ಮ್ಯಾಚ್‌ ಫಿಕ್ಸಿಂಗ್ ಆರೋಪ: ಮಂಡ್ಯ ವಿವಿ, ಪಿಇಎಸ್ ಎನ್‌ಸಿಸಿ ತಂಡದವರಿಂದ ಪ್ರತಿಭಟನೆ

| Published : Jan 27 2025, 12:49 AM IST

ಮ್ಯಾಚ್‌ ಫಿಕ್ಸಿಂಗ್ ಆರೋಪ: ಮಂಡ್ಯ ವಿವಿ, ಪಿಇಎಸ್ ಎನ್‌ಸಿಸಿ ತಂಡದವರಿಂದ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಪಥಸಂಚಲನದ ಬಹುಮಾನ ಘೋಷಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್ ನಡೆದಿರುವುದಾಗಿ ಆರೋಪಿಸಿ ಮಂಡ್ಯ ವಿಶ್ವವಿದ್ಯಾಲಯ ಮತ್ತು ಪಿಇಎಸ್ ಎನ್‌ಸಿಸಿ ತಂಡ ವಿದ್ಯಾರ್ಥಿಗಳು ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲೇ ಭಾನುವಾರ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಗಣರಾಜ್ಯೋತ್ಸವ ಪ್ರಯುಕ್ತ ನಡೆದ ಪಥಸಂಚಲನದ ಬಹುಮಾನ ಘೋಷಣೆಯಲ್ಲಿ ಮ್ಯಾಚ್‌ಫಿಕ್ಸಿಂಗ್ ನಡೆದಿರುವುದಾಗಿ ಆರೋಪಿಸಿ ಮಂಡ್ಯ ವಿಶ್ವವಿದ್ಯಾಲಯ ಮತ್ತು ಪಿಇಎಸ್ ಎನ್‌ಸಿಸಿ ತಂಡ ವಿದ್ಯಾರ್ಥಿಗಳು ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲೇ ಭಾನುವಾರ ಪ್ರತಿಭಟನೆ ನಡೆಸಿದರು.

ಪಥಸಂಚಲನ ನಡೆಸಿದ ಎನ್‌ಸಿಸಿಯ ಬಾಲಕ ಮತ್ತು ಬಾಲಕಿಯರ ವಿಭಾಗದ ಎನ್‌ಸಿಸಿ ತಂಡಗಳಿಗೆ ಪ್ರಥಮ ಬಹುಮಾನ ಘೋಷಿಸಲಾಗಿತ್ತು. ಪಿಇಎಸ್ ಕಾಲೇಜಿನ ಬಾಲಕರ ಎನ್‌ಸಿಸಿ ತಂಡ ಹಾಗೂ ಬಾಲಕಿಯರ ವಿಭಾಗದಲ್ಲಿ ಮಂಡ್ಯ ವಿಶ್ವವಿದ್ಯಾಲಯ ಎನ್‌ಸಿಸಿ ತಂಡಕ್ಕೆ ದ್ವಿತೀಯ ಬಹುಮಾನ ಘೋಷಿಸಲಾಗಿತ್ತು.

ಈ ತೀರ್ಪನ್ನು ವಿರೋಧಿಸಿ ಮಂಡ್ಯ ವಿಶ್ವವಿದ್ಯಾಲಯ ಹಾಗೂ ಪಿಇಎಸ್ ಎನ್‌ಸಿಸಿ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲೇ ಪ್ರತಿಭಟನೆ ನಡೆಸಿದರು. ಪೊಲೀಸರು ಸಮಾಧಾನಪಡಿಸಲು ಪ್ರಯತ್ನಿಸಿದರೂ ವಿದ್ಯಾರ್ಥಿಗಳು ನ್ಯಾಯಕ್ಕಾಗಿ ಬೇಡಿಕೆ ಇಟ್ಟು ಪ್ರತಿಭಟನೆ ಮುಂದುವರೆಸಿದರು.

ಇದನ್ನು ನೋಡಿದ ಸಚಿವ ಎನ್.ಚಲುವರಾಯಸ್ವಾಮಿ ಅವರು ವೇದಿಕೆಯಿಂದ ಕೆಳಗಿಳಿದು ವಿದ್ಯಾರ್ಥಿಗಳ ಬಳಿ ಬಂದರು. ಆಗ ವಿದ್ಯಾರ್ಥಿಗಳು ಮಾತನಾಡಿ, ಬಾಲಕ-ಬಾಲಕಿಯರ ಎನ್‌ಸಿಸಿ ವಿಭಾಗದ ಎರಡೂ ಪ್ರಥಮ ಬಹುಮಾನಗಳು ಅನಿಕೇತನ ಪದವಿ ಪೂರ್ವ ಕಾಲೇಜಿಗೆ ಘೋಷಣೆಯಾಗಿದೆ. ಇದರ ಹಿಂದೆ ಮ್ಯಾಚ್‌ಫಿಕ್ಸಿಂಗ್ ಇದೆ. ನಾವೂ ಉತ್ತಮ ಪ್ರದರ್ಶನ ನೀಡಿದ್ದರೂ ಪ್ರಥಮ ಬಹುಮಾನ ನೀಡಿಲ್ಲ. ತೀರ್ಪುಗಾರರು ತಾರತಮ್ಯವೆಸಗಿದ್ದಾರೆ ಎಂದು ದೂರಿದರು.

ಇದಕ್ಕೆ ಉತ್ತರಿಸಿದ ಸಚಿವರು, ಹಾಗೇನೂ ಆಗಿರೋಲ್ಲ. ಏನಾದರೂ ತಪ್ಪಾಗಿದ್ದರೆ ಸರಿಪಡಿಸೋಣ. ಈಗ ಸಮಾಧಾನದಿಂದ ಇರುವಂತೆ ತಿಳಿಸಿದಾಗ, ನಾವು ಪ್ರದರ್ಶನ ನೀಡಿದ್ದನ್ನು ವೀಡಿಯೋ ಕ್ಯಾಮೆರಾಗಳು ಸೆರೆಹಿಡಿದಿವೆ. ಅದನ್ನು ಇನ್ನೊಮ್ಮೆ ನೋಡಲಿ. ಯಾರು ಉತ್ತಮವಾಗಿ ಪ್ರದರ್ಶನ ನೀಡಿರುವರೋ ಅವರಿಗೆ ಪ್ರಥಮ ಬಹುಮಾನ ಕೊಡಲಿ ಎಂದು ಒತ್ತಾಯಿಸಿದರು.

ಕೊನೆಗೆ ಸಚಿವರು ಮುಂದೆ ಈ ರೀತಿಯ ತಪ್ಪುಗಳಾಗದಂತೆ ಸರಿಪಡಿಸೋಣ. ತಾಳ್ಮೆಯಿಂದ ಇರುವಂತೆ ಹೇಳಿ ಅಲ್ಲಿಂದ ಹೊರಟರು. ಸ್ಥಳದಲ್ಲಿದ್ದ ಪೊಲೀಸರು ನೀವು ಎನ್‌ಸಿಸಿಯವರು. ಈಗೆಲ್ಲಾ ಪ್ರತಿಭಟನೆ ಮಾಡುವುದು ತಪ್ಪು. ಇನ್ನೊಮ್ಮೆ ಈ ರೀತಿಯ ತಪ್ಪುಗಳು ಮರುಕಳಿಸಿದರೆ ನಿಮ್ಮ ವಿರುದ್ಧ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.