ಚಾಮರಾಜನಗರದಲ್ಲಿ ಅಕ್ರಮವಾಗಿ ಬಸವಣ್ಣ ಪುತ್ಥಳಿ ನಿರ್ಮಾಣದ ಆರೋಪ

| Published : Sep 01 2024, 02:00 AM IST

ಚಾಮರಾಜನಗರದಲ್ಲಿ ಅಕ್ರಮವಾಗಿ ಬಸವಣ್ಣ ಪುತ್ಥಳಿ ನಿರ್ಮಾಣದ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಚಾಮರಾಜನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ನಿಯಮ ಉಲ್ಲಂಘಿಸಿ ಮತ್ತು ಕಾನೂನುಬಾಹಿರವಾಗಿ ಸ್ಥಾಪನೆಯಾಗುತ್ತಿರುವ ಶ್ರೀ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಗರದ ಜಿಲ್ಲಾಡಳಿತ ಭವನ ಆವರಣದಲ್ಲಿ ನಿಯಮ ಉಲ್ಲಂಘಿಸಿ ಮತ್ತು ಕಾನೂನುಬಾಹಿರವಾಗಿ ಸ್ಥಾಪನೆಯಾಗುತ್ತಿರುವ ಶ್ರೀ ಬಸವಣ್ಣನವರ ಪುತ್ಥಳಿ ನಿರ್ಮಾಣ ಕಾಮಗಾರಿಗೆ ಡಾ.ಬಿ.ಆರ್.ಅಂಬೇಡ್ಕರ್ ಪೀಪಲ್ಸ್ ಪಾರ್ಟಿಯ ಯುವ ಘಟಕ ಆಕ್ಷೇಪ ವ್ಯಕ್ತಪಡಿಸಿದೆ.

ನಿರ್ಮಾಣ ಕಾಮಗಾರಿ ಸ್ಥಳಾಂತರಿಸಿ ಮತ್ತು ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವ ಘಟಕದ ರಾಜಾಧ್ಯಕ್ಷ ಸಿ.ಎಂ.ಕೃಷ್ಣ ಆಗ್ರಹಿಸಿದರು.

ನಗರರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಷಯಕ್ಕೆ ಸಂಬಂಧಿಸಿ ಕಾಮಗಾರಿ ಸ್ಥಗಿತಗೊಳಿಸುವ ವಿಷಯದಲ್ಲಿ ಜಿಲ್ಲೆಯ ಜನಪ್ರತಿಗಳು ಜಾಣ ನಡೆ ಪ್ರದರ್ಶಿಸುತ್ತಿದ್ದಾರೆ. ಈ ವಿಚಾರದಲ್ಲಿ ಜಿಲ್ಲಾಧಿಕಾರಿ, ಸರ್ಕಾರದ ಮುಖ್ಯ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಚಾಮರಾಜನಗರ ಜಿಲ್ಲೆಯ ಜನಪ್ರತಿನಿಧಿಗಳು ತಮ್ಮ ಅಧಿಕೃತ ನಿಲುವನ್ನು ಕಾನೂನಾತ್ಮಕವಾಗಿ ಮತ್ತು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ನಿಯಮಾನುಸಾರವಾಗಿ ಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡದೆ ಬಸವೇಶ್ವರರಿಗೆ ಅಪಮಾನ ಮಾಡಿದ್ದಾರೆ. ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಈ ವಿಚಾರದಲ್ಲಿ ಜಿಲ್ಲೆಯ ಸಂಸದ, ಶಾಸಕರು ಮೌನವಾಗಿರುವುದು ಸರಿಯಲ್ಲ ಎಂದು ಹೇಳಿದರು.

