ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಜಯನಗರ ಬಡಾವಣೆಯ ಅಸೆಸ್ ಮೆಂಟ್ ನಂ. 2584ರ ನಿವೇಶನವನ್ನು ಪುರಸಭೆ ನೌಕರರೊಬ್ಬರು ತಮ್ಮ ಪತಿ ಹೆಸರಿಗೆ ಅಕ್ರಮ ಖಾತೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಅಕ್ರಮ ಖಾತೆ ಮಾಡಲು ಸಹಕರಿಸಿದ ಎಲ್ಲಾ ಸಿಬ್ಬಂದಿ ವಿರುದ್ಧ ತನಿಖೆ ನಡೆಸುವಂತೆ ಸದಸ್ಯರು ಒಕ್ಕೂರಲಿನಿಂದ ಆಗ್ರಹಿಸಿದರು.ಪಟ್ಟಣದ ಪುರಸಭೆ ಶಹರಿ ರೋಜ್‌ಗಾರ್ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, ಜಯನಗರ ಬಡಾವಣೆಯಲ್ಲಿ ತಾಲೂಕು ಬೋರ್ಡ್ ಹಂಚಿಕೆ ಮಾಡಿದ ನಿವೇಶನಗಳು ವಿವಾದಕ್ಕೀಡಾಗಿ ಪ್ರಕರಣ ಎಸ್.ಸಿ/ಎಸ್.ಟಿ ಆಯೋಗ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
ಪ್ರಕರಣ ನ್ಯಾಯಾಲಯದ ಪರಿಧಿಯಲ್ಲಿದ್ದರೂ ಪುರಸಭೆ ನೌಕರರೊಬ್ಬರು ಅಸೆಸ್ ಮೆಂಟ್ ನಂ. 2584ರಲ್ಲಿದ್ದ ನಿವೇಶನವನ್ನು ಅಕ್ರಮವಾಗಿ 25*45 ನಿವೇಶನವನ್ನಾಗಿ ಪರಿವರ್ತಿಸಿಕೊಂಡು ತಮ್ಮ ಪತಿ ರಾಮಚಂದ್ರರ ಹೆಸರಿಗೆ ಅಕ್ರಮ ಖಾತೆ ಮಾಡಿಕೊಂಡು ದಲಿತ ನಿವೇಶನ ಕಬಳಿಸಿದ್ದಾರೆ ಎಂದು ದೂರಿದರು.ಇದೇ ರೀತಿ ವಾರ್ಡ್ ನಂ. 22 ರ ಸರ್ವೇ ನಂ. 155/8 ರಲ್ಲಿ 36 ಗುಂಟೆ ಅನ್ಯಕ್ರಾಂತ ಮಂಜೂರಾತಿ ಮಾಡಿ ಪುರಸಭಾ ಕಚೇರಿಯಲ್ಲಿ ಹಾಲಿ ಅಸೆಸ್ಮೆಂಟ್ ನಂಬರ್ 3470/1 ರಿಂದ 3470/22 ರ ವರೆಗೆ ಒಟ್ಟು 22 ನಿವೇಶನಗಳಾಗಿ ವಿಂಗಡಿಸಿ ಪ್ರತ್ಯೇಕ ಇ- ಆಸ್ತಿ ಮಾಡಿದ್ದಾರೆ ಎಂದರು.
