ಸಾರಾಂಶ
ದ.ಕ. ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನ್ನಡಪ್ರಭ ವಾರ್ತೆ ಮಂಗಳೂರು ಕಳೆದ ಎರಡು ವರ್ಷಗಳಿಂದ ದ.ಕ. ಜಿಲ್ಲೆಗೆ ಯಾವುದೇ ಹೊಸ ಯೋಜನೆ ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ. ಮಾತ್ರವಲ್ಲ ತುರ್ತು ಕಾಮಗಾರಿಗಳಿಗೂ ಅನುದಾನ ನೀಡದೆ ಕರಾವಳಿ ಜಿಲ್ಲೆಯ ಬಗ್ಗೆ ಸರ್ಕಾರ ತಾರತಮ್ಯ ಧೋರಣೆ ಅನುಸರಿಸಿದೆ ಎಂದು ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬಿಜೆಪಿ ಶಾಸಕರು ಆರೋಪಿಸಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಲು ಮುಂದಾಗುತ್ತಿದ್ದಂತೆ ಅದಕ್ಕೂ ಕಾಯದೆ ಬಿಜೆಪಿ ಶಾಸಕರು ಸಭಾತ್ಯಾಗ ಮಾಡಿದ ವಿದ್ಯಮಾನ ನಡೆಯಿತು.ಮಂಗಳೂರಿನ ಜಿಲ್ಲಾ ಪಂಚಾಯ್ತಿ ನೇತ್ರಾವತಿ ಸಭಾಭವನದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧ್ಯಕ್ಷತೆಯಲ್ಲಿ ಸೋಮವಾರ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಪ್ರಸ್ತಾಪಿಸಿದರು.
ನಗರ ಮಾತ್ರವಲ್ಲದೆ, ಗ್ರಾಮಾಂತರ ಪ್ರದೇಶದ ರಸ್ತೆಗಳಲ್ಲಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳ ಗುಂಡಿ ಮುಚ್ಚಲು ಅನುದಾನ ನೀಡಿಲ್ಲ. ಕರಾವಳಿ ಜಿಲ್ಲೆಗೆ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಯೋಜನೆಯನ್ನು ಕಳೆದರಡು ವರ್ಷಗಳಿಂದ ನೀಡಲು ರಾಜ್ಯ ಸರ್ಕಾರದಿಂದ ಸಾಧ್ಯವಾಗಿಲ್ಲ. ನಮಗೆ ನ್ಯಾಯ ಕೊಡಬೇಕು ಎಂದು ದೂರಿದರು.ಈ ಬಗ್ಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉತ್ತರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದಾಗ ಮತ್ತೆ ಶಾಸಕರು ಆರೋಪ ಮುಂದುವರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಧ್ಯ ಪ್ರವೇಶಿಸಿ ಉತ್ತರ ನೀಡಲು ಅವಕಾಶ ನೀಡಿ ಎಂದಾಗ, ನಾವು ಪ್ರಶ್ನಿಸುತ್ತಿರುವುದು ಉಸ್ತುವಾರಿ ಸಚಿವರನ್ನು ಎಂದು ಶಾಸಕರು ಮಾತು ಮುಂದುವರಿಸಿದರು.ಆಗ ಶಾಸಕ ವೇದವ್ಯಾಸ್ ಕಾಮತ್ ಮಾತನಾಡಿ, ಕಳೆದ ಅವಧಿಯಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯಲ್ಲಿ 125 ಕೋಟಿ ರು. ಮಂಗಳೂರಿಗೆ ನೀಡಲಾಗಿತ್ತು. 45 ಕೋಟಿ ರು. ಕಾಮಗಾರಿ ಆಗಿದ್ದು, ಉಳಿದ ಕಾಮಗಾರಿ ಕೈಗೆತ್ತಿಕೊಳ್ಳದೆ ಅರ್ಧಕ್ಕೆ ನಿಂತಿದೆ. ಸರ್ಕಾರದಿಂದ ಈ ಕಾಮಗಾರಿ ಮುಂದುವರಿಸದಂತೆ ಆದೇಶ ಬಂದ ಕಾರಣ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿದ್ದಾರೆ. ಕೆಯುಎಫ್‌ಡಿಸಿಯಡಿ ಜಲಸಿರಿ ಕಾಮಗಾರಿಯಡಿ 72 ಕೋಟಿ ರು. ರೆಸ್ಟೋರೇಶನ್ ಕಾಮಗಾರಿಯ ಹಣವನ್ನು ಬೇರೆ ಕಾಮಗಾರಿಗೆ ವರ್ಗಾವಣೆ ಮಾಡಲಾಗಿದೆ. ಅನುದಾನ ಬದಲಾವಣೆ ಮಾಡುವಾಗ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸುವ ಕಾರ್ಯವೂ ಮಾಡಿಲ್ಲ. ವಿವಿಧ ನಿಗಮಗಳಿಗೆ ಅನುದಾನವೇ ನೀಡಿಲ್ಲ. ಜಿಲ್ಲೆಯ 31 ಕೋಟಿ ರು. ವಿವಿಧ ಸಮುದಾಯ ಭವನಗಳ ಕಾಮಗಾರಿ ತಡೆಹಿಡಿಯಲಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಶಾಸಕರು ತಮ್ಮ ಆರೋಪ ಮುಂದುವರಿಸಿದಾಗ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮತ್ತೆ ಎದ್ದುನಿಂತು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಈ ಸಂದರ್ಭ ಕೆಲವು ನಿಮಿಷಗಳ ಕಾಲ ಸಭೆಯಲ್ಲಿ ಪರಸ್ಪರ ವಾಗ್ವಾದ ನಡೆದು ವೇದಿಕೆಯಲ್ಲಿದ್ದ ಸಂಸದ ಕ್ಯಾ. ಬ್ರಜೇಶ್ ಚೌಟ ಸೇರಿದಂತೆ ಬಿಜೆಪಿಯ ಶಾಸಕರು, ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಕೂಡ ಸಭೆಯಿಂದ ಹೊರನಡೆದರು.
