ಮಳಗಿಯನ್ನು ಪಾಳಾ ಕ್ಷೇತ್ರಕ್ಕೆ ಸೇರಿಸದೆ, ಮೊದಲು ಇದ್ದ ಹಾಗೆ ಮಳಗಿಯನ್ನು ಚುನಾವಣಾ ಕ್ಷೇತ್ರವನ್ನಾಗಿ ಮಾಡಬೇಕು. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಮುಂಡಗೋಡ: ಮಳಗಿ ಭಾಗವನ್ನು ಪಾಳಾ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಿದಕ್ಕೆ ಆಕ್ಷೇಪಿಸಿ ಮಳಗಿ ಭಾಗದ ಸಾರ್ವಜನಿಕರು ಸೋಮವಾರ ತಹಸೀಲ್ದಾರರ ಮೂಲಕ ಜಿಲ್ಲಾಧಿಕಾರಿ ಹಾಗೂ ಚುನಾವಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಅಧಿಕೃತ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಡಿಯಲ್ಲಿ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಹಾಗೂ ವಾರ್ಡಗಳ ಮರು ವಿಂಗಡಣೆ ಮಾಡಿದ ಹಿನ್ನೆಲೆ ಮಳಗಿ ಗ್ರಾಪಂಅನ್ನು ಪಾಳಾ ತಾಲೂಕು ಪಂಚಾಯಿತಿ ಕ್ಷೇತ್ರಕ್ಕೆ ಸೇರಿಸಿದ ಕ್ರಮ ಲೋಪದಿಂದ ಕೂಡಿದೆ.

ಮಳಗಿ, ಮುಂಡಗೋಡ ತಾಲೂಕಿನ ಕೊನೆಯ ಗ್ರಾಮ ಪಂಚಾಯಿತಿ ಆಗಿದ್ದು, ಸುಮಾರು ೧೦,೦೦೦ ಜನಸಂಖ್ಯೆಯುಳ್ಳ ೧೭ ಸದಸ್ಯರನ್ನು ಹೊಂದಿದ ದೊಡ್ಡ ಪಂಚಾಯಿತಿಯಾಗಿದೆ. ಆದರೆ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮರುವಿಂಗಡಣೆ ಮಾಡಿ ತಾಲೂಕು ಪಂಚಾಯಿತಿ, ಚುನಾವಣಾ ಕ್ಷೇತ್ರದಿಂದ ಮಳಗಿ ಕ್ಷೇತ್ರವನ್ನು ತೆಗೆದು ಪಾಳಾ ಕ್ಷೇತ್ರಕ್ಕೆ ಸೇರಿಸಲಾಗಿದೆ. ಹೀಗಾಗಿ ಕ್ಷೇತ್ರಗಳ ಹಾಗೂ ವಾರ್ಡಗಳ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯಲ್ಲಿ ಮಳಗಿ ಪಂಚಾಯಿತಿಗೆ ಅನ್ಯಾಯವಾಗಿದೆ.

ಮಳಗಿಯನ್ನು ಪಾಳಾ ಕ್ಷೇತ್ರಕ್ಕೆ ಸೇರಿಸದೆ, ಮೊದಲು ಇದ್ದ ಹಾಗೆ ಮಳಗಿಯನ್ನು ಚುನಾವಣಾ ಕ್ಷೇತ್ರವನ್ನಾಗಿ ಮಾಡಬೇಕು. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.

ಈ ಸಂದರ್ಭದಲ್ಲಿ ಚೇತನ್ ನಾಯ್ಕ, ಗುಲ್ಜಾರ ಸಂಗೂರ, ಆನಂದ ಪೂಜಾರ, ದೇವಿಂದ್ರ ಇಡಗೋಡ, ಜಗದೀಶ ನಾಯ್ಕ, ಲಕ್ಷ್ಮಣ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.