ಸಾರಾಂಶ
ಡಿವಿ ರಮೇಶ್ ಕುಮಾರ್
ಕನ್ನಡಪ್ರಭ ವಾರ್ತೆ ಚೇಳೂರುಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪ್ರಯತ್ನಗಳನ್ನು ನಡೆಸುತ್ತಿದ್ದರೆ ಸರ್ಕಾರದ ಬೊಕ್ಕಸಕ್ಕೆ ದೊಡ್ಡ ಮಟ್ಟದಲ್ಲಿ ಕನ್ನ ಬೀಳುವ ವಿದ್ಯಮಾನವೊಂದು ಚೇಳೂರಿನಲ್ಲಿ ನಡೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ವೈನ್‌ಶಾಪ್, ಬಾರ್‌ಗಳಲ್ಲಿ ಮದ್ಯದ ಖರೀದಿಯ ಬಿಲ್ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಅಬಕಾರಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದಾಗ ಈ ಸಂಗತಿ ತಿಳಿದು ಬಂದಿಲ್ಲ. ಪರಿಶೀಲನೆ ಮಾಡುವುದಾಗಿ ಹಾರಿಕೆ ಉತ್ತರ ನೀಡುತ್ತಿದ್ದಾರೆ.ನೂತನ ಚೇಳೂರು ತಾಲೂಕಿಗೆ ಸೇರಿದ ಪಟ್ಟನ ಸೇರಿದಂತೆ ಬುರುಡಗುಂಟೆ, ಏನಿಗದಲೆ, ಚೇಳೂರು, ನಲ್ಲಗುಟ್ಲಪಲ್ಲಿ, ಚಾಕವೇಲು ಗ್ರಾಮಗಳಲ್ಲಿ ಮದ್ಯದ ಅಂಗಡಿಗಳಿದ್ದು, ಯಾವ ಬಾರ್‌ಗಳಲ್ಲಿಯೂ ಬಿಲ್ ಕೊಡುತ್ತಿಲ್ಲ. ಬಿಲ್ ಕೇಳಿದರೆ ಮದ್ಯವನ್ನೇ ಕೊಡುತ್ತಿಲ್ಲ. ಒಂದು ವೇಳೆ ಪಟ್ಟು ಹಿಡಿದು ಕೇಳಿದರೆ ಮೆಷಿನ್ ಕೆಟ್ಟಿದೆ. ನಮ್ಮ ಬಳಿ ಬಿಲ್ ಕೊಡೋದಿಲ್ಲ ಎಂಬ ಸಬೂಬು ಕೇಳಿ ಬರುತ್ತಿವೆ.
ಈ ವಿಚಾರ ಸ್ಥಳೀಯ ಅಬಕಾರಿ ಇಲಾಖೆಗೆ ಗೊತ್ತಿದ್ದು, ಮೌನ ವಹಿಸಿದೆ. ಇನ್ನು ಅಬಕಾರಿ ಡಿಸಿ ಕೂಡ ವಿಷಯವೇ ಗೊತ್ತಿಲ್ಲದಂತೆ ಇರುವುದು ಯಾಕೆ ಎಂದು ಜನ ಚರ್ಚಿಸುತ್ತಿದ್ದಾರೆ.ಮದ್ಯಪ್ರಿಯರು ಮದ್ಯ ಖರೀದಿಸಿದ ಮೇಲೆ ಅಂಗಡಿ ಹೆಸರು ಇರುವ ಜಿಎಸ್ಟಿ ಬಿಲ್ ಕೊಡಬೇಕು, ಅಲ್ಲದೇ ಯಾವ ಮದ್ಯಕ್ಕೆ ಎಷ್ಟು ದರವೆಂದು ಬಿಲ್‌ನಲ್ಲಿ ನಮೂದಿಸಬೇಕು. ಅಬಕಾರಿ ಅಧಿಕಾರಿಗಳು ಕಾಲಕಾಲಕ್ಕೆ ತಕ್ಕಂತೆ ಇದನ್ನು ಪರಿಶೀಲಿಸಬೇಕು. ಆದರೆ ಅಬಕಾರಿ ಅಧಿಕಾರಿಗಳು ಮಾತ್ರ ಈ ಬಗ್ಗೆ ಗಮನಹರಿಸಿಲ್ಲ. ಇದು ಸಾರ್ವಜನಿಕರ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಎಲ್ಲ ಬಾರ್‌ಗಳಲ್ಲಿ ಇದೇ ಪರಿಸ್ಥಿತಿ ಇದ್ದು, ಎಂಆರ್‌ಪಿ ದರದ ಮೇಲೆ ಶೇ.30ರಷ್ಟು ಒಂದು ಬಾಟಲ್‌ಗೆ ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿ ಮದ್ಯಪ್ರಿಯರಿಗೆ ಮಹಾ ಮೋಸ ಮಾಡುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿದೆ. ಅಲ್ಲದೇ ಕುಡುಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಾರ್ ಮಾಲೀಕರಿಂದ ಅಬಕಾರಿ ಇಲಾಖೆಗೆ ಕಮಿಷನ್ ಹೋಗ್ತಿದ್ಯಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.ಹೆಚ್ಚಿನ ದರಕ್ಕೆ ಮದ್ಯ ಮಾರಾಟದ ಹಿಂದೆ ಅಬಕಾರಿ ಇಲಾಖೆ ಅಧಿಕಾರಿಗಳು ಶಾಮೀಲಾಗಿರುವ ಆರೋಪ ಕೂಡ ಇದ್ದು, ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಬಿಲ್ ಕೇಳಿದ್ರೆ ಮದ್ಯನೆ ಕೊಡಲ್ಲ ಎಂಬ ಆರೋಪ ಕೂಡ ಇದೆ.
