ಸಾರಾಂಶ
ಕನ್ನಡಪ್ರಭ ವಾರ್ತೆ ಮುಳಬಾಗಿಲು
ಜನ ಸಾಮಾನ್ಯರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ನರಸಿಂಹ ತೀರ್ಥ, ವಡ್ಡಹಳ್ಳಿ, ತಾಯಲೂರು, ನಂಗಲಿ ಮೇಲ್ಸೇತುವೆ ಅವೈಜ್ಞಾನಿಕ ಹಾಗೂ ಆಮೆ ಗತಿಯಲ್ಲಿ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಪರವಾನಗಿ ರದ್ದುಗೊಳಿಸಿ, ಕಳಪೆ ಕಾಮಗಾರಿ ವಿರುದ್ಧ ತನಿಖೆ ನಡೆಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿ, ಜ.೧೮ರಂದು ವಡ್ಡಹಳ್ಳಿ ಕಾಮಗಾರಿ ಸ್ಥಳದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಹೋರಾಟ ಮಾಡಲು ರೈತ ಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ಪದ್ಮಘಟ್ಟ ಗ್ರಾಮದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಗುತ್ತಿಗೆದಾರರ ಗುಲಾಮರಾಗಿ ಎನ್.ಎಚ್.ಎ.ಐ ಅಧಿಕಾರಿಗಳು ಕೆಲಸ ಮಾಡಿ ಅಮಾಯಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆಂದು ಭ್ರಷ್ಟ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ವಡ್ಡಹಳ್ಳಿ ಕಾಮಗಾರಿ ಸ್ಥಳದಲ್ಲಿ ಎಪಿಎಂಸಿ ಮಾರುಕಟ್ಟೆ ಇದ್ದು, ಪ್ರತಿದಿನ ನೂರಾರು ವಾಹನಗಳು ಮಾರುಕಟ್ಟೆಗೆ ಬರುತ್ತವೆ. ಆ ಸೂಕ್ಷ್ಮ ಸ್ಥಳದಲ್ಲಿಯೇ ಕಾಮಗಾರಿ ಅವೈಜ್ಞಾನಿಕವಾಗಿದ್ದು, ರಸ್ತೆಯನ್ನು ಡಾಂಬರೀಕರಣಗೊಳಿಸದೇ ಪ್ರತಿ ನಿತ್ಯ ಧೂಳಿನಿಂದ ಅಕ್ಕಪಕ್ಕದ ರೈತರು, ಅಂಗಡಿ ಮಾಲೀಕರು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ. ಅಧಿಕಾರಿಗಳು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ಕಿಡಿ ಕಾರಿದರು.ನರಸಿಂಹ ತೀರ್ಥ ಸೇರಿದಂತೆ ವಡ್ಡಹಳ್ಳಿ, ನಂಗಲಿ, ತಾಯಲೂರು ಮೇಲ್ಸೇತುವೆಯ ಅವೈಜ್ಞಾನಿಕ ಕಾಮಗಾರಿ ಹಾಗೂ ರಾಷ್ಟ್ರೀಯ ಹೆದ್ದಾರಿ ೭೫ರ ಕಾಮಗಾರಿಗೆ ಯಾವುದೇ ಮುಂಜಾಗ್ರತಾ ಕ್ರಮವಹಿಸದ ಗುತ್ತಿಗೆದಾರರ ವಿರುದ್ಧ ಕ್ರಮವಿಲ್ಲವೇಕೆ? ಹೆದ್ದಾರಿ ಕಾಮಗಾರಿಗೆ ಕಳಪೆ ಜಲ್ಲಿ ಮತ್ತು ಸಿ.ಸಿ ಕ್ಯಾಮೆರಾ, ಆ್ಯಂಬುಲೆನ್ಸ್ ವ್ಯವಸ್ಥೆಯಿಲ್ಲ, ನಾಮಫಲಕಗಳಿಲ್ಲ, ಒಟ್ಟಾರೆಯಾಗಿ ರಾತ್ರಿ ವೇಳೆ ಬೀದಿ ದೀಪಗಳಿಲ್ಲದೆ ವಾಹನ ಸವಾರರು ಗುತ್ತಿಗೆದಾರರು ಅವೈಜ್ಞಾನಿಕವಾಗಿ ತೆಗೆದಿರುವ ರಸ್ತೆ ಗುಂಡಿಗೆ ಬಿದ್ದು, ಆಸ್ಪತ್ರೆ ಸೇರುತ್ತಿದ್ದಾರೆ. ಇನ್ನೂ ಕಾಮಗಾರಿಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವ ಮುರಳಿಯವರಿಗೆ ಕರೆ ಮಾಡಿದರೆ ಕರೆಯನ್ನೂ ಸ್ವೀಕರಿಸುವುದಿಲ್ಲ. ಕೇಳಿದರೆ ನನಗೆ ಸಂಸದರು ಗೊತ್ತು, ಪ್ರಧಾನಮಂತ್ರಿಗಳು ಗೊತ್ತು ಎಂದು ದೌರ್ಜನ್ಯ ಮಾಡುತ್ತಾರೆಂದು ಆರೋಪ ಮಾಡಿದರು.
ಸಭೆಯಲ್ಲಿ ಯುವ ಮುಖಂಡ ಪದ್ಮಘಟ್ಟ ಧರ್ಮ, ತಾಲೂಕಾಧ್ಯಕ್ಷ ಯಲುವಳ್ಳಿ ಪ್ರಬಾಕರ್, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜೇಶ್, ಭಾಸ್ಕರ್, ಸುನಿಲ್‌ಕುಮಾರ್, ವಿಶ್ವ, ವಿಜಯ್‌ಪಾಲ್, ಶ್ರೀನಿವಾಸ್, ಜುಬೇರ್‌ಪಾಷ, ಅಂಬ್ಲಿಕಲ್ ಮಂಜುನಾಥ್, ಗಿರೀಶ್, ಹೆಬ್ಬಣಿ ಆನಂದರೆಡ್ಡಿ, ಧರ್ಮ, ನಂಗಲಿ ನಾಗೇಶ್, ಕೇಶವ, ವೇಣು, ರಾಮಮೂರ್ತಿ ಇದ್ದರು.