ನೌಕಾನೆಲೆ ಸ್ಥಾಪನೆಯ ಸಂದರ್ಭದಲ್ಲಿ ಸ್ಥಳೀಯರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸದೆ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ.

ಕಾರವಾರ: ಸೀಬರ್ಡ್ ನೌಕಾನೆಲೆ ಯೋಜನೆಗಾಗಿ ಭೂಮಿ ಕಳೆದುಕೊಂಡ ಸ್ಥಳೀಯರು ಹಾಗೂ ನಿರಾಶ್ರಿತರಿಗೆ ಉದ್ಯೋಗಾವಕಾಶಗಳಲ್ಲಿ ಅನ್ಯಾಯವಾಗುತ್ತಿದೆ ಎಂದು ಶ್ರೀ ಹಟ್ಟಿಕೇಶ್ವರ ಸ್ಥಳೀಯ ಹಾಗೂ ಸೀಬರ್ಡ್ ನಿರಾಶ್ರಿತರ ಕೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಸುನೀಲ್ ಆರೋಪಿಸಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೌಕಾನೆಲೆ ಸ್ಥಾಪನೆಯ ಸಂದರ್ಭದಲ್ಲಿ ಸ್ಥಳೀಯರಿಗೆ ನೀಡಲಾಗಿದ್ದ ಭರವಸೆಗಳನ್ನು ಈಡೇರಿಸದೆ ಯುವಕರ ಭವಿಷ್ಯದೊಂದಿಗೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆರೋಪಿಸಿದರು.ಐಎನ್‌ಎಸ್ ವಜ್ರಕೋಶದ ಎನ್‌ಎಡಿ ವಿಭಾಗದಲ್ಲಿ ಗ್ರೂಪ್- ಡಿ 256 ಹುದ್ದೆಗಳ ನೇಮಕಾತಿಯಲ್ಲಿ ಜಾರ್ಖಂಡ್ ರಾಜ್ಯದ ಒಂದೇ ಪಿನ್‌ಕೋಡ್‌ನಿಂದ 25 ಮಂದಿ ಆಯ್ಕೆಯಾಗಿದ್ದು, ಕರ್ನಾಟಕದ ಒಬ್ಬ ಅಭ್ಯರ್ಥಿಗೂ ಅವಕಾಶ ದೊರೆತಿಲ್ಲ. ನೌಕಾನೆಲೆಯ ಫೈರ್‌ಮನ್ ಸೇರಿದಂತೆ ವಿವಿಧ ಸಿವಿಲಿಯನ್ ಹುದ್ದೆಗಳ ನೇಮಕಾತಿಯಲ್ಲೂ ಸ್ಥಳೀಯರನ್ನು ಕಡೆಗಣಿಸಿ ಹೊರರಾಜ್ಯದ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗುತ್ತಿದೆ ಎಂದು ಆರೋಪಿಸಿದರು.

