ಪುರಸಭೆ ಜಾಗದಲ್ಲಿ ಅಕ್ರಮವಾಗಿ ಖಾಲಿ ನಿವೇಶನಗಳ ಹಂಚಿಕೆ ಆರೋಪ

| Published : Nov 30 2024, 12:47 AM IST

ಪುರಸಭೆ ಜಾಗದಲ್ಲಿ ಅಕ್ರಮವಾಗಿ ಖಾಲಿ ನಿವೇಶನಗಳ ಹಂಚಿಕೆ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಪುರಸಭೆ ಮಾಲೀಕತ್ವದ ಕೆಂಗೇರಿಮಡ್ಡಿ ಸಾಯಿ ಮಂದಿರ ಹಿಂಭಾಗ ಕೆರೆ ಹತ್ತಿರದ ಸುಮಾರು 3 ಎಕರೆ 26 ಗುಂಟೆ ಪುರಸಭೆ ಖಾಲಿ ಜಾಗ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಸ್ಥಳೀಯ ಕೆಂಗೇರಿಮಡ್ಡಿ ಪುರಸಭೆ ಮಾಲೀಕತ್ವದ ಸರ್ವೇ ನಂ.29/1 ರಲ್ಲಿನ ಸುಮಾರು 3 ಎಕರೆ 26 ಗುಂಟೆ, ಖಾಲಿ ಜಾಗವನ್ನು ಪುರಸಭೆಯ ಕೆಲವು ಸ್ವಹಿತಾಸಕ್ತಿಯುಳ್ಳ ಸದಸ್ಯರು, ರಾಜಕೀಯ ಮುಖಂಡರು ಸೇರಿಕೊಂಡು ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ಖಾಲಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡುತ್ತಿದ್ದಾರೆ. ಇದರಲ್ಲಿ ಪುರಸಭೆ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆ. ಕಾರಣ ಕೂಡಲೇ ಈ ಅಕ್ರಮ ವ್ಯವಹಾರ ನಿಲ್ಲಿಸಬೇಕು ಎಂದು ಸ್ಥಳೀಯ ಪುರಸಭೆ ಸದಸ್ಯರಾದ ಬಸವರಾಜ ಹಿಟ್ಟಿನಮಠ ಪ್ರಹ್ಲಾದ ಸಣ್ಣಕ್ಕಿ, ರಾಜು ಚಮಕೇರಿ, ರವಿ ಜವಳಗಿ, ಸರಸ್ವತಿ ರಾಮೋಜಿ, ಲಕ್ಷ್ಮೀ ಮುದ್ದಾಪೂರ ಸೇರಿ ಬಾಗಲಕೋಟ ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ, ನಮ್ಮ ಪುರಸಭೆ ಮಾಲೀಕತ್ವದ ಕೆಂಗೇರಿಮಡ್ಡಿ ಸಾಯಿ ಮಂದಿರ ಹಿಂಭಾಗ ಕೆರೆ ಹತ್ತಿರದ ಸುಮಾರು 3 ಎಕರೆ 26 ಗುಂಟೆ ಪುರಸಭೆ ಖಾಲಿ ಜಾಗವಿದ್ದು ಅದರ ಪಕ್ಕದಲ್ಲಿರುವ ಜಮೀನನ್ನು ಅದರ ಮಾಲೀಕರು ನಿವೇಶನಗಳನ್ನು ಮಾಡಿ ಮಾರಾಟ ಮಾಡಿದ್ದಾರೆ. ಅದರ ಪಕ್ಕದಲ್ಲಿಯೇ ಇರುವ ಪುರಸಭೆ ಮಾಲೀಕತ್ವದ ಸರ್ವೇ ನಂ.29/1 ರಲ್ಲಿನ ಸುಮಾರು 3 ಎಕರೆ 26 ಗುಂಟೆ ಖಾಲಿ ಜಾಗವನ್ನು ನಮ್ಮ ಪುರಸಭೆ ಸದಸ್ಯರು, ರಾಜಕೀಯ ಮುಖಂಡರು, ಪುರಸಭೆ ಅಧಿಕಾರಿಗಳು ಸೇರಿ ಲಕ್ಷಾಂತರ ರು. ಪಡೆದುಕೊಂಡು ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ಈ ಖಾಲಿ ಜಾಗದ ಪೂರ್ವಭಾಗದಲ್ಲಿ ಈಗಾಗಲೇ ಪುರಸಭೆ ಮಾಲೀಕತ್ವದ ಜನವಸತಿ ಇದ್ದು, ಪುರಸಭೆ ಒಡೆತನದ ಜನವಸತಿ ಹಾಗೂ ಪಶ್ಚಿಮ ಭಾಗದಲ್ಲಿ ಸ್ವಂತ ಮಾಲೀಕತ್ವದ ನಿವೇಶನಗಳಿರುವ ಕಾರಣ ಇದಕ್ಕೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಕಾರಣ ತಾವು ತಕ್ಷಣ ಈ ಅಕ್ರಮ ತಡೆಯಲು ಪುರಸಭೆ ಅಧಿಕಾರಿಗಳಿಗೆ ಆ ಖಾಲಿ ಜಾಗನನ್ನು ಸರ್ವೇ ಮಾಡಿಸಿ ಗಡಿ, ಗುರುತು ಮಾಡಿ ಜಮಖಂಡಿ ನಗರಾಭಿವೃದ್ಧಿ ಪ್ರಾಧಿಕಾರದ ಯೋಜನೆ ಪ್ರಕಾರ ಪುರಸಭೆಯಿಂದ ನಿವೇಶನ ರಚಿಸಿ, ಎಲ್ಲಿಯೂ ಜಾಗ ಇಲ್ಲದ ಅರ್ಹ ಬಡವರಿಗೆ ಹಂಚುವ ಕೆಲಸ ಮಾಡಿಸಬೇಕು. ಜತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ವಹಿಸಿ, ಇಂತಹ ಅಕ್ರಮಗಳು ಮತ್ತೆ ನಡೆಯದಂತೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಪುರಸಭೆ ಸದಸ್ಯರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಈ ಅಕ್ರಮ ನಿವೇಶನ ಹಂಚಿಕೆ ತಡೆಯಲು ಜಮಖಂಡಿ ಅಸಿಸ್ಟೆಂಟ್‌ ಕಮಿಷನರ್‌ ಶ್ವೇತಾ ಬೀಡಿಕರಗೆ ಸೂಕ್ತ ಕ್ರಮ ಕೈಗೊಳ್ಳಲು ಆದೇಶ ಹೊರಡಿಸಲಾಗಿದೆ ಎಂದರು.