ಸಾರ್ವಜನಿಕ ಪಾರ್ಕ್ ನಿರ್ಮಾಣಕ್ಕೆ ಮೀಸಲಿಟ್ಟಿದ್ದ 725 ಚ.ಮೀ ಜಾಗವನ್ನು ಸಹ ಖಾತೆ ಮಾಡಲಾಗಿದೆ. ನೌಕರರು ನಡೆಸುತ್ತಿರುವ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸದಸ್ಯರು ಒತ್ತಾಯಿಸಿದರು.ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಬಹುತೇಕ ಎಲ್ಲಾ ಮುಖ್ಯ ರಸ್ತೆಗಳನ್ನೂ ರಸ್ತೆ ಬದಿ ವ್ಯಾಪಾರಿಗಳು ಅತಿಕ್ರಮಿಸಿದ್ದಾರೆ. ಕೆಲವರು ಪುಟ್ ಪಾತ್ ಅನ್ನು ಕಾಯಂ ಮಳಿಗೆಗಳನ್ನಾಗಿಸಿಕೊಂಡಿದ್ದಾರೆ. ಇದು ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ಪ್ಯಾಪಾರಿಗಳಿಂದ ಸಿಬ್ಬಂದಿ ಹಣ ವಸೂಲು ಮಾಡುತ್ತಿರುವ ಬಗ್ಗೆ ದೂರುಗಳಿವೆ. ಈ ಬಗ್ಗೆ ಕಠಿಣ ಕ್ರಮ ವಹಿಸುವಂತೆ ಸದಸ್ಯರು ಆಗ್ರಹಿಸಿದರು.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಅರ್ಧಕ್ಕೆ ಸ್ಥಗಿತಗೊಂಡಿರುವ ಆರ್ಚ್ ತೆರವುಗೊಳಿಸುವ ಸಂಬಂಧ ಸದಸ್ಯರ ನಡುವೆ ಪರ ಮತ್ತು ವಿರೋಧದ ವಾಗ್ವಾದ ನಡೆಯಿತು. 38 ಲಕ್ಷ ರು. ಅಂದಾಜು ವೆಚ್ಚದಲ್ಲಿ ಹೊಸಹೊಳಲಿನ ಲಕ್ಷ್ಮೀನಾರಾಯಣಸ್ವಾಮಿ ದೇಗುಲಕ್ಕೆ ಸ್ವಾಗತ ಕೋರಿ ಆರ್ಚ್ ನಿರ್ಮಿಸಲು ಯೋಜಿಸಲಾಗಿದೆ. ಈ ಹಿಂದಿನ ಸರ್ಕಾರದಲ್ಲಿ ಇದಕ್ಕೆ ಹಣ ಬಿಡುಗಡೆಯಾಗಿತ್ತು ಎಂದರು.ಆದರೆ, ಕಾಮಗಾರಿ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದ ಭೂ ಸೇನೆ ಇದುವರೆಗೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ. ಸರ್ಕಾರದಿಂದ ಅಗತ್ಯ ಅನುದಾನ ತಂದು ಆರ್ಚ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸುವಂತೆ ಕೆಲ ಸದಸ್ಯರು ಒತ್ತಾಯಿಸಿದರು.
ಪಟ್ಟಣದ ಅಂಬಾರಿ ಹೋಟೆಲ್ ಬಳಿಯಿಂದ ಬಸ್ ನಿಲ್ದಾಣದವರೆಗೆ ಒತ್ತುವರಿಯಾಗಿರುವ ರಾಜಕಾಲುವೆಯನ್ನು ಸರ್ವೇ ಮಾಡಿಸಿ ಅಭಿವೃದ್ಧಿ ಮಾಡುವುದು ಸೇರಿ 34 ವಿಚಾರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.ಸಭೆಯಲ್ಲಿ ಅಧ್ಯಕ್ಷೆ ಪಂಕಜ ಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸೌಭಾಗ್ಯ ಉಮೇಶ್, ಮುಖ್ಯಾಧಿಕಾರಿ ರಾಜು ವಠಾರ, ಸ್ಥಾಯಿ ಸಮಿತಿ ಅಧ್ಯಕ್ಷ ಎಚ್.ಆರ್.ಲೋಕೇಶ್, ಸದಸ್ಯರಾದ ಕೆ.ಸಿ.ಮಂಜುನಾಥ್, ಬಸ್ ಸಂತೋಷ ಕುಮಾರ್, ಕೆ.ಎಸ್.ಪ್ರಮೋದಕುಮಾರ್, ಡಿ.ಪ್ರೇಂಕುಮಾರ್, ಎಚ್.ಎನ್.ಪ್ರವೀಣ್, ಕೆ.ಆರ್.ರವೀಂದ್ರಬಾಬು, ತಿಮ್ಮೇಗೌಡ, ಕೆ.ಬಿ.ಮಹೇಶ್, ಎಚ್.ಡಿ.ಅಶೋಕ್, ಗಿರೀಶ್, ಮಹಾದೇವಿ, ಶುಭಾ, ಶೋಬಾ, ಖಮರುಲ್ಹಾ ಬೇಗಂ, ಇಂದ್ರಾಣಿ ಸೇರಿದಂತೆ ಹಲವರು ಭಾಗವಹಿಸಿದ್ದರು.