15 ವರ್ಷಗಳಿಂದ ಸಂಘಟಿತ ಹೋರಾಟ ನಡೆಸುತ್ತಿದ್ದರೂ ಸ್ಥಳೀಯರಿಗೆ ಗ್ರೂಪ್- ಡಿ ಹುದ್ದೆಗಳಲ್ಲಿ ಶೇ. 70 ಹಾಗೂ ಗ್ರೂಪ್- ಸಿ ಹುದ್ದೆಗಳಲ್ಲಿ ಶೇ. 30ರಷ್ಟು ಅವಕಾಶ ಕಲ್ಪಿಸುವ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿಲ್ಲ. ನೌಕಾನೆಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ ₹20,000ರಿಂದ ₹22,000 ನೀಡುವ ಬದಲು ಕೇವಲ ₹10,000ರಿಂದ ₹12,000 ನೀಡಲಾಗುತ್ತಿದೆ. ಕಳೆದ ಮೂರು ತಿಂಗಳಿಂದ ವೇತನವನ್ನೂ ಪಾವತಿಸಿಲ್ಲ. ಕೆಲಸದ ಸ್ಥಳದಲ್ಲಿ ಹೆಲ್ಮೆಟ್, ಬೂಟ್ ಸೇರಿದಂತೆ ಅಗತ್ಯ ಸುರಕ್ಷತಾ ಸಾಧನಗಳನ್ನೂ ನೀಡದೇ ರಾತ್ರಿ ವೇಳೆ ಅಪಾಯಕಾರಿ ಪರಿಸ್ಥಿತಿಯಲ್ಲಿ ಕೆಲಸ ಮಾಡಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಲ್ಲದೆ, ಅವಧಿ ಮುಗಿದ ಮದ್ದುಗುಂಡುಗಳನ್ನು ನಿಯಮಾನುಸಾರ ಸಮುದ್ರದ ಆಳದಲ್ಲಿ ಸಿಡಿಸಬೇಕಿದ್ದರೂ ವಜ್ರಕೋಶದ ಸಮೀಪವೇ ಬ್ಲಾಸ್ಟಿಂಗ್ ನಡೆಸಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ನಿವಾಸಿಗಳ ಮನೆಗಳ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿವೆ ಎಂದು ಸಂಘದ ಮುಖಂಡರು ಆರೋಪಿಸಿದರು.ಅಂಕೋಲಾ ತಾಲೂಕಿನ ಬಡಗೇರಿ ಗ್ರಾಮದ ಸುತ್ತಮುತ್ತಲಿನ ಸುಮಾರು 3,000 ಎಕರೆ ಕೃಷಿ ಭೂಮಿ ನೌಕಾನೆಲೆ ವ್ಯಾಪ್ತಿಯಿಂದ ಸುತ್ತುವರಿದಿದ್ದು, ರೈತರಿಗೆ ತಮ್ಮ ಜಮೀನುಗಳಿಗೆ ತೆರಳಲು ತೊಂದರೆ ಉಂಟಾಗುತ್ತಿದೆ. ಅಲ್ಲದೆ, ನೌಕಾನೆಲೆಯ ಕೊಳಚೆ ನೀರನ್ನು ಸ್ಥಳೀಯ ಹಳ್ಳಕ್ಕೆ ಹರಿಸಲಾಗುತ್ತಿದ್ದು, ಇದರಿಂದ ಪರಿಸರ ಹಾನಿಯಾಗುತ್ತಿದೆ ಎಂದು ಆರೋಪಿಸಿದರು.ಸ್ಥಳೀಯ ಜನಪ್ರತಿನಿಧಿಗಳು, ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ತಕ್ಷಣ ಸಭೆ ಕರೆದು ಸೀಬರ್ಡ್ ನಿರಾಶ್ರಿತರಿಗೆ ಉದ್ಯೋಗಾವಕಾಶ ಕಲ್ಪಿಸುವ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಬೇಡಿಕೆ ಈಡೇರದಿದ್ದರೆ ಮುಂದಿನ ದಿನಗಳಲ್ಲಿ ನೌಕಾನೆಲೆಯ ವಿಮಾನ ನಿಲ್ದಾಣ ನಿರ್ಮಾಣ ಕಾಮಗಾರಿ ಹಾಗೂ ಮೂಲ ಸೌಕರ್ಯ ಕಾಮಗಾರಿಗಳನ್ನು ತಡೆದು ಉಗ್ರ ಹೋರಾಟ ನಡೆಸಲಾಗುವುದು ಎಂದು ಸಂಘ ಎಚ್ಚರಿಕೆ ನೀಡಿದೆ.

ಸಂಘದ ಪ್ರಮುಖರಾದ ದಿಗಂಬರ ಆರ್. ಗೌಡ, ಸುಬ್ರಹ್ಮಣ್ಯ ಗೌಡ, ಪ್ರಶಾಂತ ವಾಮನ ನಾಯ್ಕ ಹಾಗೂ ಗುರು ಗೌಡ ಇದ್ದರು.