ದೊಡ್ಡಬಳ್ಳಾಪುರ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ವಿರುದ್ಧ ಮಾಡಿದ 17 ಆರೋಪಗಳಲ್ಲಿ 16 ಆರೋಪಗಳು ತನಿಖೆಯಲ್ಲಿ ಸಾಬೀತಾಗಿವೆ
ದೊಡ್ಡಬಳ್ಳಾಪುರ: ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಮಹೇಶ್ ಜೋಶಿ ವಿರುದ್ಧ ಮಾಡಿದ 17 ಆರೋಪಗಳಲ್ಲಿ 16 ಆರೋಪಗಳು ತನಿಖೆಯಲ್ಲಿ ಸಾಬೀತಾಗಿವೆ. ಮೂರೂವರೆ ವರ್ಷದ ಆಡಳಿತದಲ್ಲಿ ₹8 ಕೋಟಿ ದುರ್ಬಳಕೆಯಾಗಿದೆ ಎಂದು ಕನ್ನಡಪರ ಹೋರಾಟಗಾರ, ಹಿರಿಯ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಆರೋಪಿಸಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ''''''''ನಿಷ್ಕ್ರಿಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್'''''''' ವಿಚಾರವಾಗಿ ಚರ್ಚಿಸಲು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಹೇಶ್ ಜೋಷಿಗೆ ಶಿಕ್ಷೆಯಾಗಿ ಲೂಟಿ ಮಾಡಿದ ಹಣ ವಸೂಲಿಯಾಗಬೇಕು. ಕಸಾಪ ಕಳಂಕರಹಿತವಾಗಿ ಮೊದಲಿನ ಸ್ಥಿತಿಗೆ ಬರಬೇಕಿದೆ. ಕಸಾಪ 6 ಕೋಟಿ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ ಸ್ವಾಯತ್ತ ಸಂಸ್ಥೆಗೆ 112 ವರ್ಷ ಇತಿಹಾಸವಿದೆ. ಆದರೆ ಇಂತಹ ಪರಿಷತ್ತಿನಲ್ಲಿ ಅಧಿಕಾರ ಹಿಡಿದವರು, ಭ್ರಷ್ಟಾಚಾರ ನಡೆಸಿ, ಸಂಸ್ಥೆಗೆ ಕಳಂಕ ತಂದಿದ್ದಾರೆ ಎಂದು ದೂರಿದರು.ಕನ್ನಡದ ಕೆಲಸ ಮಾಡಿದ್ದರೆ ನಾವು ಯಾವುದೇ ಚಕಾರ ಎತ್ತುತ್ತಿರಲಿಲ್ಲ. ಆದರೆ ಪರಿಷತ್ತನ್ನು ಅಧೋಗತಿಗೆ ಇಳಿಸಿದವರ ಮೇಲೆ ನಮ್ಮ ಹೋರಾಟ ನಿರಂತರ ನಡೆಯುತ್ತಿದೆ. ಹಿಂದಿನ ಅಧ್ಯಕ್ಷ ಜೋಶಿ, ಹಾವೇರಿ ಸಮ್ಮೇಳನದಲ್ಲಿ ವಿವಾದ ಮಾಡಿಕೊಂಡರು, ಮಂಡ್ಯ ಸಮ್ಮೇಳನದಲ್ಲಿ ಮಹಿಳೆಗೆ ಅಪಮಾನ ಮಾಡಿ, ವಿವಾದಕ್ಕೀಡಾದರು. ಸಮ್ಮೇಳನದ ಲೆಕ್ಕಪತ್ರಗಳನ್ನು ನೀಡಲಿಲ್ಲ ಎಂದು ದೂರಿದರು.
ಲೇಖಕಿ ವಸುಂಧರಾ ಭೂಪತಿ ಮಾತನಾಡಿ, ಹಿಂದಿನ ಅಧ್ಯಕ್ಷರು ಮಾಡಿರುವ ತಪ್ಪಿಗೆ ಶಿಕ್ಷೆಯಾಗಬೇಕು. ಪರಿಷತ್ ಬರೀ ಸಮ್ಮೇಳನ, ದತ್ತಿ ಕಾರ್ಯಕ್ರಮಗಳಿಗೆ ಸೀಮಿತವಾಗದೆ ಕಾವೇರಿ ಹೋರಾಟ, ಕನ್ನಡ ಶಾಲೆಗಳ ಉಳಿವು, ಮೊದಲಾಗಿ ನಾಡುನುಡಿಯ ಹಿತಕ್ಕೆ ದಕ್ಕೆಯಾದಾಗ ದನಿ ಎತ್ತಬೇಕು. ಪರಿಷತ್ತು ಶುದ್ದೀಕರಣವಾಗಬೇಕು. ಪರಿಷತ್ತಿಗೆ ಹೊಸ ಕಾಯಕಲ್ಪ ನೀಡಬೇಕಿದೆ. ನಾಶವಾಗುತ್ತಿರುವ ಪುಸ್ತಕ ಸಂಸ್ಕೃತಿ, ಕನ್ನಡ ನುಡಿ ಪ್ರಕಟಣೆ ಮಾಡಬೇಕಿದೆ. ಜಾತಿ, ಮತ, ಪಂಥ ಮೀರಿ ಪರಿಷತ್ತನ್ನು ಮುನ್ನಡೆಸುವ ಗುರುತರ ಹೊಣೆಯನ್ನು ನಿಭಾಯಿಸಲು ನನ್ನನ್ನು ಅಭ್ಯರ್ಥಿಯನ್ನಾಗಿ ಪ್ರಗತಿಪರರು, ಸಾಹಿತಿಗಳು ಮೊದಲಾದವರು ಆಯ್ಕೆ ಮಾಡಿದ್ದು, ಮತದಾರರು ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಾಹಿತ್ಯ ಸಮ್ಮೇಳನಗಳು ಅರ್ಥ ಕಳೆದುಕೊಳ್ಳುತ್ತಿವೆ. ಕಸಾಪ ದ್ವಾರದಲ್ಲಿದ್ದ, ''''''''ಮನುಷ್ಯ ಜಾತಿ ತಾನೊಂದೆ ವಲಂ'''''''' ಪಂಪನ ಸಾಲುಗಳನ್ನು ಉಳ್ಳ ಕಮಾನನ್ನು ತೆಗೆಸಿಹಾಕಿಸಿದ್ದರು. ಪಂಪ ಮಹಾಕವಿ ಹೆಸರನ್ನು ಬದಲಾಯಿಸಲು ಹುನ್ನಾರ ನಡೆಸಿ, ಸಾಹಿತ್ಯಕ್ಕೆ ದ್ರೋಹ ಮಾಡಿದರು. ಇಂತಹ ಭ್ರಷ್ಟ ವ್ಯವಸ್ಥೆಯನ್ನು ಸಾಹಿತ್ಯ ಪರಿಷತ್ ಹಿಂದೆಂದೂ ಕಂಡಿರಲಿಲ್ಲ ಎಂದರು.
