ಸಾರಾಂಶ
ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಯರವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಜಮೀನು ನೀಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟ ಫಲ ನೀಡಲಿಲ್ಲ. ಆದ್ದರಿಂದ ಸ್ವಾತಂತ್ರ್ಯ ದೊರಕಿದ ದಿನವಾದ ಆ.15 ರಂದು ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಯರವರನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿ ಸ್ವತಂತ್ರವಾಗಿ ಕೃಷಿ ಮಾಡಿಕೊಂಡು ಜೀವನ ಸಾಗಿಸಲು ಜಮೀನು ನೀಡುವಂತೆ ಒತ್ತಾಯಿಸಿ ಕಳೆದ 20 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಹೋರಾಟ ಫಲ ನೀಡಲಿಲ್ಲ. ಆದ್ದರಿಂದ ಸ್ವಾತಂತ್ರ್ಯ ದೊರಕಿದ ದಿನವಾದ ಆ.15 ರಂದು ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಯರವ ಯುವ ಒಕ್ಕೂಟದ ಗೌರವಾಧ್ಯಕ್ಷ ಪಿ.ಎಸ್.ಮುತ್ತ ತಿಳಿಸಿದ್ದಾರೆ.ಯರವರಿಗೆ ಬದುಕಲು ಭೂಮಿ ಕೊಡಿ ಎಂದು 2003 ರಿಂದ ನಿರಂತರ ಹೋರಾಟ ನಡೆಸುತ್ತಾ ಬಂದಿದ್ದರೂ ಜಿಲ್ಲಾಡಳಿತ ಯಾವುದೇ ಸ್ಪಂದನೆ ನೀಡಿಲ್ಲವೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
2015ರ ಆ.15 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಅರೆಬೆತ್ತಲೆ ಸತ್ಯಾಗ್ರಹ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿತ್ತು. ಅಂದಿನ ಜಿಲ್ಲಾಡಳಿತ ಯರವರ ಸಮೀಕ್ಷೆ ನಡೆಸಿ ಸುಮಾರು 11 ಸಾವಿರ ಕುಟುಂಬಗಳು ತೋಟದ ಲೈನ್‌ಗಳಲ್ಲಿ ನೆಲೆಸಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ವರದಿ ನೀಡಿತ್ತು. ಆದರೆ, ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ.ಬದುಕು ಕಟ್ಟಿಕೊಳ್ಳಲು ಭೂಮಿ ಕೊಡಿ ಎಂದು ಕೇಳಿದರೆ ಸೆಂಟ್ ಲೆಕ್ಕದಲ್ಲಿ ನಿವೇಶನ ನೀಡುವುದಾಗಿ ಹೇಳುತ್ತಿದ್ದಾರೆ. ಅಲ್ಲದೆ ಇದಕ್ಕಾಗಿ ಹಲವು ನಿಯಮಗಳನ್ನು ರೂಪಿಸುತ್ತಿದ್ದಾರೆ. ಇದರಿಂದ ಯರವರು ಭೂಮಿಯಿಂದ ವಂಚಿತರಾಗುತ್ತಿದ್ದಾರೆ ಮತ್ತು ಸ್ವತಂತ್ರವಾಗಿ ಬದುಕಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ನ್ಯಾಯಕ್ಕಾಗಿ ಒತ್ತಾಯಿಸಿ ಜಿಲ್ಲಾ ನ್ಯಾಯಾಲಯದ ಎದುರು ಅರೆಬೆತ್ತಲೆ ಧರಣಿ ಸತ್ಯಾಗ್ರಹ ನಡೆಸಲು ಮುಂದಾಗಿರುವುದಾಗಿ ಸ್ಪಷ್ಟಪಡಿಸಿದ್ದಾರೆ.
ಪ್ರತಿ ಯರವ ಕುಟುಂಬಕ್ಕೆ 5 ಎಕರೆ ಭೂಮಿ ಮಂಜೂರು ಮಾಡಬೇಕು, ಶಿಕ್ಷಣ ಪಡೆದಿರುವ ಯುವಕ, ಯುವತಿಯರಿಗೆ ವಿಶೇಷ ನೇಮಕಾತಿಯಡಿ ನೌಕರಿ ನೀಡಬೇಕು, ಸ್ವಾವಲಂಬನೆ ಯೋಜನೆಯಡಿ ಬ್ಯಾಂಕ್‌ಗಳು ಯರವ ಯುವ ಸಮೂಹಕ್ಕೆ ಸಾಲ ನೀಡಿ ಸಹಕರಿಸಬೇಕು, ಗ್ರಾಮ ಲೆಕ್ಕಾಧಿಕಾರಿಗಳ ನೇಮಕಾತಿ ಸಂದರ್ಭ ಜಿಲ್ಲೆಯವರಿಗೆ ಪ್ರಥಮ ಆದ್ಯತೆ ನೀಡಬೇಕು ಮತ್ತು ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿರುವ ಸರ್ಕಾರಿ ಜಮೀನಿನಲ್ಲಿ ಸ್ಥಳೀಯ ಯರವ ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದು ಧರಣಿ ಸತ್ಯಾಗ್ರಹದ ಸಂದರ್ಭ ಒತ್ತಾಯಿಸುವುದಾಗಿ ಮುತ್ತ ತಿಳಿಸಿದ್ದಾರೆ.