ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ರಂಗಾಪುರ ಗ್ರಾಮ ಪಂಚಾಯಿತಿ ಮುಂಭಾಗ ಕೆಲ ಸದಸ್ಯರು ಸೇರಿಕೊಂಡು ಗ್ರಾಪಂ ಅಧ್ಯಕ್ಷರು ಹಾಗೂ ಪಿಡಿಒ ಮೇಲೆ ಆರೋಪ ಹೊರಿಸಿ ಪ್ರತಿಭಟನೆ ನಡೆಸಿರುವುದು ನಿರಾಧಾರವಾಗಿದ್ದು, ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅವ್ಯವಹಾರ, ಕಳ್ಳತನ ನಡೆದಿಲ್ಲ ಎಂದು ತಾಲೂಕಿನ ರಂಗಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿಶ್ವನಾಥ್ ಸ್ಪಷ್ಟನೆ ನೀಡಿದರು.ನಗರದ ಕಲ್ಪತರು ಗ್ರ್ಯಾಂಡ್‌ನಲ್ಲಿ ಶನಿವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಂಗಾಪುರ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅಕ್ರಮ ಹಾಗೂ ಕಳ್ಳತನ ನಡೆದಿಲ್ಲ. ಸರ್ಕಾರದ ನಿಯಮದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಬಾರದು ಎನ್ನುವ ಕಾರಣಕ್ಕೆ ನಿರುಪಯುಕ್ತವಾಗಿ ಉಳಿದಿದ್ದ ಬೋರ್‌ವೆಲ್‌ನಿಂದ ಮೋಟರ್ ತೆಗೆದು ಮೀಸಲು ಇಡುವ ಉದ್ದೇಶದಿಂದ ಪಂಚಾಯಿತಿ ವಿದ್ಯುತ್ ಗುತ್ತಿಗೆದಾರನಿಂದ ಮೋಟರ್ ಎತ್ತಿಸಲಾಗಿತ್ತು. ಆದರೆ ಕೆಲವರು ಆಧಾರ ರಹಿತವಾಗಿ ಇದನ್ನೇ ಸುಳ್ಳು ಆರೋಪ ಮಾಡಿ ಪ್ರತಿಭಟನೆ ಮಾಡಿರುವುದು ಸರಿಯಲ್ಲ. ನಾವು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ಯಾವುದೇ ಕಳ್ಳತನ ಮಾಡುವ ಅವಶ್ಯಕತೆ ನಮಗೆ ಇಲ್ಲ ಅವರು ಎಂದು ಸ್ಪಷ್ಟಪಡಿಸಿದರು.
ಗ್ರಾಮಸ್ಥರಾದ ಸುಗುಣೇಂದ್ರ ಪಾಟೀಲ್ ಮಾತನಾಡಿ, ನಮ್ಮ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕಳ್ಳತನ, ಅಧಿಕಾರ ದುರುಪಯೋಗ ನಡೆದಿಲ್ಲ. ಸುಳ್ಳು ಪ್ರತಿಭಟನೆ ನಡೆಸಿ ದೂರು ನೀಡಿರುವ ಬಗ್ಗೆ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ತನಿಖೆ ನಡೆಸುತ್ತಿದ್ದು, ಸತ್ಯಾಂಶ ಹೊರಬರಲಿದೆ. ರಾಜಕೀಯ ಪ್ರೇರಿತವಾಗಿ ಪ್ರತಿಭಟನೆ ನಡೆಸಿರುವುದು ಸರಿಯಲ್ಲ ಎಂದರು.ಸುದ್ದಿಗೋಷ್ಠಿಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಆನಂದಪ್ಪ, ಮಮತ, ಬಿಂದುಶ್ರೀ, ಇಂದ್ರಾಣಿ ದಯಾನಂದ್, ಮಾಜಿ ಅಧ್ಯಕ್ಷರಾದ ರೂಪ, ಮುಖಂಡರಾದ ಹರೀಶ್, ವಿಜಯ್ ಕುಮಾರ್, ವಿಎಸ್‌ಎಸ್‌ಎನ್ ಅಧ್ಯಕ್ಷ ಕೆರೆಗೋಡಿ ದೇವರಾಜು, ಮತ್ತಿತರರಿದ್ದರು.