ಸಾರಾಂಶ
ನಗರಸಭೆಯಿಂದ ಒಂದೇ ಕಾಮಗಾರಿ ನಡೆಸಿ ಹಲವು ಬಾರಿ ಬಿಲ್ಲು ಪಡೆದು, ಕಾಮಗಾರಿ ನಡೆಸದೆ ಬಿಲ್ ಪಡೆದಿದ್ದಾರೆಂದು ಆರೋಪಿಸಿ ಗುತ್ತಿಗೆದಾರರೊಬ್ಬರು ನೀಡಿದ ದೂರಿನ ಅನ್ವಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ನಗರದಲ್ಲಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.
ನಗರಾಭಿವೃದ್ಧಿ ಕೋಶದ ಅಧಿಕಾರಿಗಳಿಂದ ಪರಿಶೀಲನಾ ಕಾರ್ಯ ಚುರುಕು
ಕನ್ನಡಪ್ರಭ ವಾರ್ತೆ ಹರಿಹರನಗರಸಭೆಯಿಂದ ಒಂದೇ ಕಾಮಗಾರಿ ನಡೆಸಿ ಹಲವು ಬಾರಿ ಬಿಲ್ಲು ಪಡೆದು, ಕಾಮಗಾರಿ ನಡೆಸದೆ ಬಿಲ್ ಪಡೆದಿದ್ದಾರೆಂದು ಆರೋಪಿಸಿ ಗುತ್ತಿಗೆದಾರರೊಬ್ಬರು ನೀಡಿದ ದೂರಿನ ಅನ್ವಯ ಜಿಲ್ಲಾ ನಗರಾಭಿವೃದ್ಧಿ ಕೋಶದ ಅಧಿಕಾರಿಗಳು ನಗರದಲ್ಲಿ ಪರಿಶೀಲನಾ ಕಾರ್ಯ ನಡೆಸಿದ್ದಾರೆ.
ಗುತ್ತಿಗೆದಾರ ಮೊಹಮ್ಮದ್ ಮಜಹರ್ ರವರು 2020, 2021 ಮತ್ತು 2022ರ ಅವಧಿಯಲ್ಲಿ ₹50 ಲಕ್ಷಕ್ಕೂ ಹೆಚ್ಚಿನ ಮೊತ್ತದ ಅನುದಾನದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ 32ಕಾಮಗಾರಿಗಳ ಕುರಿತು ತನಿಖೆ ನಡೆಸಲು ಜಿಲ್ಲಾಧಿಕಾರಿಯವರಿಗೆ ಈ ಹಿಂದೆ ದೂರು ಸಲ್ಲಿಸಿದ್ದರು.ಸೋಮವಾರ, ಮಂಗಳವಾರ ಮತ್ತು ಬುಧವಾರದಂದು 32 ಕಾಮಗಾರಿಗಳ ಪೈಕಿ ಅಧಿಕಾರಿಗಳ ತಂಡವು 13 ಕಾಮಗಾರಿಗಳನ್ನು ಪರಿಶೀಲನೆ ನಡೆಸಿದ್ದು, ಉಳಿದ ಕಾಮಗಾರಿಗಳ ಪರಿಶೀಲನೆ ನಡೆಯಬೇಕಾಗಿದೆ. 21ನೇ ವಾರ್ಡಿನ ನರ್ತಕಿ ಬಾರ್ ಹಿಂಭಾಗದ ಕನ್ವರ್ ವೆನ್ಸಿಯಲ್ಲಿನ ಸಿಸಿ ರಸ್ತೆ ಮತ್ತು ಸಿಸಿ ಚರಂಡಿ ನಿರ್ಮಿಸಿ, 4 ಬಾರಿ ಸಿಸಿ ಚರಂಡಿ, 2 ಬಾರಿ ಸಿಸಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಬಿಲ್ ಪಡೆಯಲಾಗಿದೆ ಎಂದು ದೂರಿದ್ದನ್ನು ತಂಡವು ಪರಿಶೀಲಿಸಿತು.