ಶಿಗ್ಗಾಂವಿ: ತಾಲೂಕಿನ ಕಲ್ಯಾಣ ಗ್ರಾಮದಲ್ಲಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ (ಜಿಟಿಟಿಸಿ) ಇತ್ತೀಚೆಗೆ ಸೇರ್ಪಡೆಯಾದ ಪ್ರಾಂಶುಪಾಲ ಹಾಗೂ ಅಟೆಂಡರ್‌ಗಳು ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಎಬಿವಿಪಿ ಮತ್ತು ಕನ್ನಡ ಜಾಗ್ರತ ವೇದಿಕೆ ಸಹಯೋಗದಲ್ಲಿ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಜಿಟಿಟಿಸಿ ಕೇಂದ್ರದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಮೌಖಿಕವಾಗಿ ತಿಳಿಸಿ ಮನವಿ ಸಲ್ಲಿಸಿದರೂ ಪ್ರಶ್ನೆ ಮಾಡುವ ವಿದ್ಯಾರ್ಥಿಗಳ ವೀಡಿಯೋ ಮಾಡಿ, ಇದರಿಂದ ಟಾರ್ಗೆಟ್ ಮಾಡುವುದು, ಪಾಲಕರಿಗೆ ಕಳುಹಿಸುವುದಾಗಿ ಹೇಳಿ ಬ್ಲಾಕ್‌ಮೇಲ್ ಮಾಡಲಾಗುತ್ತಿದೆ. ಸದ್ಯ ೩೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಸೆಮಿಸ್ಟರ್ ಪರೀಕ್ಷೆಗಳು ಇನ್ನು ಕೇವಲ ಮೂರೇ ತಿಂಗಳಿನ ಅಂತರದಲ್ಲಿದೆ. ಬೋಧಕರ ಕೊರತೆ ಇರುವುದರಿಂದ ಇನ್ನೂ ಎರಡು-ಮೂರು ವಿಷಯ ಪಾಠ ಪ್ರಾರಂಭ ಮಾಡಿಲ್ಲ. ಪ್ರವೇಶಾತಿ ಪಡೆಯುವಾಗ ಶೇ. ೭೦ರಷ್ಟು ಪ್ರಾಯೋಗಿಕ ತರಬೇತಿ ಎಂದು ಹೇಳಿದ್ದರು, ಆದರೆ ಈ ಸೆಮಿಸ್ಟರ್‌ಗೆ ಬೇಕಾದ ಯಂತ್ರೋಪಕರಣಗಳು ಇಲ್ಲ. ಇದರಿಂದ ತಮ್ಮ ಭವಿಷ್ಯ ಕೌಶಲ್ಯಯುತವಾಗುವುದೇ? ಜತೆಗೆ ಇಂತಹ ತರಬೇತಿಯಿಂದ ಉದ್ಯೋಗ ಸಿಗುವುದೇ ಎಂಬ ಆತಂಕ ವ್ಯಕ್ತಪಡಿಸಿದರು.ಇತ್ತೀಚೆಗೆ ಬಂದ ಉಪನ್ಯಾಸಕರ ಪಾಠ ಅರ್ಥವಾಗಲು ಕಪ್ಪವಾಗುತ್ತಿದೆ, ಈ ವಿಷಯ ಪ್ರಾಂಶುಪಾಲರ ಗಮನಕ್ಕೆ ತಂದರೂ ಅವರು ವಿದ್ಯಾರ್ಥಿಗಳದ್ದೇ ತಪ್ಪು ಎಂಬಂತೆ ಬಿಂಬಿಸುತ್ತಿದ್ದಾರೆ. ಸುಮಾರು ೨೫ ಸಾವಿರ ವಿದ್ಯಾರ್ಥಿ ವೇತನ ಬರುವುದಾಗಿ ಭರವಸೆ ನೀಡಿದ್ದರು. ಆದರೆ ಒಂದು ವರ್ಷ ಮೇಲಾದರೂ ಇನ್ನೂ ವಿದ್ಯಾರ್ಥಿವೇತನ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಯಾವುದಾದರೂ ಸಮಸ್ಯೆಯನ್ನು ವಿದ್ಯಾರ್ಥಿಗಳು ಪ್ರಾಂಶುಪಾಲರ ಬಳಿ ಹೇಳಲು ಹೊರಟರೆ ಭೇಟಿ ಅವಕಾಶ ನೀಡುತ್ತಿಲ್ಲ. ಹಳ್ಳಿಯಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲ. ಈ ಮೊದಲಿದ್ದ ಉಪನ್ಯಾಸಕರನ್ನು ಯಾವುದೇ ಋಣಾತ್ಮಕ ಕಾರಣಗಳಿಲ್ಲದಿದ್ದರೂ ಕೇಂದ್ರ ಕಚೇರಿಯ ಮೇಲೆ ಆಪಾದನೆ ಹಾಕಿ ಸೇವೆಯಿಂದ ತೆಗೆಯಲಾಗಿದೆ. ಹಾಸ್ಟೆಲ್‌ನ ಕ್ಯಾಂಟೀನ್‌ನಲ್ಲಿ ಸ್ವಚ್ಛತೆ ಇಲ್ಲ ಎಂದು ಹೇಳಿದರು.ಉಪನ್ಯಾಸಕರು ವಿದ್ಯಾರ್ಥಿಗಳ ಸಣ್ಣ ಸಣ್ಣ ತಪ್ಪಿಗೂ ಇನ್ನೂರು ಬಸ್ಕಿಗಳನ್ನು ಹೊಡೆಸಿ ಶಿಕ್ಷೆ ನೀಡುತ್ತಾರೆ. ಈ ಎಲ್ಲ ಶೈಕ್ಷಣಿಕ ಸಮಸ್ಯೆಗಳನ್ನು ಪ್ರಾಂಶುಪಾಲರ ಬಳಿ ಹೇಳಲು ಹೋದರೆ ಅಟೆಂಡರ್‌ಗಳೇ ಇಲ್ಲಿ ಪ್ರಾಂಶುಪಾಲರಂತೆ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಬಂಕಾಪುರ ಪಿಎಸ್‌ಐ ಶ್ರೀಶೈಲ ಕೆಂಚಣ್ಣವರ, ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಅಭಿಷೇಕ್ ದೊಡ್ಡಮನಿ, ಬಸವರಾಜ ಕಲ್ಲಪ್ಪನವರ, ವಿನಾಯಕ ಕುಮ್ಮೂರ, ಕನ್ನಡ ಜಾಗ್ರತ ವೇದಿಕೆಯ ಜಿಲ್ಲಾಧ್ಯಕ್ಷ ಹರೀಶಗೌಡ ಪಾಟೀಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ದೊಡ್ಡಮನಿ, ಲಂಕೇಶ ಛಲವಾದಿ, ಆಕಾಶ ವನಹಳ್ಳಿ, ವಿನಾಯಕ ಆಚಾರ್ಯ, ಗಗನ ಹಡಪದ, ರಕ್ಷಿತ್ ಎಂ., ಗುರುರಾಜ, ವೀರೇಶ ಇದ್ದರು.