಪೀಠದ ಎದುರು ವಾದ ಮಂಡಿಸಿದ್ದರು. ಇವರ ವಾದವನ್ನು ಆಲಿಸಿದ ಜಸ್ಟೀಸ್‌ ಕೃಷ್ಣ ಎಸ್‌.ದೀಕ್ಷಿತ್‌ ಅವರ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಪ್ರಕರಣದ ತನಿಖೆಗೆ ತಡೆ ನೀಡಿತ್ತಲ್ಲದೆ, ದೂರುದಾರರಿಗೆ ನೋಟಿಸ್‌ ಜಾರಿಗೊಳಿಸಿ ಆದೇಶಿಸಿತು.ಪ್ರಸಕ್ತ ಈ ಪ್ರಕರಣದ ವಿಚಾರಣೆಯನ್ನು ಪಾಂಡೇಶ್ವರ ಪೊಲೀಸರು ನಡೆಸುತ್ತಿದ್ದು, ಇನ್ನೊಂದೆಡೆ ಶಾಲೆಯ ವಿರುದ್ಧದ ಆರೋಪಗಳ ಬಗ್ಗೆ ಶಿಕ್ಷಣ ಇಲಾಖೆಯಿಂದ ಕಲಬುರಗಿ ವಲಯ ಹೆಚ್ಚುವರಿ ಆಯುಕ್ತ ಡಾ.ಆಕಾಶ್‌ ಅವರಿಂದ ವಿಚಾರಣೆ ನಡೆಸಲಾಗಿತ್ತು. ಅವರು ವಿಚಾರಣೆ ನಡೆಸಿ ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಈ ನಡುವೆ ಘಟನೆಯನ್ನು ಸರಿಯಾಗಿ ನಿಭಾಯಿಸದ ಆರೋಪದಲ್ಲಿ ಜಿಲ್ಲಾ ವಿದ್ಯಾಂಗ ಉಪ ನಿರ್ದೇಶಕರನ್ನು ವರ್ಗಾವಣೆ ಮಾಡಲಾಗಿತ್ತು.