ಜಿಲ್ಲಾಧಿಕಾರಿಗಳು ತಕ್ಷಣ ಎಚ್ಚೆತ್ತು ೧೫ ದಿನದೊಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕಲ್ಲದೇ, ಮುಂದಿನ ೩ ತಿಂಗಳೊಳಗಾಗಿ ಅತಿಕ್ರಮಣ ಜಾಗವನ್ನು ಖುಲ್ಲಾಪಡಿಸಬೇಕು.
ಮುಂಡಗೋಡ: ಪಟ್ಟಣದ ಕಿಲ್ಲೆ ಓಣಿ ಕಾಳಿಕಾ ದೇವಾಲಯ ಸುತ್ತಮುತ್ತ ಪ್ರದೇಶದ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿರುವ ಸುಮಾರು ೨ ಎಕರೆ ಜಾಗವನ್ನು ಅತಿಕ್ರಮಣ ಮಾಡಲಾಗಿದೆ. ವಿಶೇಷವಾಗಿ ಈಗ ಕಾಳಿಕಾ ದೇವಾಲಯದ ಗೋಡೆಗೆ ತಾಗಿಯೇ ಮನೆ ಕಟ್ಟಿಕೊಂಡು ಅನ್ಯ ಕೋಮಿನವರೊಬ್ಬರು ಅತಿಕ್ರಮಣ ಮಾಡಿದ್ದು, ತಾಲೂಕಿನ ಹಿಂದು ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ ಎಂದು ರಾಜ್ಯ ಬಿಜೆಪಿ ಮಾಧ್ಯಮ ವಕ್ತಾರ ಹರಿಪ್ರಕಾಶ ಕೋಣೆಮನೆ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣದ ಪ್ರಭಾವ ದುರ್ಬಳಕೆಯಾದರೆ ಹೇಗೆ ಸರ್ಕಾರಿ ವ್ಯವಸ್ಥೆ ಊನ ಆಗುತ್ತದೆ ಎಂಬುವುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಸ್ಥಳಿಯ ಶಾಸಕರ ಹಸ್ತಕ್ಷೇಪದಿಂದಾಗಿ ಕಾಳಿಕಾ ದೇವಾಲಯವನ್ನು ಅತಿಕ್ರಮಣ ಮಾಡುವ ಮೂಲಕ ದೇವಾಲಯದ ಪಾವಿತ್ರ್ಯವನ್ನು ಹಾಳಾಗಲು ಕಾರಣವಾಗಿದೆ. ಮುಂಡಗೋಡದ ಕಾಳಿಕಾ ದೇವಾಲಯ ಅತಿಕ್ರಮಣ ನಡೆದಿರುವುದು ಇಡೀ ಜಿಲ್ಲೆಯ ಜನರಲ್ಲಿ ದಿಗ್ಭ್ರಮೆ ಉಂಟು ಮಾಡಿದೆ ಎಂದರು.ಜಿಲ್ಲಾಧಿಕಾರಿಗಳು ತಕ್ಷಣ ಎಚ್ಚೆತ್ತು ೧೫ ದಿನದೊಳಗಾಗಿ ಅಕ್ರಮ ಕಟ್ಟಡವನ್ನು ತೆರವುಗೊಳಿಸಬೇಕಲ್ಲದೇ, ಮುಂದಿನ ೩ ತಿಂಗಳೊಳಗಾಗಿ ಅತಿಕ್ರಮಣ ಜಾಗವನ್ನು ಖುಲ್ಲಾಪಡಿಸಬೇಕು. ಇಲ್ಲದೇ ಹೋದರೆ ಜಿಲ್ಲಾಡಳಿತದ ಎದುರು ಅನಿರ್ದಿಷ್ಟಾವಧಿ ಹೋರಾಟ ಮಾಡಲಾಗುವುದು ಅಲ್ಲದೇ ಜಿಲ್ಲೆಯಿಂದ ಮುಂಡಗೋಡ ಚಲೋ ಅಭಿಯಾನ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಎಲ್.ಟಿ. ಪಾಟೀಲ ಮಾತನಾಡಿ, ತಕ್ಷಣ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಮಧ್ಯಪ್ರವೇಶಿಸಿ ಪ್ರಕರಣವನ್ನು ಇತ್ಯರ್ಥಪಡಿಸಿ ನ್ಯಾಯ ಒದಗಿಸಿಕೊಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ದಂಗೆಗಳು ನಡೆಯುವ ಸಾಧ್ಯತೆ ಇದೆ. ಅದಕ್ಕೆ ಅವಕಾಶ ನೀಡದಂತೆ ನಿಗಾ ವಹಿಸಬೇಕು ಎಂದರು.ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಹರೀಶ ಕರ್ಕಿ, ಹುಬ್ಬಳ್ಳಿ ನಗರ ಸಂಯೋಜನ ಸಂತೋಷ ಕಟಾರೆ, ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ಪಪಂ ಮಾಜಿ ಸದಸ್ಯ ಅಶೋಕ ಚಲವಾದಿ, ತುಕಾರಾಮ ಇಂಗಳೆ, ಗುರು ಕಾಮತ, ಪ್ರಕಾಶ ಬಡಿಗೇರ, ಶಂಕರ ಲಮಾಣಿ ಮುಂತಾದವರು ಉಪಸ್ಥಿತರಿದ್ದರು.