ಸಾರಾಂಶ
ಧರ್ಮಸ್ಥಳ ಸಂಘದ ಅಧಿಕಾರಿಗಳು ಹಾಗೂ ಮೃತರ ಸಂಬಂಧಿಕರನ್ನು ಕರೆಸಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿ ಸಂಘದಿಂದ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಕೂಡಲೇ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಬೇಕು.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಸಾಲಕಟ್ಟುವಂತೆ ಸಂಘದ ಸಿಬ್ಬಂದಿ ನೀಡಿದ ಕಿರುಕುಳದಿಂದ ತಾಲೂಕಿನ ಮಲಿಯೂರು ಗ್ರಾಮದ ಮಹಿಳೆ ಸಾವನ್ನಪ್ಪಿದ್ದು, ಕೂಡಲೇ ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿ ಗುರುವಾರ ರಾತ್ರಿ ಮೃತರ ಸಂಬಂಧಿಕರು ಹಾಗೂ ವಿವಿಧ ಸಂಘಟನೆಗಳು ಮುಖಂಡರು ಪಟ್ಟಣದ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಘದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸಂಘದ ಸಿಬ್ಬಂದಿ ನೀಡಿದ ಕಿರುಕುಳದಿಂದ ಗ್ರಾಮದ ಮಲ್ಲು ಅವರ ಪತ್ನಿ ಮಹಾಲಕ್ಷ್ಮಿ ಮೃತಪಟ್ಟಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್, ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ತಹಸೀಲ್ದಾರ್ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರ ಅಹವಾಲನ್ನು ಸ್ವೀಕಸಿದರು.ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಧರ್ಮಸ್ಥಳ ಸಂಘದ ಅಧಿಕಾರಿಗಳು ಹಾಗೂ ಮೃತರ ಸಂಬಂಧಿಕರನ್ನು ಕರೆಸಿ ಆತ್ಮಹತ್ಯೆ ಪ್ರಕರಣ ಸಂಬಂಧ ಮಾತನಾಡಿ ಸಂಘದಿಂದ ಪರಿಹಾರ ಕೊಡಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಕೂಡಲೇ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಬೇಕೆಂದು ಮನವಿ ಮಾಡಿಕೊಂಡರು.
ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾತನಾಡಿ, ಆತ್ಮಹತ್ಯೆ ಸಂಬಂಧ ಈಗಾಗಲೇ ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಅಧಿಕಾರಿಗಳು ಪರಿಹಾರ ಕೊಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂದಕ್ಕೆ ಪಡೆದು ಮೃತದೇಹವನ್ನು ಕಿರುಗಾವಲು ಹೋಬಳಿ ಮಲಿಯೂರು ಗ್ರಾಮಕ್ಕೆ ತಗೆದುಕೊಂಡು ಹೋಗಲಾಯಿತು.