ರಾಜಕೀಯ ರಹಿತವಾಗಿ ಪರಿಷತ್ತನ್ನು ಮುನ್ನಡೆಸಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಆಶಯಗಳನ್ನು ಸಾಕಾರಗೊಳಿಸ. ಬೇಕಿದೆ. ಹೀಗಾಗಿ ಪರಿಷತ್ ಮುನ್ನಡೆಸಲು ಅಭ್ಯರ್ಥಿಯಾಗಿ ಪ್ರಗತಿಪರರು, ಸಾಹಿತಿಗಳು ಮೊದಲಾದವರು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಆಯ್ಕೆ ಮಾಡಿದ್ದು, ಬೆಂಬಲಿಸುವಂತೆ ಮನವಿ ಮಾಡಿದರು.ಸಭೆಯಲ್ಲಿ ಸಾಹಿತಿಗಳಾದ ಆರ್.ಜಿ.ಹಳ್ಳಿ ನಾಗರಾಜ್, ಪ್ರೊ.ಎಂ.ಜಿ.ಚಂದ್ರಶೇಖರಯ್ಯ, ಎ.ಓ.ಆವಲಮೂರ್ತಿ, ಕನ್ನಡಪರ ಹೋರಾಟಗಾರರಾದ ಟಿ.ಎನ್.ಪ್ರಭುದೇವ್, ಸಂಜೀವ್ ನಾಯಕ್, ತಾ.ಕಸಾಪ ಅಧ್ಯಕ್ಷ ಪಿ.ಗೋವಿಂದರಾಜು, ಕನ್ನಡ ಜಾಗೃತ ಪರಿಷತ್ ಅಧ್ಯಕ್ಷ ಕೆ.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಡಿ.ಪಿ. ಆಂಜನೇಯ, ಮುಖಂಡರಾದ ಪ್ರಸನ್ನ, ಹನುಮಂತರಾಯಪ್ಪ, ಹನುಮೇಗೌಡ, ಜಿ.ಸತ್ಯನಾರಾಯಣ, ಗುರುರಾಜಪ್ಪ, ಸಾ.ಲ.ಕಮಲನಾಥ್ ಇತರರು ಭಾಗವಹಿಸಿದ್ದರು.
ಕೋಟ್...ಹಿಂದಿನ ಅಧ್ಯಕ್ಷ ಮಹೇಶ್ ಜೋಶಿ ಸರ್ವಾಧಿಕಾರಿ ಧೋರಣೆಯಿಂದ ಕನ್ನಡ ಪರ ಯಾವುದೇ ಗಮನಾರ್ಹ ಕಾರ್ಯಕ್ರಮಗಳನ್ನು ಮಾಡಿಲ್ಲ. ತನಿಖೆಗೆ ಆಗ್ರಹಿಸಿದ್ದ ನಮ್ಮ ಮೇಲೆ ನೋಟಿಸ್ ನೀಡುವುದನ್ನೇ ಕಾಯಕ ಮಾಡಿಕೊಂಡಿದ್ದರು. ಇದಕ್ಕಾಗಿ ವಕೀಲರ ಶುಲ್ಕವಾಗಿ ಪರಿಷತ್ತಿನ ₹29 ಲಕ್ಷ ಖರ್ಚು ಮಾಡಿದ್ದಾರೆ. ಈಗ ತನಿಖಾಧಿಕಾರಿಗಳು ಆರೋಪಗಳನ್ನು ಸಾಬೀತು ಮಾಡಿ, ಜೋಶಿಯವರ ಸದಸ್ಯತ್ವ ಸಹ ಅಮಾನತ್ತಿನಲ್ಲಿರಿಸಿದ್ದಾರೆ.
-ಜಾಣಗೆರೆ ವೆಂಕಟರಾಮಯ್ಯ, ಸಾಹಿತಿ, ಕನ್ನಡಪರ ಹೋರಾಟಗಾರ18ಕೆಡಿಬಿಪಿ1-
ದೊಡ್ಡಬಳ್ಳಾಪುರದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ''''''''ನಿಷ್ಕ್ರಿಯ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್'''''''' ವಿಚಾರವಾಗಿ ಚರ್ಚಿಸಲು ನಡೆದ ಸಭೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ, ಎಸ್.ಜಿ.ಸಿದ್ದರಾಮಯ್ಯ, ವಸುಂಧರಾ ಭೂಪತಿ ಮತ್ತಿತರರು ಭಾಗವಹಿಸಿದ್ದರು.