ಬೇಕಾಬಿಟ್ಟಿ ದರ:ಸಾರ್ವಜನಿಕ ಸ್ಥಳದಲ್ಲಿ ಮದ್ಯದಂಗಡಿ ತೆರೆದಿರುವುದಲ್ಲದೆ ನಿಯಮಬಾಹಿರವಾಗಿ ಬೇಕಾಬಿಟ್ಟಿ ದರದಲ್ಲಿ ಮದ್ಯವನ್ನು ಮಾರಾಟ ಮಾಡಲಾಗುತ್ತಿದೆ. ಪ್ರತಿಯೊಂದು ಕಂಪನಿಯ ಮದ್ಯದ ಕ್ವಟರ್ ಬಾಟಲಿಗೆ ಕನಿಷ್ಠ 19ರಿಂದ 30 ರು. ಹೆಚ್ಚುವರಿ ದರ ವಿಧಿಸಲಾಗುತ್ತಿದೆ. ಇನ್ನು ಡಾಬಾಗಳಲ್ಲಿ ಇದು ದುಪ್ಪಟ್ಟಾಗಿದ್ದು, ತಾಲೂಕಿನ ಯಾವೊಂದು ಮದ್ಯದಂಗಡಿಯಲ್ಲೂ ದರ ಫಲಕ ಹಾಕಿಲ್ಲ.
ಈ ಕುರಿತು ಪ್ರತಿ ಮದ್ಯದಂಗಡಿಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವಂತೆ ಸರ್ಕಾರ ಇತ್ತೀಚೆಗೆ ಆದೇಶಿಸಿದೆ. ಬಹುತೇಕ ಅಂಗಡಿಗಳಲ್ಲಿ ಕ್ಯಾಮೆರಾ ಅಳವಡಿಸಿಲ್ಲ. ಕೆಲ ಅಂಗಡಿಗಳಲ್ಲಿ ಕ್ಯಾಮೆರಾ ಇದ್ದರೂ ಹೆಚ್ಚಿನ ದರದಲ್ಲೇ ಮಾರಾಟ ಮುಂದುವರಿದಿದೆ.ಹೆಚ್ಚುವರಿ ಹಣ ವಸೂಲಿ
ಸಿಎಲ್ 2 ಬಾರ್‌ಗಳಲ್ಲಿ ಡೇ ಅಂಡ್ ನೈಟ್ ಎಂಆರ್‌ಪಿ ದರಕ್ಕಿಂತ 30 ರಿಂದ 40 ರುಪಾಯಿ ಹೆಚ್ಚುವರಿ ಹಣ ತೆಗೆದುಕೊಳ್ಳುತ್ತಿದ್ದಾರೆ. ಸಿಎಲ್ 2 ಬಾರ್‌ಗಳಲ್ಲಿ ಎಂ.ಆರ್.ಪಿ ಬೆಲೆಗೆ ಮದ್ಯ ಮಾರಾಟ ಮಾಡಬೇಕು ಎಂಬ ಕಾನೂನೂ ಇದೆ. ಆದ್ರೆ ಅದಕ್ಕೆ ಯಾರೂ ಕೂಡ ಕ್ಯಾರೆ ಅಂತಿಲ್ಲ.ಈ ವಿಚಾರವಾಗಿ ಚಿಕ್ಕಬಳ್ಳಾಪುರ ಅಬಕಾರಿ ಡಿಸಿ ಅವರನ್ನು ಸಂಪರ್ಕಿಸಿದಾಗ ಇದು ನನ್ನ ಗಮನಕ್ಕೆ ಬಂದಿಲ್ಲ. ನಾಳೆ ಚೇಳೂರು ತಾಲೂಕಿನಾದ್ಯಂತ ನಮ್ಮ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರೀಶಿಲನೆ ನಡೆಸಲಾಗುವುದು. ಒಂದು ವೇಳೆ ಬಾರ್‌ನಲ್ಲಿ ಬಿಲ್ ಕೋಡದಿರುವುದು ಕಂಡು ಬಂದಲ್ಲಿ ಅವರ ಮೇಲೆ ಕಾನೂನು ರೀತಿಯಲ್ಲಿ ಕ್ರಮ ಕೈಗೋಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಕೋಟ್.......ಮದ್ಯಪ್ರಿಯರಿಯರಿಗೆ ಬಾರ್ ಮಾಲೀಕರು ಮಹಾ ಮೋಸ ಮಾಡುವ ಮೂಲಕ ವಸೂಲಿಗಿಳಿದಿದ್ದು, ಸಾಕಷ್ಟು ಹಣ ಗಳಿಸುತ್ತಿದ್ದು, ಬಿಲ್ ಕೊಡದೇ ಸರ್ಕಾರಕ್ಕೆ ತೆರಿಗೆ ಕಟ್ಟದೇ ಮೋಸ ಮಾಡುತ್ತಿದ್ದಾರೆ.
- ಹೆಸರು ಹೇಳಲು ಇಚ್ಚಿಸದ ವ್ಯಕ್ತಿ.