ಜಮೀನಿನಲ್ಲಿ ಉಳುಮೆ ಮಾಡಲು ಪ್ರಭಾವಿಗಳಿಂದ ಅಡ್ಡಿ ಆರೋಪ

| Published : Nov 07 2024, 12:03 AM IST

ಸಾರಾಂಶ

ವಿಧವೆಯಾಗಿರುವ ತಮ್ಮ ಮೇಲೆ ಮೇಲಿಂದ ಮೇಲೆ ಹಲ್ಲೆ ಮತ್ತು ಕಿರುಕುಳ ನಿಲ್ಲಬೇಕಾದರೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಬೇಕು. ಖುದ್ದು ಪರಿಶೀಲನೆ ನಡೆಸಿ ಜಮೀನಿನ ದಾಖಲಾತಿ ಮತ್ತೆ ಆರ್‌ಟಿಸಿ ದೊರಕಿಸಿಕೊಡಬೇಕು. ಸೂಕ್ತ ರಕ್ಷಣೆ ನೀಡಬೇಕು ಎಂಬುದಾಗಿ ಮರಿಯಮ್ಮ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ನ್ಯಾಯಾಲಯದ ಆದೇಶವಿದ್ದರೂ ತಮ್ಮ ಜಮೀನಿನಲ್ಲಿ ಉಳುಮೆ ಮಾಡಲು ಪ್ರಭಾವಿ ವ್ಯಕ್ತಿಗಳು ಅಡ್ಡಿಪಡಿಸುತ್ತಿದ್ದಾರೆ. ಈ ಬಗ್ಗೆ ಕಂದಾಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದಲಿತ ವಿಧವೆ ತನ್ನ ಪುತ್ರ ಮತ್ತು ಜಾನುವಾರುಗಳೊಂದಿಗೆ ತಾಲೂಕು ಕಚೇರಿ ಎದುರು ಬುಧವಾರ ಪ್ರತಿಭಟನಾ ಧರಣಿ ಆರಂಭಿಸಿದರು.

ವಿಧವೆ ಧರಣಿಗೆ ಅಡ್ಡಿಪಡಿಸಿದ ಕಂದಾಯ ಇಲಾಖೆ ಅಧಿಕಾರಿಗಳು, ಕಚೇರಿ ಆವರಣದಿಂದ ಆಕೆಯನ್ನು ಹೊರ ಹಾಕಿರುವ ಪ್ರಸಂಗವೂ ನಡೆಯಿತು. ಬಳಿಕ ತಾಲೂಕು ಕಚೇರಿ ಮುಂಭಾಗ ಧರಣಿ ಮುಂದುವರಿಸಿದ್ದಾರೆ.

ತಾಲೂಕಿನ ಆತಗೂರು ಹೋಬಳಿ ದುಂಡನಹಳ್ಳಿ ಸರ್ವೇ ನಂ.235ರಲ್ಲಿ 4.35 ಎಕರೆ ಜಮೀನು ಚನ್ನಪಟ್ಟಣ ತಾಲೂಕು ಬೇವೂರಿನವರಾದ ಮಂಡ್ಯ ಗ್ರಾಮದ ಮರಿಯಣ್ಣರಿಗೆ 199ರಲ್ಲಿ ಮಂಜೂರಾಗಿತ್ತು. ಮರಿಯಣ್ಣ ಸತ್ತ ನಂತರ ಆಕೆ ಪತ್ನಿ ಉಳುಮೆ ಮಾಡುತ್ತಿದ್ದರು.

ಉಳುಮೆಗೆ ಅಕ್ಕ ಪಕ್ಕದ ಜಮೀನಿನ ಮಾಲೀಕರಾದ ಚಾಮಲಾಪುರ ಗೋವಿಂದ, ತಿಮ್ಮೇಗೌಡ, ಮಾಯಿಗಯ್ಯ, ನಾರಾಯಣ ಎಂಬುವವರು ಉಳುಮೆಗೆ ಅಡ್ಡಿಪಡಿಸಿದ್ದಾರೆ ಎಂದು ಧರಣಿ ನಿರತ ಮರಿಯಮ್ಮ ಆರೋಪಿಸಿದ್ದಾರೆ.

ಈ ಸಂಬಂಧ ಆಕೆ ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯ, ಜಿಲ್ಲಾಧಿಕಾರಿ ನ್ಯಾಯಾಲಯ, ಉಪ ವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಜಮೀನು ವಿವಾದದ ಬಗ್ಗೆ ವಿಚಾರಣೆ ನಡೆದು ಅಂತಿಮವಾಗಿ ಮರಿಯಮ್ಮಳ ಪರವಾಗಿ ತೀರ್ಪು ಬಂದಿತ್ತು. ಆದರೂ ಪ್ರಭಾವಿ ವ್ಯಕ್ತಿಗಳು ಕಂದಾಯ ಇಲಾಖೆ ಅಧಿಕಾರಿಗಳೊಂದಿಗದೆ ಶಾಮೀಲಾಗಿ ಅಡ್ಡಿ ಪಡಿಸುತ್ತಿದ್ದರು. ಈ ಬಗ್ಗೆ ಕೆಸ್ತೂರು ಪೊಲೀಸರಿಗೆ ದೂರು ನೀಡಿದರೂ ಸಹ ಪೊಲೀಸರು ದೂರಿಗೆ ಕಿಂಚಿತ್ತು ಕಿಮ್ಮತ್ತು ನೀಡಿಲ್ಲ ಎಂದು ಆರೋಪಿಸಿದರು.

ವಿಧವೆಯಾಗಿರುವ ತಮ್ಮ ಮೇಲೆ ಮೇಲಿಂದ ಮೇಲೆ ಹಲ್ಲೆ ಮತ್ತು ಕಿರುಕುಳ ನಿಲ್ಲಬೇಕಾದರೆ ಜಿಲ್ಲಾಧಿಕಾರಿ ಮಧ್ಯ ಪ್ರವೇಶ ಮಾಡಬೇಕು. ಖುದ್ದು ಪರಿಶೀಲನೆ ನಡೆಸಿ ಜಮೀನಿನ ದಾಖಲಾತಿ ಮತ್ತೆ ಆರ್‌ಟಿಸಿ ದೊರಕಿಸಿಕೊಡಬೇಕು. ಸೂಕ್ತ ರಕ್ಷಣೆ ನೀಡಬೇಕು ಎಂಬುದಾಗಿ ಮರಿಯಮ್ಮ ಮನವಿ ಮಾಡಿದ್ದಾರೆ.