ಸೈಯದ್ ಬೆಳಗಾವಿ ಎಂಬುವರ ಬದಲು ಬೇರೆಯವರು ಮತ ಚಲಾಯಿಸಿದ್ದಾರೆ. ಬಿಜೆಪಿ ನಕಲಿ ಮತದಾನ ಮಾಡಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಹುಬ್ಬಳ್ಳಿ:
ಇಲ್ಲಿಯ ಕೇಶ್ವಾಪುರದ ಫಾತಿಮಾ ಪ್ರೌಢಶಾಲೆಯಲ್ಲಿನ ಮತಗಟ್ಟೆ 36ರಲ್ಲಿ ಕೇಶ್ವಾಪುರ ನಿವಾಸಿ ಸೈಯದ್ ಬೆಳಗಾವಿ ಎಂಬುವರ ಬದಲು ಬೇರೆಯವರು ಮತ ಚಲಾಯಿಸಿದ್ದಾರೆ. ಬಿಜೆಪಿ ನಕಲಿ ಮತದಾನ ಮಾಡಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು, ಮತಗಟ್ಟೆ ಕೇಂದ್ರಕ್ಕೆ ಶುಕ್ರವಾರ ಮಧ್ಯಾಹ್ನ ಮುತ್ತಿಗೆ ಹಾಕಲು ಯತ್ನಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದ್ದಾರೆ.ಇಲ್ಲಿನ ಕೇಶ್ವಾಪುರ ಸರ್ವೋದಯ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಬಿಜೆಪಿ ವಿರುದ್ಧ ಹಾಗೂ ಓಟ್ ಚೋರ್, ಗದ್ದಿ ಚೋಡ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಸೈಯದ್ ಬೆಳಗಾವಿ, ಇಲ್ಲಿಯ ಕೇಶ್ವಾಪುರ ಮತಗಟ್ಟೆ ೩೬ರಲ್ಲಿ ಮತ ಹಾಕಲು ಹೋದಾಗ ನನ್ನ ಮತವನ್ನು ಬೇರೆಯವರು ಹಾಕಿದ್ದಾರೆ. ಈ ಮೂಲಕ ನನ್ನ ಮತದಾನ ಹಕ್ಕು ಕಸಿದುಕೊಂಡಿದ್ದಾರೆ. ನಕಲಿ ಮತದಾನ ಮಾಡಿಸಲಾಗುತ್ತಿದೆ ಎಂದು ಆರೋಪಿಸಿದರು.ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಮಾತನಾಡಿ, ಬಿಜೆಪಿಗರು ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ನಕಲಿ ಮತದಾನ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದರು.
ಪಾಲಿಕೆ ಸದಸ್ಯರಾದ ಪ್ರಕಾಶ ಕುರಹಟ್ಟಿ, ಸುವರ್ಣ ಕಲ್ಲಕುಂಟ್ಲಾ, ಅಬ್ದುಲ್ ಗನಿ, ಸೆಂಥೀಲ್ ಕುಮಾರ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿದ್ದರು. ಈ ವೇಳೆ ಮತಗಟ್ಟೆ ಕೇಂದ್ರಕ್ಕೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ವಶಕ್ಕೆ ಪಡೆದರು.ನಕಲಿ ಮತದಾನ ಆಗಿಲ್ಲ: ಘಾಳಿಈ ನಡುವೆ ಮತಗಟ್ಟೆಯಲ್ಲಿ ಸೈಯದ್ ಎಂಬ ಇನ್ನೊಬ್ಬರು ಮತದಾನ ಮಾಡಿದ್ದರಂತೆ. ಇವರೇ ಮತದಾನ ಮಾಡಿದ್ದಾರೆ ಎಂಬ ಗೊಂದಲ ಉಂಟಾಗಿತ್ತು. ಪರಿಶೀಲಿಸೋಣ ಸ್ವಲ್ಪ ಕಾಯಿರಿ ಎಂದು ತಿಳಿಸಿದರೂ ಅವರು ನಿಲ್ಲಲಿಲ್ಲ. ಆದರೆ, ಬೇರೆಯವರು ಮತದಾನ ಮಾಡಿರಲಿಲ್ಲ. ಸಂಜೆ ಆಗಮಿಸಿ ಸೈಯದ್ ಬೆಳಗಾವಿ ಅವರು ಮತದಾನ ಮಾಡಿದ್ದಾರೆ ಎಂದು ಪಾಲಿಕೆ ಆಯುಕ್ತರೂ ಆಗಿರುವ ಮತಗಟ್ಟೆ ಚುನಾವಣಾಧಿಕಾರಿ ಡಾ. ರುದ್ರೇಶ ಘಾಳಿ ತಿಳಿಸಿದರು.