ಅನುದಾನದ ವಿವರ ನೀಡಿದ ಸಚಿವರು:ಬಿಜೆಪಿ ಶಾಸಕರ ನಡೆಯಿಂದ ಅಸಮಾಧಾನಗೊಂಡ ಉಸ್ತುವಾರಿ ಸಚಿವರು ಸಭೆಯಲ್ಲಿ ಪ್ರತಿಕ್ರಿಯಿಸುತ್ತಾ, ಅಧಿಕಾರಿಗಳಿಂದ ಉತ್ತರ ಕೊಡಲು ಅವಕಾಶವೂ ನೀಡದೆ ಈ ರೀತಿ ಸಭಾತ್ಯಾಗ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿಯವರು ಈಗಾಗಲೇ ಮಳೆ ಹಾನಿ ಪ್ರದೇಶಗಳಿಗೆ 2,000 ಕೋಟಿ ರು. ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಅಪೆಂಡಿಕ್ಸ್‌ನಲ್ಲಿ ಪಿಡಬ್ಲ್ಯುಡಿ ರಸ್ತೆಗಳಿಗೆ 4,000 ಕೋಟಿ ರು. ಬಿಡುಗಡೆ ಮಾಡಲು ತೀರ್ಮಾನ ಆಗಿದೆ. ಒಟ್ಟು 6,000 ಕೋಟಿ ರು. ಇಡೀ ರಾಜ್ಯಾದ್ಯಂತ ಬಿಡುಗಡೆಗೆ ತೀರ್ಮಾನ ಆಗಿದೆ. ಪ್ರತಿಯೊಬ್ಬ ಶಾಸಕರ ಕ್ಷೇತ್ರಕ್ಕೆ ಪಕ್ಷಾತೀತವಾಗಿ ನೀಡುವುದಾಗಿ ಹೇಳಿದ್ದಾರೆ. ಅದನ್ನೆಲ್ಲಾ ವಿಧಾನಸಭೆಯಲ್ಲಿ ಕೇಳಿಕೊಂಡು ಬಂದು ಇಲ್ಲಿ ಪ್ರಚಾರಕ್ಕಾಗಿ ಏನೂ ಕೆಲಸ ಆಗಿಲ್ಲ ಎಂದು ಉದ್ದೇಶಪೂರ್ವಕವಾಗಿ ಮಾತನಾಡುವುದರಿಂದ ಏನು ಪ್ರಯೋಜನ ಎಂದರು.
ಬಳಿಕ ವಿಧಾನ ಪರಿಷತ್ ಸದಸ್ಯರಾದ ಭೋಜೇ ಗೌಡ, ಧನಂಜಯ ಸರ್ಜಿ, ಶಾಸಕ ಅಶೋಕ್ ಕುಮಾರ್ ರೈ ಉಪಸ್ಥಿತಿಯಲ್ಲಿ ಸಭೆ ಮುಂದುವರಿಯಿತು.ಶಾಲೆಗಳಿಗೆ ನವೀಕರಣ ಕಿರುಕುಳ:
ಜಿಲ್ಲೆಯಲ್ಲಿ ಹಳೆಯ ಶಾಲೆಗಳಿಗೆ ಮಾನ್ಯತೆ ನವೀಕರಣಕ್ಕೆ ಸಂಬಂಧಿಸಿ ಅನುದಾನ ರಹಿತ ಶಾಲೆಗಳಿಗೆ ನಾನಾ ರೀತಿಯಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇ ಗೌಡ ಆಕ್ಷೇಪಿಸಿದರು.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಸಿಇಒ ಡಾ.ಆನಂದ್, ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಜಿಲ್ಲಾ ಎಸ್ಪಿ ಯತೀಶ್ ಇದ್ದರು.