ಸರ್ಕಾರಿ ಹಾಗೂ ಸಾರ್ವಜನಿಕ ಇತರೆ ಯಾವುದೇ ಸ್ಥಳಗಳಲ್ಲಿ ಸಂತರು, ಶರಣರು, ಗಣ್ಯ ವ್ಯಕ್ತಿಗಳ ಪ್ರತಿಮೆ ನಿರ್ಮಾಣ ಮಾಡುವುದಕ್ಕೆ ಸಂಬಂಧಿಸಿದಂತೆ ದೇಶದ ಸುಪ್ರೀಂ ಕೋರ್ಟ್‌ ಆದೇಶ ಮತ್ತು ಕರ್ನಾಟಕ ಸರ್ಕಾರದ ಸುತ್ತೋಲೆ/ನಿರ್ದೇಶನ ಹಾಗೂ ೧೯೯೯ ಕಾಯ್ದೆಯನ್ನು ಜಿಲ್ಲಾಡಳಿತವೇ ಸ್ಪಷ್ಟವಾಗಿ ಉಲ್ಲಂಘಿಸಿರುವುದು ಅಕ್ಷಮ್ಯ ಅಪರಾಧವಾಗಿದೆ. ಪುತ್ಥಳಿಯ ಸ್ಥಾಪನೆಗೆ ಮುನ್ನ ಅನುಸರಿಸಬೇಕಾದ ಸರ್ಕಾರದ ಎಲ್ಲ ನಿಯಮಗಳನ್ನು ಪಾಲಿಸದಿರುವುದು ಹಾಗೂ ಇದಕ್ಕೆ ಸಂಬಂಧಿಸಿದಂತೆ ನಾವು ಈಗಾಗಲೇ ತಕರಾರು ಮನವಿ ಪತ್ರವನ್ನು ಸಲ್ಲಿಸಿ, ಕೂಡಲೇ ಸೂಕ್ತ ಕ್ರಮ ವಹಿಸುವಂತೆ ಕೋರಿದ್ದು ಇದುವರೆವಿಗೂ ಜಿಲ್ಲಾಡಳಿತದ ತಟಸ್ಥ ನಿಲುವು ಗೊಂದಲ ಮತ್ತು ಷಡ್ಯಂತ್ರದಿಂದ ಕೂಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ದೂರಿದರು.

ಪುತ್ಥಳಿ ನಿರ್ಮಾಣ ಕಾರ್ಯವು ಜಿಲ್ಲಾಡಳಿತ ಭವನದ ಆವರಣದಲ್ಲಿ ನಡೆಯುತ್ತಿದ್ದರೂ ಕಂಡೂ ಕಾಣದಂತೆ ಕೇಳಿಯೂ ಕೇಳದಂತೆ ವರ್ತಿಸುತ್ತಿರುವುದು ಜನಪ್ರತಿನಿಧಿಗಳ ಹುದ್ದೆಗೆ ಅಗೌರವ, ಅಪಮಾನವೆಸಗಿರುವುದು ಶೋಚನೀಯ ಹಾಗೂ ದುರಂತ. ಆದ್ದರಿಂದ ಜಿಲ್ಲೆಯ ನಾಗರಿಕರ ಪರವಾಗಿ ಸರ್ಕಾರಕ್ಕೆ ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ತಮ್ಮ ಸ್ಪಷ್ಟ ನಿಲುವನ್ನು ಅಭಿವ್ಯಕ್ತಪಡಿಸಿ, ಸದರಿ ಪ್ರಕರಣವನ್ನು ಸುಖಾಂತ್ಯಗೊಳಿಸಬೇಕೆಂದು ಮನವಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಒಂದು ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಚಾಮರಾಜನಗರ ಜಿಲ್ಲಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿದರೆ ಮುಖ್ಯ ಕಾರ್ಯದರ್ಶಿ ಮತ್ತು ಚಾಮರಾಜನಗರ ಜಿಲ್ಲಾಧಿಕಾರಿಗಳ ವಿರುದ್ಧ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ ಮಾಡಿದ ಆರೋಪದಡಿಯಲ್ಲಿ ಉಚ್ಚ ನ್ಯಾಯಾಲಯದಲ್ಲಿ ನ್ಯಾಯಾಂಗ ನಿಂದನೆ ಸಲ್ಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಹೊರಗಡೆ ಜಿಲ್ಲೆಯ ಸಿಎಂ ಕೃಷ್ಣ ಬಂದು ಗೊಂದಲ ಸೃಷ್ಟಿ ಮಾಡುತ್ತಾರೆ ಎಂದು ಹೇಳಿಕೆ ನೀಡಿರುವ ಅರಕಲವಾಡಿ ನಾಗೇಂದ್ರ ಕಾನೂನು ತಿಳಿದು ಮಾತನಾಡಲಿ. ಅದನ್ನು ಬಿಟ್ಟು ರಾಜಕೀಯ ಲಾಭಕ್ಕಾಗಿ ನಮ್ಮ ವಿರುದ್ಧ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು.

ಕದಂಬ ಅಂಬರೀಶ್, ಸೋಮುಸುಂದರ್, ನಟರಾಜ್, ನಾಗೇಶ್, ಮಹದೇವಸ್ವಾಮಿ, ನಿಂಗರಾಜು, ಪ್ರಸಾದ್ ಇದ್ದರು,