ಯುಜಿಸಿ ನೆಟ್‌ ಪರೀಕ್ಷೆಯಲ್ಲೂ ಅಕ್ರಮ ಆರೋಪ: ಎಐಡಿವೈಓ ಖಂಡನೆ

| Published : Jun 24 2024, 01:38 AM IST

ಯುಜಿಸಿ ನೆಟ್‌ ಪರೀಕ್ಷೆಯಲ್ಲೂ ಅಕ್ರಮ ಆರೋಪ: ಎಐಡಿವೈಓ ಖಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ನೀಟ್, ಯುಜಿಸಿ-ನೆಟ್ ಸೇರಿದಂತೆ ಎನ್‌ಟಿಎ ನಡೆಸುವ ಹಲವಾರು ಪರೀಕ್ಷೆಗಳಲ್ಲಿ ಹೀಗೆ ಲೋಪಗಳು ಆಗುತ್ತಿರುವುದನ್ನು ಎಐಡಿವೈಓ

ಕನ್ನಡಪ್ರಭ ವಾರ್ತೆ ಧಾರವಾಡ

ಇದೇ ಜೂನ್ 18ರಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು (ಎನ್‌ಟಿಎ) ನಡೆಸಿದ ಯುಜಿಸಿ-ನೆಟ್ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ದೂರುಗಳು ಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಲಾಗಿದೆ. ನೀಟ್, ಯುಜಿಸಿ-ನೆಟ್ ಸೇರಿದಂತೆ ಎನ್‌ಟಿಎ ನಡೆಸುವ ಹಲವಾರು ಪರೀಕ್ಷೆಗಳಲ್ಲಿ ಹೀಗೆ ಲೋಪಗಳು ಆಗುತ್ತಿರುವುದನ್ನು ಎಐಡಿವೈಓ ಖಂಡಿಸಿದೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯು ಲಕ್ಷಾಂತರ ಪರೀಕ್ಷಾರ್ಥಿಗಳ ಶ್ರಮವನ್ನು ಹಾಳುಮಾಡಿದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ, ನಿದರ್ಶನೀಯ ಶಿಕ್ಷೆ ವಿಧಿಸಲು ಆಗ್ರಹಿಸಿದೆ. ಯುಜಿಸಿ-ನೆಟ್ ಪರೀಕ್ಷೆಯನ್ನು ದೇಶಾದ್ಯಂತ 317 ನಗರಗಳಲ್ಲಿ 1205 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ವರ್ಷದಿಂದ ಪಿಎಚ್‌ಡಿ ಪ್ರವೇಶಕ್ಕೂ ನೆಟ್ ಪರೀಕ್ಷೆ ಪಾಸಾಗುವುದು ಕಡ್ಡಾಯ ಮಾಡಿದ್ದರಿಂದಾಗಿ ಪಿಎಚ್‌ಡಿ ಪ್ರವೇಶಕ್ಕಾಗಿ ಕಾದು ಕುಳಿತ ವಿದ್ಯಾರ್ಥಿಗಳು ಹಾಗೂ ಮಹಾವಿದ್ಯಾಲಯಗಳ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹತೆ ಪಡೆಯುವುದಕ್ಕಾಗಿ ಸ್ನಾತಕೋತ್ತರ ಪದವಿ ಮುಗಿಸಿದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ಹಾಜರಾಗಿದ್ದರು. ಆದರೆ ಎಲ್ಲ ನೇಮಕಾತಿಗಳಲ್ಲೂ ನಡೆಯುವ ಭ್ರಷ್ಟಾಚಾರದ ಭೂತ ಈಗ ಈ ಪರೀಕ್ಷೆಗೂ ಬಡಿದುಕೊಂಡಿದೆ.

ಇತ್ತೀಚಿನ ದಿನಗಳಲ್ಲಿ ನೇಮಕಾತಿಗಾಗಲಿ, ಉನ್ನತ ವ್ಯಾಸಂಗಕ್ಕೆ ಆಗಲಿ ಪ್ರವೇಶ ಪರೀಕ್ಷೆಗಳು ನಡೆದಾಗ ಅವುಗಳಲ್ಲಿ ಅಕ್ರಮ ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಈ ಅಕ್ರಮಗಳು ದುಡ್ಡಿದ್ದವರಿಗೆ ಉದ್ಯೋಗ, ದುಡ್ಡಿದ್ದವರಿಗೆ ಶಿಕ್ಷಣ ಎನ್ನುವ ವಾತಾವರಣವನ್ನು ಸೃಷ್ಟಿಸಿವೆ, ಜನಸಾಮಾನ್ಯರ ಬದುಕನ್ನು ಬೀದಿಗೆ ತಳ್ಳಿವೆ. ಆದ್ದರಿಂದ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆ ವಿಧಿಸಬೇಕು ಎಂದು ಸಂಘಟನೆಯ ಪರವಾಗಿ ಜಿಲ್ಲಾ ಕಾರ್ಯದರ್ಶಿ ರಣಜಿತ್ ದುಪದ್ ಆಗ್ರಹಿಸಿದ್ದಾರೆ.