ಈ ಕಾಮಗಾರಿಯ ಹೆಸರನ್ನು ಒಮ್ಮೆ ವೀವಾಕಾನಂದಾಶ್ರಮದ ಹಿಂದಿನ ಕನ್ಸರ್ ವೆನ್ಸಿ ಎಂದರೆ, ಇನ್ನೊಮ್ಮೆ ನರ್ತಕರಿ ಬಾರಿ ಹಿಂದೆ ಎಂದು ಇನ್ನೊಮ್ಮೆ, ಪವನ್ ಸ್ಟೋರ್ ಹಿಂದಿನದ್ದು ಎಂದು ಮಗದೊಮ್ಮೆ ಶಾಮಿಯಾನ ಅಂಗಡಿ ಪಕ್ಕದ ಎಂದು, ಮತ್ತೊಮ್ಮೆ ಜೆ.ಸಿ. ಬಡಾವಣೆ 1ನೇ ಮೇನ್, ೧ನೇ ಕ್ರಾಸ್ ಕನ್ಸರ್ ವೆನ್ಸಿ ಎಂದು ಕಾಮಗಾರಿ ಹೆಸರನ್ನು ಬದಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.ಈ ಕಾಮಗಾರಿಗೆ ಎರಡು-ಮೂರು ತಿಂಗಳುಗಳ ಅಂತರದಲ್ಲಿ ನಗರಸಭೆ ಸಾಮಾನ್ಯ ನಿಧಿ, 15ನೇ ಹಣಕಾಸು ಯೋಜನೆ ಅನುದಾನದಲ್ಲಿ ಗುತ್ತಿಗೆದಾರರಿಗೆ ಚೆಕ್ ನೀಡಲಾಗಿದೆ ಎಂದು ದೂರುದಾರರು ಮಾಧ್ಯಮದವರಿಗೆ ಮಾಹಿತಿ ನೀಡಿದರು.ಈ ಕಾಮಗಾರಿಗಳ ಬಿಲ್ ಪಾವತಿಗೆ ಮುನ್ನ ಗುತ್ತಿಗೆದಾರರು ನೀಡುವ ಫೋಟೋಗಳಲ್ಲಿ ಪೌರಾಯುಕ್ತರು, ಎಇಇ, ಎಇ ಹಾಗೂ ಗುತ್ತಿಗೆದಾರರು ಇತರೆ ಅಧಿಕಾರಿಗಳು ನಿಂತಿಲ್ಲ, ಒಂದೆ ಕಾಮಗಾರಿಗೆ ಬೇರೆ, ಬೇರೆ ಜಾಗದಿಂದ ಫೋಟೋ ತೆಗೆದು ಫೈಲ್ ನೊಂದಿಗೆ ಲಗತ್ತಿಸಿದ್ದು ಲೊಕೇಷನ್ ಹೊಂದಾಣಿಕೆ ಇಲ್ಲ ಎಂದರು.ಉಳಿದಂತೆ 21ನೇ ವಾರ್ಡಿನಲ್ಲಿ ಹಾಗೂ 27ನೇ ವಾರ್ಡಿನಲ್ಲಿ ಹಾಗೂ ಜೆ.ಸಿ. ಬಡಾವಣೆಯಲ್ಲಿ 4 ಕಡೆ ಕಿರು ನೀರು ಸರಬರಾಜು ಟ್ಯಾಂಕ್ ಹಾಗೂ ಪೈಪ್‌ಲೈನ್ ಕಾಮಗಾರಿಯಲ್ಲೂ ಏರು, ಪೇರು ಇದೆ. ಫೈಲ್‌ಗಳಲ್ಲಿ ಹೇಳಿದ ಜಾಗಗಳಲ್ಲಿ ಕಾಮಗಾರಿ ಇಲ್ಲ ಎಂದು ಅವರು ದೂರಿದರು.ಜಿಲ್ಲಾ ನಗರಾಭಿವೃದ್ಧಿ ಕೋಶದ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಎನ್. ಸ್ವಾಮಿ, ನಗರಸಭೆ ಎಇಇ ವಿನಯ್ ಕುಮಾರ್, ಅಶೋಕ್ ಸಿ. ಇದ್ದರು.