ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಫಾರಂ 7 ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಕೊಪ್ಪಳ: ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಅಳಿಸುವ ಉದ್ದೇಶದಿಂದ ಫಾರಂ 7 ಅರ್ಜಿಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳ ಕುರಿತು ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಆಗ್ರಹಿಸಿದೆ.
ಜಿಲ್ಲಾಡಳಿತ ಭವನ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿದ ಪಕ್ಷದ ಮುಖಂಡರು, ಕೆಲವು ಕ್ಷೇತ್ರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಫಾರಂ 7 ಅರ್ಜಿಗಳು ಸಲ್ಲಿಕೆಯಾಗಿರುವುದು, ಒಂದೇ ಮಾದರಿಯ ಮಾಹಿತಿಯೊಂದಿಗೆ ಸಾಮೂಹಿಕ ಅರ್ಜಿಗಳು ಸಲ್ಲಿಕೆಯಾಗಿರುವುದು ಹಾಗೂ ಮತದಾರರ ವೈಯಕ್ತಿಕ ವಿವರಗಳನ್ನು ಅವರ ಅರಿವು ಅಥವಾ ಅನುಮತಿಯಿಲ್ಲದೆ ಬಳಸಲಾಗಿದೆ ಎಂಬ ದೂರುಗಳು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿವೆ ಎಂದರು.ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳು ಹಾಗೂ ಬಿಜೆಪಿಯೇತರ ಮತದಾರರನ್ನು ಗುರಿಯಾಗಿಸಿಕೊಂಡು ಸಂಘಟಿತವಾಗಿ ಹೆಸರುಗಳನ್ನು ತೆಗೆದುಹಾಕುವ ಪ್ರಯತ್ನ ನಡೆದಿದೆಯೇ ಎಂಬುದನ್ನೂ ತನಿಖೆ ವ್ಯಾಪ್ತಿಗೆ ತರಬೇಕು. ಇದರ ಹಿಂದೆ ಯಾವುದೇ ರಾಜಕೀಯ ಜಾಲ, ಸಂಘಟಿತ ಒಳಸಂಚು ಅಥವಾ ಧರ್ಮದ್ವೇಷದ ಉದ್ದೇಶವಿದೆಯೇ ಎಂಬುದನ್ನು ಪತ್ತೆಹಚ್ಚಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ತಕ್ಷಣ ವಿಶೇಷ ತನಿಖಾ ತಂಡ ರಚಿಸಿ ರಾಜ್ಯಾದ್ಯಂತ ತನಿಖೆ ನಡೆಸಬೇಕು. ದೊಡ್ಡ ಪ್ರಮಾಣದಲ್ಲಿ ಫಾರಂ 7 ಸಲ್ಲಿಸಿದವರು, ಅರ್ಜಿಗಳ ಹಿಂದೆ ಕಾರ್ಯನಿರ್ವಹಿಸಿದವರ ಸಂಪರ್ಕ, ಮತದಾರರ ಎಪಿಕ್ ಸಂಖ್ಯೆ ಹಾಗೂ ವಿಳಾಸದ ಮಾಹಿತಿ ಹೇಗೆ ಲಭ್ಯವಾಯಿತು, ಮತದಾರರ ಅನುಮತಿಯಿಲ್ಲದೆ ಅರ್ಜಿ ಸಲ್ಲಿಸಲಾಗಿದೆಯೇ, ನಕಲಿ ದಾಖಲೆ ಬಳಕೆಯಾಗಿದೆಯೇ ಹಾಗೂ ಯಾವುದೇ ಸಂಘಟಿತ ಜಾಲದ ಮೂಲಕ ಅರ್ಜಿಗಳು ಸಲ್ಲಿಕೆಯಾಗಿವೆಯೇ ಎಂಬುದನ್ನು ಪರಿಶೀಲಿಸಬೇಕು ಎಂದರು.ಫಾರಂ 7 ಆಧರಿಸಿ ಅರ್ಹ ಮತದಾರರ ಹೆಸರನ್ನು ಆತುರದಲ್ಲಿ ಅಳಿಸಬಾರದು. ಪ್ರತಿಯೊಂದು ಆಕ್ಷೇಪಣೆಯನ್ನೂ ಸಂಬಂಧಪಟ್ಟ ಮತದಾರರಿಗೆ ತಿಳಿಸಿ, ತಮ್ಮ ಹಕ್ಕನ್ನು ಸಮರ್ಥಿಸಿಕೊಳ್ಳಲು ಸಮರ್ಪಕ ನೋಟಿಸ್ ಹಾಗೂ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ಸುಳ್ಳು ಮಾಹಿತಿ, ನಕಲಿ ದಾಖಲೆ ಅಥವಾ ಉದ್ದೇಶಪೂರ್ವಕವಾಗಿ ಅರ್ಹ ಮತದಾರರ ಹೆಸರು ಅಳಿಸಲು ಪ್ರಯತ್ನಿಸಿರುವುದು ತನಿಖೆಯಲ್ಲಿ ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು.ಜಿಲ್ಲಾಧ್ಯಕ್ಷ ಯೂಸುಫ್ ಮೋದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸೈಯದ್ ಸಾಖೀಬ್, ನಿಜಾಮುದ್ದೀನ್ ಮಾಳೆಕೊಪ್ಪ, ಕೊಪ್ಪಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಲೀಂ ಖಾದ್ರಿ, ಕಾರ್ಯದರ್ಶಿ ಮೊಹಮ್ಮದ್ ಸಾದಿಕ್ ಉಪಸ್ಥಿತರಿದ್ದರು.