ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ತಹಸೀಲ್ದಾರ ಕಿರುಕುಳದಿಂದ ಬೇಸತ್ತು ದ್ವಿತೀಯ ದರ್ಜೆ ನೌಕರ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ, ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ವಿರುದ್ಧ 80 ನೌಕರರು ಕಿರುಕುಳ ಆರೋಪ ಮಾಡಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಕಡೇಚೂರ ಕೆಳಹಂತದ ನೌಕರರಿಗೆ ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಸುಳ್ಳು ಆರೋಪ ಹೊರಸಿ ಅಮಾನತಿಗೆ ಶಿಪಾರಸು ಮಾಡುವ ಮೂಲಕ ಆತ್ಮಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿ 80 ವಸತಿ ನಿಲಯಗಳ ಸಿಬ್ಬಂದಿ ಸಹಿ ಹಾಕಿ ಕ್ರಮಕ್ಕೆ ಆಗ್ರಹಿಸಿ ಪತ್ರ ಬರೆದಿದ್ದಾರೆ.
ನಾವು ಎಷ್ಟೇ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದರೂ ಜಿಲ್ಲಾ ಅಧಿಕಾರಿ ಶಿವಪ್ರಿಯಾ ಅವರು ನೌಕರರಿಗೆ ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡುವ ಬದಲಿಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ. ವಸತಿ ನಿರ್ವಹಣೆ ಮಾಸಿಕ ಬಿಲ್ ತಯಾರಿಸಿ ಜಿಲ್ಲಾ ಕಚೇರಿಗೆ ಕಳುಹಿಸಿದರೆ ಅನಗತ್ಯವಾಗಿ ತಡೆ ಮಾಡುತ್ತಿದ್ದಾರೆ. ಇವರು ಹೇಳಿದಂತೆ ಬಿಲ್ ತಯಾರಿಸಿದರೆ ಮಾತ್ರ ಸಹಿ ಹಾಕುತ್ತಾರೆ. ವಸತಿ ನಿಲಯದ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಏನಾದರೂ ತೊಂದರೆ ಉಂಟಾದರೆ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.ತಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಿಡಿದೆದ್ದ ತಾಲೂಕು ಕಲ್ಯಾಣಾಧಿಕಾರಿಗಳು, ವಿಸ್ತರಣಾಧಿಕಾರಿಗಳು, ನಿಲಯ ಪಾಲಕರು ಹಾಗೂ ಮೇಲ್ವಿಚಾರಕರು ಸೇರಿದಂತೆ ಗ್ರೂಪ್ ಡಿ ನೌಕರರ ಸುಮಾರು 80 ಜನ ಸಹಿ ಮಾಡಿ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ಸಮಸ್ಯೆಗೆ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಕೆಲವರು ಇಲಾಖೆಯ ಸುಮಾರು 200 ಸಿಬ್ಬಂದಿಯಿಂದ ಖಾಲಿ ಹಾಳೆಯ ಮೇಲೆ ಸಹಿ ಪಡೆದುಕೊಂಡು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಈ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
-ಶಿವಪ್ರಿಯಾ ಕಡೇಚೂರ, ಹಿಂದುಳಿದ ವರ್ಗದ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